ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿ ನಾನಾ ಸುದ್ದಿ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು (Exit poll) ಪ್ರಕಟವಾಗುತ್ತಿದ್ದಂತೆಯೇ ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಪ್ರತಿಕ್ರಿಯಿಸಿದ್ದು, ಎಕ್ಸಿಟ್ ಪೋಲ್‌ಗಳ ಒಟ್ಟಾರೆ ಸಾರಾಂಶದ ಪ್ರಕಾರ ತ್ರಿಶಂಕು ವಿಧಾನಸಭೆ ಬರುವ ಸಾಧ್ಯತೆಗಳಿಲ್ಲ. ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವುದು ಖಚಿತ. ನನ್ನ ಲೆಕ್ಕಾಚಾರದ ಪ್ರಕಾರ ಬಿಜೆಪಿ 115ರಿಂದ 117 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ಕೆಲವು ಸುದ್ದಿ ಸಂಸ್ಥೆಗಳ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಿವೆ. 115ರಿಂದ 117 ಸ್ಥಾನಗಳಲ್ಲಿ ಗೆಲ್ಲುವುದು ಶತಸ್ಸಿದ್ಧ ಎಂದರು ಹೇಳಿದರು.
ಇವತ್ತಿಗೂ, ಈ ಕ್ಷಣಕ್ಕೂ ನಾನು ಹೇಳುತ್ತೇನೆ ನಾವು ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ ಅವರು ಜೆಡಿಎಸ್ ಜತೆಗಿನ ಮೈತ್ರಿಯ ಅಗತ್ಯವೇ ಬೀಳುವುದಿಲ್ಲ ಎಂದು ಹೇಳಿದರು. ಒಂದೊಮ್ಮೆ ಅಂಥ ಸಂಗತಿಗಳೇನಾದರೂ ಇದ್ದರೆ ಅದನ್ನು ಹೈಕಮಾಂಡ್ ನಿಭಾಯಿಸುತ್ತದೆ. ಅಗತ್ಯ ಬೀಳುವುದಿಲ್ಲ ಎಂದರು.
ಈಗಿನ ಪರಿಸ್ಥಿತಿಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಅಗತ್ಯವಿಲ್ಲ. ಒಂದೊಮ್ಮೆ ಚುನಾವಣೆಯ ಫಲಿತಾಂಶದ ಬಳಿಕ ಪರಿಸ್ಥಿತಿ ಉದ್ಭವಿಸಿದರೆ ಆಗ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಯಡಿಯೂರಪ್ಪ ಪ್ರಶ್ನೆಯೊಂದಕ್ಕೆ ಸ್ಪಷ್ಟವಾಗಿ ಉತ್ತರಿಸಿದರು.
ಬಿಜೆಪಿಯಲ್ಲಿ ಕೆಲವೊಂದು ದೊಡ್ಡ ಲಿಂಗಾಯತ, ಒಕ್ಕಲಿಗ ನಾಯಕರನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳನ್ನು ಅವರು ಅಲ್ಲಗಳೆದರು. ಎಲ್ಲರಿಗೂ ಸೂಕ್ತವಾದ ಜವಾಬ್ದಾರಿಗಳನ್ನು ನೀಡಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಯಾರನ್ನೂ ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ : Vistara News Poll of Polls: ಅತಂತ್ರ ವಿಧಾನಸಭೆ ಪಕ್ಕಾ; ಕಾಂಗ್ರೆಸ್ ದೊಡ್ಡ ಪಕ್ಷ, ಜೆಡಿಎಸ್‌ಗೆ ಶುಕ್ರದೆಸೆ
Karnataka-election: BS Yediyurappa says BJP will win 115-117 in Assembly polls in Karnataka