Site icon Vistara News

Karnataka Election : ಬಿಜೆಪಿಗೆ 110 ಗ್ಯಾರಂಟಿ, ಉಳಿದ ಸೀಟಿಗೆ ಪಕ್ಷೇತರರ ಬೇಟೆಗೆ ಸೂಚನೆ

BJP leader at presidency hotel in Bangalore

BJP leader at presidency hotel in Bangalore

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಮತ ಎಣಿಕೆ ಮೇ 13ರಂದು ನಡೆಯಲಿದ್ದು, ಎಲ್ಲರ ಕಣ್ಣು ಕೌಂಟಿಂಗ್‌ ಸೆಂಟರ್‌ಗಳತ್ತ (Vote counting center) ನೆಟ್ಟಿದೆ. ಇದರ ನಡುವೆ, ಅಧಿಕಾರಾರೂಢ ಬಿಜೆಪಿ ಅತ್ಯಂತ ನಿರಾಳವಾಗಿರುವಂತೆ ಕಾಣುತ್ತಿದೆ. ಮತದಾನೋತ್ತರ ಸಮೀಕ್ಷೆಗಳ ಬಗ್ಗೆ ಯಾವುದೇ ರೀತಿಯಲ್ಲೂ ತಲೆಕೆಡಿಸಿಕೊಳ್ಳದ ನಾಯಕರು ಹೋಟೆಲ್‌ನಲ್ಲಿ ಮಸಾಲೆ ದೋಸೆ (Masale dose) ತಿಂದುಕೊಂಡು ಆರಾಮವಾಗಿದ್ದಾರೆ!

ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಯಾವ ಕಾರಣಕ್ಕೂ ತಲೆ ಬಿಸಿ ಮಾಡಿಕೊಳ್ಳಬೇಡಿ, ನಮಗೆ ಬಹುಮತ ಬರುವುದು ಗ್ಯಾರಂಟಿ ಎಂದು ಕೇಂದ್ರ ನಾಯಕರು ಹೇಳಿದ್ದಾರೆ ಎನ್ನಲಾಗುತ್ತಿದೆ. ರಾಜ್ಯ ನಾಯಕರಲ್ಲೂ ಅದೇ ರೀತಿಯ ವಿಶ್ವಾಸ ಇರುವಂತೆ ಕಾಣುತ್ತಿದೆ. ಎಷ್ಟೇ ಕಡಿಮೆ ಎಂದರೂ ಬಿಜೆಪಿಗೆ ಈ ಬಾರಿ 110 ಸೀಟು ಬರುವುದು ಖಾತ್ರಿ ಎನ್ನುವುದು ಪಕ್ಷದೊಳಗಿನ ಆಂತರಿಕ ಮಾಹಿತಿ. ಹೀಗಾಗಿ ಉಳಿದ ಕೆಲವು ಸ್ಥಾನಗಳ ಬಗ್ಗೆ ಕೊನೆಯ ಹಂತದಲ್ಲಿ ಚಿಂತೆ ಮಾಡಬಹುದು. ಹೇಗಿದ್ದರೂ ಕನಿಷ್ಠ ಏಳೆಂಟು ಪಕ್ಷೇತರರು ಗೆಲ್ಲುವ ಸಾಧ್ಯತೆಗಳು ಇರುವುದರಿಂದ ಅವರ ಬೆಂಬಲ ಪಡೆಯಬಹುದು ಎಂಬ ಅಭಿಪ್ರಾಯವನ್ನು ಪಕ್ಷ ಹೊಂದಿದಂತಿದೆ.

ಬಿಎಸ್‌ವೈ ನಿವಾಸದಲ್ಲಿ ನಡೆದಿದೆ ಮಹತ್ವದ ಚರ್ಚೆ

ಶನಿವಾರ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಅವರ ಕಾವೇರಿ ನಿವಾಸ ಬಿಜೆಪಿ ಚಟುವಟಿಕೆಗಳ ಕೇಂದ್ರ ಬಿಂದುವಾಗಿತ್ತು. ಸಿಎಂ ಬೊಮ್ಮಾಯಿ, ಸಚಿವರಾದ ಮುರುಗೇಶ್ ನಿರಾಣಿ, ಬೈರತಿ ಬಸವರಾಜ, ಲೆಹರ್ ಸಿಂಗ್ ಭಾಗಿಯಾಗಿದ್ದರು. ಸಚಿವ ಆರ್‌. ಅಶೋಕ್‌ ಕೂಡಾ ಆಗಮಿಸಿದ್ದರು. ಉಳಿದಂತೆ ಯಾವ ದೊಡ್ಡ ನಾಯಕರೂ ಗಂಭೀರವಾಗಿ ಚರ್ಚೆ ನಡೆಸಿದಂತೆ ಕಾಣಲಿಲ್ಲ.

ಚರ್ಚೆಯಲ್ಲಿ ಭಾಗವಹಿಸಿದ್ದ ನಾಯಕರು ಕೂಡಾ ಮತ ಎಣಿಕೆಯ ಬಳಿಕದ ಸನ್ನಿವೇಶಗಳ ಬಗ್ಗೆ ಚರ್ಚೆ ನಡೆಸಿದರೇ ಹೊರತು ಆತಂಕ ಪ್ರದರ್ಶಿಸಿದಂತೆ ಕಾಣಲಿಲ್ಲ.

ಬಿಎಸ್‌ವೈ ನಿವಾಸಕ್ಕೆ ಹೋಗುವ ಮುನ್ನ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಸಚಿವ ಮುರುಗೇಶ್‌ ನಿರಾಣಿ ಅವರು, ʻʻಎಕ್ಸಿಟ್ ಪೊಲ್ ಸತ್ಯಕ್ಕೆ ದೂರವಾಗಿದೆ. 108 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. 35 ಕ್ಷೇತ್ರಗಳಲ್ಲಿ 50:50 ಚಾನ್ಸ್ ಇದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತದೆ. ನಾವು ಗೆಲ್ಲುವ ಕ್ಷೇತ್ರಗಳ ಪಟ್ಟಿ ನೀಡುತ್ತೇವೆ. ತಾಕತ್ತಿದ್ದರೆ ಕಾಂಗ್ರೆಸ್‌ ನೀಡಲಿʼʼ ಎಂದು ಸವಾಲು ಹಾಕಿದರು. ಬಿಎಸ್‌ವೈ ಅವರಂತೂ ಕಳೆದ ಕೆಲವು ದಿನಗಳಿಂದ 115 ಸ್ಥಾನ ಗ್ಯಾರಂಟಿ ಎನ್ನುತ್ತಿದ್ದಾರೆ.

ಈ ನಡುವೆ, ಒಂದು ವೇಳೆ ಕೆಲವು ಸ್ಥಾನಗಳು ಕೊರತೆ ಬಿದ್ದರೆ ಅದನ್ನು ತುಂಬಿಕೊಳ್ಳುವ ನಿಟ್ಟಿನಲ್ಲಿ ಪಕ್ಷೇತರರ ಜತೆಗೆ ಚರ್ಚೆ ನಡೆಸುವಂತೆ ಹೈಕಮಾಂಡ್‌ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಹಾಗಾಗಿ ಸ್ವತಃ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಈ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ.

ಆಪರೇಷನ್‌ ಕಮಲಕ್ಕೂ ಸಿದ್ಧ

ಒಂದು ಕಡೆ ಬಹುಮತದ ಜಪವಿದ್ದರೆ ಅಗತ್ಯಬಿದ್ದರೆ ಅಪರೇಷನ್‌ ನಡೆಸುವ ಸಾಧ್ಯತೆಯನ್ನೂ ಬಿಜೆಪಿ ಬಿಚ್ಚಿಟ್ಟಿದೆ. ಹಿರಿಯ ಬಿಜೆಪಿ ನಾಯಕ ಆರ್‌. ಅಶೋಕ್‌ ಅವರು ಈ ಸಂಬಂಧ ಸುಳಿವನ್ನು ನೀಡಿದ್ದಾರೆ. ಕಳೆದ ಬಾರಿ ಆಪರೇಷನ್‌ ನಡೆಸಿದ್ದ ತಂಡದಲ್ಲಿ ಸಿ.ಪಿ. ಯೋಗೇಶ್ವರ್‌ ಮತ್ತು ಇತರರೇ ಈ ಬಾರಿಯೂ ಕಾರ್ಯತಂತ್ರ ಮಾಡುವ ಸಾಧ್ಯತೆ ಇದೆ.

ಇಷ್ಟೆಲ್ಲದರ ನಡುವೆ ಬಿಜೆಪಿ ಎಷ್ಟು ನಿರಾಳವಾಗಿದೆ ಎಂದರೆ, ಒಂದು ಹಂತದಲ್ಲಿ ಮಾಜಿ ಸಿಎಂ ಬಿಎಸ್‌ವೈ ಮತ್ತು ಸಚಿವ ಅಶೋಕ್‌ ಅವರು ತರಾತುರಿಯಲ್ಲಿ ಕಾರಿನಲ್ಲಿ ಕುಳಿತು ಹೊರಟರು. ಆಗ ಇದೊಂದು ಗೌಪ್ಯ ಸಭೆ, ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಕೊನೆಗೆ ನೋಡಿದರೆ ಅವರು ಹೋಗಿದ್ದು ಪ್ರೆಸಿಡೆನ್ಸಿ ಹೋಟೆಲ್‌ಗೆ ಮಸಾಲೆ ದೋಸೆ ತಿನ್ನಲು!

ಇದನ್ನೂ ಓದಿ: Karnataka Election 2023 : ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ; ಸಿಎಂ ಗಾದಿಗೆ 50:50 ಸೂತ್ರ

Exit mobile version