ಬೆಂಗಳೂರು: ಚುನಾವಣೆ (Karnataka Election) ಹತ್ತಿರವಾಗುತ್ತಿರುವಂತೆ ವಿವಿಧ ಪಕ್ಷದ ಮುಖಂಡರು ಪಕ್ಷಾಂತರ ಮಾಡುವುದು, ಪಕ್ಷಗಳನ್ನು ಬೆಂಬಲಿಸುವುದು ನಡೆದಿದೆ. ಇದರ ಮುಂದುವರಿದ ಭಾಗವಾಗಿ ಜನತಾ ಪರಿವಾರದ ಮುಖಂಡ ಮತ್ತು ಉಪ ಮುಖ್ಯಮಂತ್ರಿಯಾಗಿದ್ದ ದಿವಂಗತ ಎಂ.ಪಿ. ಪ್ರಕಾಶ್ (MP Prakash) ಕುಟುಂಬ ಬಿಜೆಪಿ ಸೇರಲು ಮುಂದಾಗಿದೆ.
ಎಂ. ಪಿ. ಪ್ರಕಾಶ್ (MP Prakash) ಅವರು ಪ್ರತಿನಿಧಿಸುತ್ತಿದ್ದ, ಈಗಿನ ವಿಜಯನಗರ ಜಿಲ್ಲೆಯಾದ ಹೂವಿನಹಡಗಲಿ ಕ್ಷೇತ್ರದ ಬೆಂಬಲಿಗರೊಂದಿಗೆ ಎಂ.ಪಿ. ಪ್ರಕಾಶ್ ಅವರ ಪುತ್ರಿ ಎಂ.ಪಿ. ಸುಮಾ ವಿಜಯ್ ಪಕ್ಷ ಸೇರಲಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ಸುಮಾ ವಿಜಯ್ ಜತೆಗೆ ಎಂ.ಪಿ. ಪ್ರಕಾಶ್ ಮೊಮ್ಮಗ ಸಾತ್ವಿಕ್ ವಿಜಯ್‌ಕುಮಾರ್ ಹಿರೇಮಠ್, ಅಳಿಯ ವಿಜಯ್‌ಕುಮಾರ್ ಬಸವಣ್ಣಯ್ಯ ಹಿರೇಮಠ್, ಹೂವಿನಹಡಗಲಿಯ ಕಾಂಗ್ರೆಸ್ ನಾಯಕರುಗಳಾದ ಹನ್ನಿ ವೀರಣ್ಣ, ಪವಿತ್ರ ರಾಮಸ್ವಾಮಿ ಸೇರಿ ಅನೇಕರು ಬಿಜೆಪಿ ಸೇರುತ್ತಿದ್ದಾರೆ.
ಕಾಂಗ್ರೆಸ್‌ನಲ್ಲಿದ್ದರೂ ಅನೇಕ ಸಮಯದಿಂದ ಸುಮಾ, ಬಿಜೆಪಿಗೆ ಬಹಿರಂಗ ಬೆಂಬಲ ನೀಡುತ್ತಿದ್ದಾರೆ. ಅವರ ಬೆಂಬಲದಿಂದಾಗಿಯೇ, ಹೂವಿನಹಡಗಲಿ ಪಾಲಿಕೆಯಲ್ಲಿ 9 ಬಿಜೆಪಿ ಸದಸ್ಯರು ಗೆದ್ದಿದ್ದರು. ಅದೇ ರೀತಿ 9 ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿ ಜಯಗಳಿಸಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಉಪಸ್ಥಿತಿಯಲ್ಲಿ ಸೇರ್ಪಡೆ ಆಗಲಿದ್ದಾರೆ. ಹೂವಿನಹಡಗಲಿಯಲ್ಲಿ ಕೃಷ್ಣ ನಾಯ್ಕ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಇದನ್ನೂ ಓದಿ: Tumkuru News : ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ ಯೋಧರಿಗೆ ಹೂವಿನ ಅಭಿಷೇಕ: ಶಿರಾದಲ್ಲಿ ಭರ್ಜರಿ ಮೆರವಣಿಗೆ