Site icon Vistara News

Karnataka Election: ಜನರತ್ತ ಹಣ ಎಸೆದ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ದೂರು: SDPI ವಿರುದ್ಧವೂ ಕ್ರಮಕ್ಕೆ ಒತ್ತಾಯ

MLC Ravikumar

ಬೆಂಗಳೂರು: ಮಂಡ್ಯ ಜಿಲ್ಲೆಯ ಬೇವಿನಹಳ್ಳಿಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ವೇಳೆ ಕಲಾವಿದರು ಮತ್ತು ಜನರತ್ತ 500 ರೂ. ಕರೆನ್ಸಿ ನೋಟುಗಳನ್ನು ಎಸೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಶಾಸಕ ಅಭ್ಯರ್ಥಿ ರಮೇಶ ಬಂಡಿಸಿದ್ದೇಗೌಡ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ರಾಜ್ಯ ಸಮಿತಿ ಆಗ್ರಹಿಸಿದೆ. ಈ ವಿಚಾರವಾಗಿ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಾಘಟ್ಟ, ರಾಜ್ಯ ಪ್ಯಾನಲಿಸ್ಟ್ ಮಧು ಎನ್ ರಾವ್, ಜಿಲ್ಲಾ ವಕ್ತಾರ ರಾಘವೇಂದ್ರ ರಾವ್ ಅವರ ನಿಯೋಗವು ಇಂದು ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ದೂರು ಸಲ್ಲಿಸಿತು.

ಎಸ್‍ಡಿಪಿಐ ಮುಖಂಡನ ವಿರುದ್ಧ ದೂರು
ಶಾಂತಿ ಕದಡುವ, ದ್ವೇಷ ಹರಡುವ ಮತ್ತು ಮಾನಹಾನಿ ಮಾಡುವ ಉದ್ದೇಶದ ಹೇಳಿಕೆ ಕೊಟ್ಟ ಚಿತ್ರದುರ್ಗ ಜಿಲ್ಲಾ ಎಸ್‍ಡಿಪಿಐ ಅಧ್ಯಕ್ಷ ಜಾಕೀರ್ ಹುಸೇನ್ ವಿರುದ್ಧ ಮತ್ತೊಂದು ದೂರು ಸಲ್ಲಿಸಲಾಯಿತು. ಮುಸ್ಲಿಮರ ಮೀಸಲಾತಿ ರದ್ದು ಮಾಡಿದ ಸಂಬಂಧ ಪ್ರತಿಭಟನೆಯಲ್ಲಿ ಮಾತನಾಡಿದ ಜಾಕೀರ್ ಹುಸೇನ್ ಅವರು, “ನಮ್ಮ ಹಕ್ಕನ್ನು ಹೀನಾಯವಾಗಿ ಕಸಿದುಕೊಳ್ಳಲಾಗಿದೆ. ನಮ್ಮ ಹಕ್ಕನ್ನು ವಾಪಸ್ ಕೊಡದಿದ್ದರೆ ಸಿಎಂ ಬೊಮ್ಮಾಯಿಯವರ ಬಟ್ಟೆ ಬಿಚ್ಚಿಸುತ್ತೇವೆ; ಹಿಜಾಬ್, ಆಜಾನ್‍ಗೆ ತಲೆ ಕೊಟ್ಟೆವು. ಮೀಸಲಾತಿ ವಿಚಾರದಲ್ಲಿ ತಲೆ ಹೋದರೂ ಚಿಂತೆಯಿಲ್ಲ. ಜೈಲಿಗೆ ಹೋದರೂ ಚಿಂತೆಯಿಲ್ಲ. ನಾವೆಲ್ಲ ಉಗ್ರವಾಗಿ ಹೋರಾಡುತ್ತೇವೆ” ಎಂದು ಹೇಳಿದ್ದರು ಎಂದು ಗಮನ ಸೆಳೆಯಲಾಗಿದೆ. ಸಾಮಾಜಿಕ ಶಾಂತಿಗೆ ಹಾನಿ ಉಂಟು ಮಾಡುವ ಮತ್ತು ದ್ವೇಷ ಹರಡುವ ಉದ್ದೇಶದ ಈ ಮಾತುಗಳನ್ನು ಗಮನಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಮನವಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ: Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ

Exit mobile version