Site icon Vistara News

Karnataka Election: ಸೋಲಿಗೆ 10 ಕಾರಣ ಹುಡುಕಿದ ಬಿಜೆಪಿ; ಮೊದಲ 3 ಸ್ಥಾನದಲ್ಲಿ 40%, ಲಿಂಗಾಯತ, ಗ್ಯಾರಂಟಿ!

BJP Meeting

BJP Meeting

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಆಗಿರುವ ಹೀನಾಯ ಸೋಲಿನ ವಿಶ್ಲೇಷಣೆ ಮಾಡಿರುವ ಕರ್ನಾಟಕ ಬಿಜೆಪಿ (Karnataka BJP) 10 ಕಾರಣಗಳನ್ನು ಪಟ್ಟಿ ಮಾಡಿದೆ. ಅದರಲ್ಲಿ 40% ಕಮಿಷನ್‌ ಆರೋಪ ಮತ್ತು ಲಿಂಗಾಯತ ವಿವಾದಕ್ಕೆ ಸ್ಪಷ್ಟ ತಿರುಗೇಟು ನೀಡಲು ವಿಫಲವಾಗಿದ್ದು ಹಾಗೂ ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ (Congress guarantee) ಟಾಪ್‌ನಲ್ಲಿವೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ʻಜಗನ್ನಾಥ ಭವನದಲ್ಲಿ ಶನಿವಾರ ಮಧ್ಯಾಹ್ನ ನಡೆದ ಪ್ರಮುಖರ ಸಭೆಯಲ್ಲಿ ರಾಜ್ಯದ ಚುನಾವಣಾ ಫಲಿತಾಂಶದ ಕುರಿತು ವಿಶ್ಲೇಷಣೆ ಮಾಡಲಾಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆಹ್ವಾನಿತರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಚರ್ಚೆಯಾದ ಸೋಲಿನ ಕಾರಣಗಳು ಇವು

  1. ಪ್ರತಿಪಕ್ಷಗಳು ಮಾಡಿದ 40% ಕಮಿಷನ್ ಆರೋಪಕ್ಕೆ ಸರಿಯಾಗಿ ತಿರುಗೇಟು ನೀಡದೆ ಇರುವುದು.
  2. ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರ ಕೊಡುವಲ್ಲಿ ವಿಫಲವಾಗಿದ್ದು.
  3. ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಮೋಸ ಮಾಡುತ್ತಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ಕೊಡುವಲ್ಲಿ ವಿಫಲ.
  4. ರಾಜ್ಯಕ್ಕೆ ಹೊಸ ಮಾಡೆಲ್ ಎಂಬ ಹೆಸರಿಲ್ಲಿ ಹೊಸಬರಿಗೆ ಟಿಕೆಟ್ ಘೋಷಣೆ ಮಾಡಿದ್ದು ಹಲವು ಹಾಲಿ ಸಚಿವರಿಗೆ ಟಿಕೆಟ್ ತಪ್ಪಿಸಿದ್ದು.
  5. ಸ್ಥಳೀಯ ನಾಯಕರು ಯಾವುದೇ ಜವಾಬ್ದಾರಿ ವಹಿಸಿಕೊಳ್ಳದೆ ಸಂಪೂರ್ಣವಾಗಿ ಕೇಂದ್ರದ ನಾಯಕರ ಮೇಲೆ ಅವಲಂಬಿಸಿದ್ದು.
  6. ,ಯಡಿಯೂರಪ್ಪ ಅವರ ಬಗ್ಗೆ ಸಂತೋಷ್ ಮಾತನಾಡಿದ್ದಾರೆಂಬ ಪೇಪರ್ ಕಟ್ಟಿಂಗ್‌ಗೆ ಸರಿಯಾದ ಉತ್ತರ ಕೊಡದಿರುವುದು ಹಾಗೂ ಇದು ಯಾವುದೇ ರೀತಿಯ ಪರಿಣಾಮ ಉಂಟು ಮಾಡುವುದಿಲ್ಲ ಎಂದು ಮೌನ ವಹಿಸಿದ್ದು.
  7. ಪಕ್ಷದಲ್ಲಿ ಕೆಲವರ ಅನಾವಶ್ಯಕ ಹೇಳಿಕೆಗಳಿಂದ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಪರವಾಗಿ ಮತಗಳು ಧ್ರುವೀಕರಣಗೊಂಡದ್ದು.
  8. ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆದ ಪರಿಣಾಮ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮತ ವಿಭಜನೆ ಆಗದೇ ಮುಸ್ಲಿಂ ಸಮುದಾಯ ಮತ್ತೆ ಮೀಸಲಾತಿ ಪಡೆಯಲು ಕಾಂಗ್ರೆಸ್ ಪರ ನಿಂತಿದ್ದು.
  9. ಚುನಾವಣೆ ಹದಿನೈದು ದಿನ ಇರುವಾಗ ಲಿಂಗಾಯತ ಸಮುದಾಯ ಪ್ರಭಾವಿ ನಾಯಕರು ಪಕ್ಷ ಬಿಟ್ಟಿದ್ದು.
  10. ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಅವರಿಗಿಂತ ನಾವೇ ಹೆಚ್ಚು ಚರ್ಚೆ ಮಾಡಿದ್ದು ಕಾಂಗ್ರೆಸ್ ಲಾಭಕ್ಕೆ ಕಾರಣವಾಯಿತು.

ಈ ಎಲ್ಲ ವಿಚಾರಗಳ ಬಗ್ಗೆ ಪರಾಮರ್ಶೆ ನಡೆಸಿದ ಬಿಜೆಪಿ ನಾಯಕರು, ವಿಧಾನ ಸಭಾ ಚುನಾವಣೆಯಲ್ಲಿ ಮಾಡಿದ ತಪ್ಪುಗಳನ್ನ ತಿದ್ದಿಕೊಂಡು ಲೋಕಸಭಾ ಚುನಾವಣೆಗೆ ಸಿದ್ಧವಾಗಬೇಕು ಎಂಬ ಸೂಚನೆಯನ್ನು ನೀಡಿದರು.

#image_title

ಶರ್ತರಹಿತವಾಗಿ ಗ್ಯಾರಂಟಿ ಜಾರಿ ಮಾಡಿ ಎಂದ ಅರುಣ್ ಸಿಂಗ್

ಬೆಂಗಳೂರು: ಬಿಜೆಪಿ ರಾಜ್ಯದಲ್ಲಿ ಸಕಾರಾತ್ಮಕ ಹಾಗೂ ಸಮರ್ಥ ವಿಪಕ್ಷವಾಗಿ ಕಾರ್ಯನಿರ್ವಹಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಪ್ರಭಾರಿಗಳ ಸಭೆ ನಡೆಸಿ ಚುನಾವಣೆ ಸಂಬಂಧ ಮಾಹಿತಿ ಪಡೆಯಲಾಗಿದೆ ಎಂದ ಅವರು, ಎಲ್ಲ ಕಾರ್ಯಕರ್ತರು ಚುನಾವಣೆಯಲ್ಲಿ ಪಕ್ಷಕ್ಕಾಗಿ ವಿಶೇಷ ಶ್ರಮಪಟ್ಟಿದ್ದು, ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ವಿವಿಧ ಗ್ಯಾರಂಟಿಗಳು ಶರ್ತರಹಿತವಾಗಿ ಅನುಷ್ಠಾನ ಆಗಲಿ ಎಂದು ಆಗ್ರಹಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಶೇಕಡಾವಾರು ಮತ ಗಳಿಕೆ ಕಡಿಮೆ ಆಗಿಲ್ಲ. ಜೆಡಿಎಸ್ ಪಕ್ಷದ ಸ್ವಲ್ಪ ಮತ ಪ್ರಮಾಣವು ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಲಭಿಸಿವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟರು.
ನಾವು ಇನ್ನಷ್ಟು ಹೆಚ್ಚು ಸೀಟು ನಿರೀಕ್ಷಿಸಿದ್ದೆವು. ಕೆಲವು ಕ್ಷೇತ್ರಗಳಲ್ಲಿ ಮತ ಗಳಿಕೆ ಹೆಚ್ಚಾಗಿದೆ. ಕೆಲವೆಡೆ ಕಡಿಮೆ ಆಗಿದೆ ಎಂದು ತಿಳಿಸಿದ ಅವರು, ವಿಪಕ್ಷ ನಾಯಕನ ಕುರಿತಂತೆ ಸಂಸದೀಯ ಮಂಡಳಿ ನಿರ್ಧರಿಸಲಿದೆ ಎಂದು ಉತ್ತರ ಕೊಟ್ಟರು. ಪಕ್ಷದ ಶಾಸಕರು ವಿಪಕ್ಷ ನಾಯಕನನ್ನು ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು ದೇಶದ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದೆ. ಬಡವರು, ರೈತರು, ಮಹಿಳೆಯರು, ಎಸ್‍ಸಿ, ಎಸ್‍ಟಿ ಸಮುದಾಯಕ್ಕಾಗಿ ಸರಕಾರ ಶ್ರಮಿಸಿದೆ ಎಂದ ಅವರು, 9 ವರ್ಷಗಳಲ್ಲಿ ಮೋದಿಜಿ ಅವರ ಸರಕಾರ ಮಾಡಿದ ಸಾಧನೆಗಳನ್ನು ಕರ್ನಾಟಕದ ಜನತೆಗೆ ತಿಳಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: DK Shivakumar: ನಾನು ಬಂಗಾರಪ್ಪ ಶಿಷ್ಯ, ಎಸ್ಸೆಂ ಕೃಷ್ಣ ಶಿಷ್ಯನಲ್ಲ ಎಂದು ಡಿಕೆಶಿ ಹೇಳಿದ್ದೇಕೆ?

Exit mobile version