ಚಿತ್ರದುರ್ಗ/ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election) ಇನ್ನು ನಾಲ್ಕೇ ತಿಂಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಯೂ ಗರಿಗೆದರಿವೆ. ಇಷ್ಟರ ಮಧ್ಯೆ ರಾಜ್ಯ ಸಚಿವ ಸಂಪುಟದಲ್ಲಿ ಇನ್ನೂ ಹಲವು ಮಂತ್ರಿ ಸ್ಥಾನ ಖಾಲಿ ಇರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ. ಇದಕ್ಕೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಪುಟ ವಿಸ್ತರಣೆಯ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇನ್ನು ಎರಡು-ಮೂರು ದಿನದಲ್ಲಿಯೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಿದ್ದಾರೆ.
ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ- ಸಿಎಂ ಬೊಮ್ಮಾಯಿ
ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಈ ಬಗ್ಗೆ ವರಿಷ್ಠರೊಂದಿಗೆ ವಿಸ್ತೃತವಾದ ಚರ್ಚೆ ಆಗಿದೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಆದಷ್ಟು ಬೇಗನೆ ಒಂದು ಸಭೆ ನಡೆಸಿ ಈ ಬಗ್ಗೆ ತೀರ್ಮಾನವಾಗಲಿದೆ.
ಈಶ್ವರಪ್ಪ, ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ. ಎಲ್ಲ ವಿಚಾರವನ್ನು ಕೇಂದ್ರ ನಾಯಕರಿಗೆ ತಿಳಿಸಿದ್ದೇವೆ. ಜಿಲ್ಲಾವಾರು, ಪ್ರಾದೇಶಿಕವಾರು ಹಾಗೂ ಸಾಮಾಜಿಕವಾಗಿ ಸ್ಥಾನ ನೀಡುವ ಬಗ್ಗೆಯೂ ಚರ್ಚೆಯಾಗಿದೆ. ಎಲ್ಲ ವಿಚಾರಗಳನ್ನು ವರಿಷ್ಠರಿಗೆ ಮನವರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರದುರ್ಗದಲ್ಲಿ ಮಾಧ್ಯಮದವರಿಗೆ ತಿಳಿಸಿದರು.
ಇದನ್ನೂ ಓದಿ | Shah Rukh Khan Donation | ಭೀಕರ ಅಪಘಾತಕ್ಕೆ ಬಲಿಯಾದ ಅಂಜಲಿ ಶರ್ಮಾ ಕುಟುಂಬಸ್ಥರಿಗೆ ಶಾರುಖ್ ಖಾನ್ ನೆರವು
ಎರಡ್ಮೂರು ದಿನದಲ್ಲಿ ಸಂಪುಟ ವಿಸ್ತರಣೆ: ಬಿಎಸ್‌ವೈ
ಎರಡ್ಮೂರು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ನಾಯಕರಿಗೆ ಬಿಟ್ಟಿದ್ದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಶಿಕಾರಿಪುರದಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 140ರಿಂದ 150 ಸ್ಥಾನ ಗೆಲ್ಲುತ್ತೇವೆ. ನಾವು ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯ ಇಲ್ಲ. ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ನಮ್ಮ ಗೆಲುವೂ ಅಷ್ಟೇ ಸತ್ಯ. ಮುಂಬರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ನಾಯಕರು ಬಡಿದಾಡುತ್ತಿದ್ದು, ಇದು ತಿರುಕನ ಕನಸು ಎಂದು ಹೇಳಿದರು.
ಇದನ್ನೂ ಓದಿ | Shivarajkumar | ಪತ್ನಿ ಗೀತಾ ತಲೆ ಬಾಚಿದ ಶಿವಣ್ಣ! ವಿಡಿಯೊ ವೈರಲ್ ಮಾಡಿದ ಮಧು ಬಂಗಾರಪ್ಪ