Site icon Vistara News

Karnataka Election: ಧರ್ಮಾಧಾರಿತ ಮೀಸಲಾತಿ ತಪ್ಪು ಎಂದ ಶೋಭಾ ಕರಂದ್ಲಾಜೆ; ಇದು ಅಜ್ಞಾನದ ಮಾತು ಎಂದ ದಿನೇಶ್‌ ಗುಂಡೂರಾವ್

Clash of words between Shobha Karandlaje and Dinesh Gundu Rao.

ಬೆಂಗಳೂರು: ಮುಸ್ಲಿಂ ಮೀಸಲಾತಿಯನ್ನು (Muslim Reservation) ಕಿತ್ತುಹಾಕಿದ ರಾಜ್ಯ ಸರ್ಕಾರದ ಆದೇಶಕ್ಕೆ ಸುಪ್ರೀಂಕೋರ್ಟ್‌ ನೀಡಿರುವ ಕುರಿತು ರಾಜಕೀಯ ಚರ್ಚೆ ಬಿರುಸುಗೊಂಡಿದೆ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಿರುವ ಕ್ರಮವು ಸಂವಿಧಾನ ಬಾಹಿರ ಎಂದು ಸರ್ಕಾರದ ಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮರ್ಥನೆ ಮಾಡಿಕೊಂಡರೆ, ಇದು ಅಜ್ಞಾನದ ಮಾತು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ (Dinesh Gundu Rao) ತಿರುಗೇಟು ನೀಡಿದ್ದಾರೆ. (Karnataka Election)

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, (Shobha Karandlaje) ಮುಸ್ಲಿಮರಿಗೆ ನೀಡಿರುವ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಸುಪ್ರೀಂಕೋರ್ಟ್‌ ತಾತ್ಕಾಲಿಕ ತಡೆ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸಂವಿಧಾನದ ಪ್ರಕಾರ ಧರ್ಮದ ಆಧಾರದಡಿ ಮೀಸಲಾತಿ ಒದಗಿಸಲು ಅವಕಾಶವಿಲ್ಲ. ಮುಸ್ಲಿಮರನ್ನು ಓಲೈಕೆ ಮಾಡಲು ಹಿಂದಿನ ಸರ್ಕಾರ ಮೀಸಲಾತಿ ಒದಗಿಸಿತ್ತು. ಮೀಸಲಾತಿ ರದ್ದುಗೊಳಿಸಿದ ನಿರ್ಧಾರಕ್ಕೆ ಬಿಜೆಪಿ ಈಗಲೂ ಬದ್ಧವಾಗಿದೆ. ಮುಸ್ಲಿಮರಿಗೆ ಮೀಸಲಾತಿ ಹೆಚ್ಚಿಸುವುದರಿಂದ ಪರಿಶಿಷ್ಟ ಜಾತಿ-ಪಂಗಡ ಮತ್ತು ಇತರ ವರ್ಗಗಳಿಗೆ ಅನ್ಯಾಯವಾಗಲಿದೆ. ಮೀಸಲಾತಿ ರದ್ದು ಆದೇಶ ತಡೆ ವಿಚಾರವಾಗಿ ರಾಜ್ಯ ಸರ್ಕಾರ ಮತ್ತೊಮ್ಮೆ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಲಿದೆ ಎಂದು ಹೇಳಿದರು.

ದಿನೇಶ್ ಗುಂಡೂರಾವ್ ಮಾತನಾಡಿ, ಬಿಜೆಪಿ ಸರ್ಕಾರ ಗಿಮಿಕ್ ಮಾಡಿದೆ. ಎಲ್ಲರನ್ನೂ ಮೋಸ ಮಾಡಲು ಮಾಡಿದ್ದಾರೆ. ಜನರಿಗೆ ಏನೋ ತೋರಿಸಿ, ನಾವು ನಿಮಗೆ ಕೊಡುಗೆ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಕೋರ್ಟ್‌ನಲ್ಲಿ ಸ್ಟೇ ಸಿಕ್ಕಿರೋದು ಅವರಿಗೆ ಕಪಾಳ ಮೋಕ್ಷ. ವೈಜ್ಞಾನಿಕವಾಗಿ ವರದಿ ತೆಗೆದುಕೊಳ್ಳದೆ ಏಕಾಏಕಿಯಾಗಿ ತೀರ್ಮಾನ ಮಾಡಿದ್ದರು.

ಬಿಜೆಪಿ ಎಷ್ಟು ಅನ್ಯಾಯ ಮಾಡಿದರೂ ಮುಸ್ಲಿಂ ಸಮುದಾಯ ಎಲ್ಲೂ ಬೀದಿಗೆ ಇಳಿಯಲಿಲ್ಲ. ಕೇವಲ ಕಾನೂನು ಹೋರಾಟ ಮಾತ್ರ ಮಾಡಿದರು ಅವರು. ಹಿಂದುಳಿದ ವರ್ಗಗಳ ಆಯೋಗ ಯಾವುದೇ ವರದಿ ಕೊಡದೆಯೇ ಯಾವ ಆಧಾರದ ಮೇಲೆ ತೆಗೆದುಹಾಕಿದ್ದಾರೆ? ಜಯಪ್ರಕಾಶ್ ಹೆಗಡೆ ಆಯೋಗವಾದರೂ ಶಿಫಾರಸು ಮಾಡಬೇಕಾಗಿತ್ತು. ಸರ್ವೆ ಮಾಡಿ ಅಧ್ಯಯನ ಮಾಡಿ ಅವರಾದರೂ ವರದಿ ಕೊಡಬೇಕಾಗಿತ್ತು. ಮುಸ್ಲಿಮರು ಹಿಂದುಳಿದಿದ್ದಾರೆ ಎಂದು ಸಾಚಾರ್ ಕಮಿಷನ್ ರಿಪೋರ್ಟ್ ಇದೆ. ಇವರ ಉದ್ದೇಶ ನೀಚತನದಿಂದ ಕೂಡಿದೆ ಎಂಬುದು ಈಗ ಎಕ್ಸಪೋಸ್ ಆಗಿದೆ.

ಒಕ್ಕಲಿಗ, ಲಿಂಗಾಯತ ಸಮಾಜಕ್ಕೆ ಉಪಯೋಗ ಮಾಡಿದ್ದೀವಿ ಅಂತ ತೋರಿಸೋದಕ್ಕೆ ಹೋಗಿ ಈಗ ಸಿಕ್ಕಿಹಾಕಿಕೊಂಡಿದ್ದಾರೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಹಿಂದೂ ಮುಸ್ಲಿಮರ ಗಲಾಟೆ ಮಾಡಿಸಲು ಪ್ರಚೋದನೆ ಕೊಟ್ಟರು ಅದು ಆಗಲಿಲ್ಲ. 2ಡಿ 2ಸಿ ಮೀಸಲಾತಿ ನೀಡಿದ್ದೇವೆ ಅಂತ ತೋರಿಸೋದಕ್ಕೆ ಹೊರಟರು ಅದೂ ಕೂಡ ಆಗಲಿಲ್ಲ. ಬಿಜೆಪಿ ನಗ್ನ ಆಗಿದೆ. ಸ್ವಾರ್ಥಕ್ಕೋಸ್ಕರ ಏನು ಬೇಕಾದರೂ ಮಾಡುತ್ತದೆ ಎಂದು ತೋರಿಸಿದೆ. ಕೀಳುಮಟ್ಟದ ರಾಜಕಾರಣ ಮಾಡುವ ಬಿಜೆಪಿಯನ್ನು ತೆಗೆದುಹಾಕಬೇಕು ಎಂದರು.

ಧರ್ಮದ ಆಧರಿತವಾಗಿ ಮೀಸಲಾತಿ ಕೊಡುವುದು ಸಂವಿಧಾನದಲ್ಲಿ ಇಲ್ಲ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿ, ಶೋಭಾ ಕರಂದ್ಲಾಜೆ ಅವರಿಗೆ ಜ್ಞಾನದ ಕೊರತೆ ಇದೆ. ತಿಳಿದುಕೊಳ್ಳಲು ಅವರು ಹೋಗಿಲ್ಲ ಅನಿಸುತ್ತದೆ. ಕ್ರಿಶ್ಚಿಯನ್‌ , ಭೌದ್ದ, ಜೈನ್, ಸಮುದಾಯಕ್ಕೆ ಮೀಸಲಾತಿ ಇದೆ. ಅದನ್ನು ಯಾಕೆ ತೆಗೆದಿಲ್ಲ? ಹಾಗಾಗಿ ಧರ್ಮದ ಆಧಾರಿತ ಮೀಸಲಾತಿ ಅಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವುದು ಅದು. ಅದಕ್ಕಾಗಿ ಆಯೋಗವಿದೆ. ಆದರೆ ಶೋಭಾ ಕರಂದ್ಲಾಜೆ ಅವರಿಗೆ ಹಿಂದು- ಮುಸ್ಲಿಂ ಎಂದು ಕಾಣಿಸುತ್ತದೆ. ಬೆಂಕಿ ಹಚ್ಚುವ ಕೆಲಸ ಮಾತ್ರ ಅವರಿಗೆ ಗೊತ್ತಿದೆಯೇ ಹೊರತು ಸಮಾಜ ಉದ್ಧಾರ ಮಾಡುವ ಉದ್ದೇಶವಿಲ್ಲ. ಅಜ್ಞಾನದಿಂದ ಕೂಡಿರುವ ಮಾತನ್ನು ಶೋಭಾ ಕರಂದ್ಲಾಜೆ ಹೇಳಿದ್ದಾರೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಇದನ್ನೂ ಓದಿ: Muslim quota issue : ಮುಸ್ಲಿಂ ಮೀಸಲು ಬಗ್ಗೆ ಮೇ 9ರವರೆಗೆ ಯಾವುದೇ ನಿರ್ಧಾರ ಇಲ್ಲ ಎಂದ ಸಿಎಂ ಬೊಮ್ಮಾಯಿ

Exit mobile version