Site icon Vistara News

Karnataka Election : ಬಿಜೆಪಿ ಪೋಲಿಂಗ್‌ ಏಜೆಂಟ್‌ ಆಗಿದ್ದ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ

BJP Polling agent death

BJP Polling agent death

ಕಲಬುರಗಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಿಜೆಪಿ ಪೋಲಿಂಗ್‌ ಏಜೆಂಟ್‌ ಆಗಿ ಕಾರ್ಯನಿರ್ವಹಿಸಿದ್ದ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸಲಗರ ಬಸಂತಪುರದಲ್ಲಿ ರಾಮು ರಾಠೋಡ್‌ (45) ಎಂಬಾತ ಪ್ರಾಣ ಕಳೆದುಕೊಂಡಿದ್ದಾನೆ. ಈತ ಬಿಜೆಪಿ ಕಾರ್ಯಕರ್ತನಾಗಿದ್ದು, ಈ ಸಾವು ಹಲವು ಸಂಶಯಗಳಿಗೆ ಕಾರಣವಾಗಿದೆ.

ರಾಮು, ಸಲಗರ ಬಸಂತಪುರ ತಾಂಡಾ ನಿವಾಗಿಯಾಗಿದ್ದು, ಬುಧವಾರ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಜೆವರೆಗೂ ಪೋಲಿಂಗ್ ಬೂತ್ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದ. ಮುಂಜಾನೆ ತಾಂಡಾದ ಹೊರವಲಯದಲ್ಲಿ ಮರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಈತ ತಾನೇ ಆತ್ಮಹತ್ಯೆ ಮಾಡಿಕೊಂಡನೋ ಅಥವಾ ಬೇರೆ ಯಾರಾದರೂ ಕೊಲೆ ಮಾಡಿ ನೇಣಿಗೆ ಹಾಕಿದರೋ ಎನ್ನುವುದು ಸ್ಪಷ್ಟವಿಲ್ಲ. ಮನೆಯವರ ಪ್ರಕಾರ ಆತನನ್ನು ಯಾರೋ ಕೊಂದು ಈ ರೀತಿ ಮರಕ್ಕೆ ನೇತು ಹಾಕಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಾವಿನ ಹಿಂದೆ ರಾಜಕೀಯ ವೈಷಮ್ಯ ಇರಬಹುದೇ? ಬೇರೆ ವೈಯಕ್ತಿಕ ಕಾರಣವೇ ಎಂಬ ವಿಚಾರಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರೂಪದರ್ಶಿ ಪ್ರೇಕ್ಷಾ ಆತ್ಮಹತ್ಯೆ ಪ್ರಕರಣದ ಆರೋಪಿ ಯುವಕ ನೇಣಿಗೆ ಶರಣು

ಉಳ್ಳಾಲ (ಮಂಗಳೂರು): ಎರಡು ವರ್ಷದ ಹಿಂದೆ ಭಾರಿ ಸದ್ದು ಮಾಡಿದ್ದ, ರೂಪದರ್ಶಿ ಪ್ರೇಕ್ಷಾ ಆತ್ಮಹತ್ಯೆ (Model preksha suicide) ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದ ಯುವಕ ತಾನೂ ಸಾವಿಗೆ ಶರಣಾಗಿದ್ದಾನೆ (suicide case) ಕುತ್ತಾರುವಿನ ಮುಂಡೋಳಿ ನಿವಾಸಿ ಯತಿರಾಜ್ ಗಟ್ಟಿ(20) ಆತ್ಮ ಹತ್ಯೆಗೈದ ಯುವಕ.

ಎರಡು ವರುಷಗಳ ಹಿಂದೆ ಕುಂಪಲದ ಆಶ್ರಯ ಕಾಲನಿಯ ಮನೆಯಲ್ಲಿ ರೂಪದರ್ಶಿ ಪ್ರೇಕ್ಷಾ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಸಾವಿಗೆ ಪ್ರಚೋದನೆ ನೀಡಿದ ಆರೋಪವನ್ನು ಎದುರಿಸುತ್ತಿದ್ದ ಸುಮಾರು 20 ಹುಡುಗರಲ್ಲಿ ಪ್ರಮುಖನಾಗಿದ್ದವನು ಯತಿರಾಜ್‌ ಗಟ್ಟಿ.

ರೂಪದರ್ಶಿ ಪ್ರೇಕ್ಷಾ ಮತ್ತು ಯತಿರಾಜ್‌ ಗಟ್ಟಿ

ಯತಿರಾಜ್ ತನ್ನ ಮನೆಯ ಹಿಂದಿನ ಚಿಕ್ಕಮ್ಮನ ಮನೆಯ ಎದುರಿನ ಸಿಟ್ ಔಟ್‌ನ ಕಬ್ಬಿಣದ ಹುಕ್ಸ್ ಒಂದಕ್ಕೆ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಾನೆ. ಬುಧವಾರ ರಾತ್ರಿ 11ರ ವೇಳೆ ಮನೆಗೆ ಬಂದಿದ್ದ ಯತಿರಾಜ್ ಚಿಕ್ಕಮ್ಮ ಮನೆಯಲ್ಲಿರದ ವೇಳೆ ನೇಣು ಬಿಗಿದುಕೊಂಡಿದ್ದಾನೆ.

ಗುರುವಾರ ಬೆಳಗ್ಗೆ ಯತಿರಾಜ್‌ನ ಮಾವ ಹುಡುಕಾಡಿದಾಗ ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮನೆಮಂದಿ ನೇಣು ಕುಣಿಕೆಯನ್ನು ಕತ್ತರಿಸಿದರೂ ಅದಾಗಲೇ ಯತಿರಾಜ್ ಮೃತಪಟ್ಟಿದ್ದ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಎರಡು ವರ್ಷದ ಹಿಂದೆ ಪ್ರೇಕ್ಷಾ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಾಗ ಆ ಪರಿಸರದ ಯುವಕರ ಮೇಲೆ ಸಂಶಯ ಹುಟ್ಟಿಕೊಂಡಿತ್ತು. ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮಾಡೆಲಿಂಗ್‌ನಲ್ಲಿ ಹೆಸರು ಮಾಡಿದ್ದ ಆಕೆಯ ಸಾವಿಗೆ ಯವಕರ ತಂಡವೊಂದು ಕಾರಣ ಎಂದು ಆಪಾದಿಸಲಾಗಿತ್ತು. ಗಾಂಜಾ ಸೇರಿದಂತೆ ಡ್ರಗ್ಸ್‌ ಸೇವನೆ ಮಾಡುವ ಗ್ಯಾಂಗ್‌ನ ಸುಮಾರು 20ರಷ್ಟು ಯುವಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಇದೀಗ ಯತಿರಾಜ್‌ ಗಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಏನು ಕಾರಣ ಎನ್ನುವುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ : Elephant attack: ಸಕಲೇಶಪುರದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಲಗ್ಗೆ; ಕಾಫಿ ತೋಟದ ಗೇಟ್‌ ಮುರಿದು, ಬೆಳೆ ಹಾನಿ

karnataka-election: BJP polling agent found deas

Exit mobile version