Site icon Vistara News

Karnataka Election : ಕನಕಪುರ ಕೈಬಿಡ್ತಾ ಬಿಜೆಪಿ? ಡಿಕೆಶಿ ಬದಲು ವರುಣದಲ್ಲಿ ಸಿದ್ದುವೇ ಮೇನ್‌ ಟಾರ್ಗೆಟ್‌

Karnataka Election 2023 The Congress top leadership divided on the CM issue

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರ ವಿರುದ್ಧ ಘಟಾನುಘಟಿ ನಾಯಕರನ್ನು ಕಣಕ್ಕಿಳಿಸಿ ಸದ್ದು ಮಾಡಿದ್ದ ಬಿಜೆಪಿ ಇದೀಗ ಸದ್ದಿಲ್ಲದೆ ಒಂದು ಕ್ಷೇತ್ರದಿಂದ ಹಿಂದೆ ಸರಿದಿದೆಯಾ? ಇನ್ನೊಂದರಲ್ಲಿ ಪೂರ್ಣ ಗಮನ ಹರಿಸಿ ಗೆಲುವು ಪಡೆಯಲು ಶ್ರಮಿಸುತ್ತಿದೆಯಾ? ಹೌದು ಎನ್ನುತ್ತವೆ ಮೂಲಗಳು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ವಿರುದ್ಧ ಕನಕಪುರದಲ್ಲಿ ಸಚಿವ ಆರ್‌. ಅಶೋಕ್‌ (R Ashok) ಅವರನ್ನು ಕಣಕ್ಕಿಳಿಸಿದ್ದ ಬಿಜೆಪಿ ಆರಂಭಿಕ ಹಂತದಲ್ಲಿದ್ದ ಉತ್ಸಾಹವನ್ನು ಉಳಿಸಿಕೊಂಡಿಲ್ಲ. ಆದರೆ, ವರುಣಾದಲ್ಲಿ ದಿನದಿಂದ ದಿನಕ್ಕೆ ತನ್ನ ಒತ್ತಡವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಕನಕಪುರದಲ್ಲಿ ಡಿ.ಕೆ. ಶಿವಕುಮಾರ್‌ ವಿರುದ್ಧ ಗೆಲ್ಲುವುದು ಅಸಾಧ್ಯ ಎಂಬ ಆಂತರಿಕ ವರದಿ ಎನ್ನಲಾಗಿದೆ. ಅದೇ ಹೊತ್ತಿಗೆ ಕಾಂಗ್ರೆಸ್‌ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣ ಕದನಕ್ಕೆ ಇಳಿದಿರುವ ಬಿಜೆಪಿಗೆ ಅಲ್ಲಿ ಸ್ವಲ್ಪ ಹೆಚ್ಚು ಪ್ರಯತ್ನ ಮಾಡಿದರೆ ಗೆಲ್ಲಬಹುದು ಎಂಬ ವರದಿ ಸಿಕ್ಕಿದೆ ಎನ್ನಲಾಗಿದೆ.

ಕನಕಪುರದಲ್ಲಿ ಡಿಕೆಶಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ್ದ ಬಿಜೆಪಿಗೆ ಅಷ್ಟೊಂದು ಪೂರಕ ವಾತಾವರಣ ಕಂಡಿಲ್ಲ. ಹೀಗಾಗಿ ಅಲ್ಲಿನ ಸ್ಪರ್ಧೆಗೆ ಅಷ್ಟೊಂದು ಫೋಕಸ್‌ ಮಾಡುತ್ತಿಲ್ಲ ಎನ್ನಲಾಗಿದೆ. ರಾಷ್ಟ್ರೀಯ ನಾಯಕರು ಕೂಡಾ ಇಲ್ಲಿಗೆ ಬರುವ ಆಸಕ್ತಿ ತೋರಿಸದೆ ಇರಲು ಇದೇ ಕಾರಣ ಎನ್ನಲಾಗಿದೆ.

ಆದರೆ, ವರುಣದ ವಿಚಾರ ಹಾಗಲ್ಲ. ವರುಣ ಕನಕಪುರದಷ್ಟು ಕಷ್ಟದ ಕ್ಷೇತ್ರವಲ್ಲ. ಒಂದಿಷ್ಟು ಮತಗಳು ತಿರುಗಿದರೂ ಗೆಲ್ಲಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ. ವರುಣದಲ್ಲಿ ಬಿಜೆಪಿಗೆ ಸಾಂಪ್ರದಾಯಿಕ ಮತಗಳಿವೆ. ಜತೆಗೆ ಈ ಬಾರಿ ಪ್ರಬಲ ಅಭ್ಯರ್ಥಿ ಕಣದಲ್ಲಿ ಇರೋದರಿಂದ ಇನ್ನಷ್ಟು ಶ್ರಮ ಹಾಕಿದ್ರೆ ಬಿಜೆಪಿಗೆ ವರುಣ ಒಲಿಯಲೂಬಹುದು ಎನ್ನುವುದು ಅದು ಮಾಡಿಕೊಂಡಿರುವ ಅಂದಾಜು.

ಹೀಗಾಗಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಘಟಾನುಘಟಿ ನಾಯಕರು ಈಗಾಗಲೇ ವರುಣದಲ್ಲಿ ಪ್ರಚಾರ ನಡೆಸಿದ್ದಾರೆ. ವರುಣ ವಿಚಾರದಲ್ಲೇ ಅಮಿತ್‌ ಶಾ ಅವರು ವಿಶೇಷ ಸಭೆಯನ್ನು ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಕೊನೆಯ ನಾಲ್ಕು ದಿನ ಬೂತ್ ತಂತ್ರಗಾರಿಕೆ ಬದಲಿಸಲು ಅಮಿತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ವರುಣ ಬಿಜೆಪಿ ನಾಯಕರು ಮತ್ತು ಸೋಮಣ್ಣ ಜತೆ ಸೇರಿ ಹೊಸ ತಂತ್ರಗಾರಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಜತೆಗೆ ಪ್ರತಿ ಬೂತ್‌ನಲ್ಲೂ ಮತ ಏರಿಕೆ ತಂತ್ರಗಾರಿಕೆ ಮಾಡುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಬಿ.ಎಸ್‌. ಯಡಿಯೂರಪ್ಪ, ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರು ಅಲ್ಲಿ ಪ್ರಚಾರ ಮಾಡಿದ್ದಾರೆ.

ಸಿದ್ದರಾಮಯ್ಯ ಅವರಿಂದಲೂ ಪ್ರತಿತಂತ್ರ

ಬಿಜೆಪಿ ಕನಕಪುರದಲ್ಲಿ ಸೋಲೊಪ್ಪಿಕೊಂಡು ವರುಣ ಕ್ಷೇತ್ರವೊಂದನ್ನೇ ಟಾರ್ಗೆಟ್‌ ಮಾಡಿದೆ ಎನ್ನುವ ಸಂದೇಶ ಆಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಲುಪಿದೆ ಎನ್ನಲಾಗಿದೆ. ಹೀಗಾಗಿಯೇ ಅವರು ಚಿತ್ರನಟರಾದ ಶಿವರಾಜ್‌ ಕುಮಾರ್‌, ದುನಿಯಾ ವಿಜಯ್‌ ಮತ್ತು ಸ್ಟಾರ್‌ ಕ್ಯಾಂಪೇನರ್‌ ರಮ್ಯಾ ಅವರನ್ನು ಕರೆಸಿಕೊಂಡು ದೊಡ್ಡ ಮಟ್ಟದಲ್ಲಿ ರೋಡ್‌ ಶೋ ಮಾಡಿಸಿದ್ದಾರೆ. ಜತೆಗೆ ಕೊನೆಯ ಎರಡು ದಿನ ಬೇರೆಲ್ಲೂ ಹೋಗದೆ ವರುಣಾದಲ್ಲೇ ಇದ್ದು ಪ್ರಚಾರ ಮಾಡಲು ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ : Karnataka Election 2023: ನನ್ನ ಗುರಿ ಬಿಜೆಪಿಯನ್ನು ಗೆಲ್ಲಿಸುವುದೇ ಹೊರತು, ಮುಖ್ಯಮಂತ್ರಿ ಹುದ್ದೆ ಅಲ್ಲ: ಬಿ.ವೈ. ವಿಜಯೇಂದ್ರ

Exit mobile version