ಬೆಂಗಳೂರು: ಈ ರಾಜಕಾರಣಿಗಳೇ ಹೀಗೆ.. ಚುನಾವಣಾ ಪ್ರಚಾರದ (Karnataka Election 2023) ಸಮಾವೇಶಗಳಲ್ಲಿ ನಿಂತರೆ ವಿರೋಧಿಗಳ ಜನ್ಮ ಜಾಲಾಡುತ್ತಾರೆ, ಜಾತಕ ಬಿಚ್ಚಿಡುತ್ತಾರೆ. ಅವರ ಆಕ್ರೋಶ ಹೇಗಿರುತ್ತದೆ ಎಂದರೆ ಈ ಕ್ಷಣದಲ್ಲಿ ಆ ವ್ಯಕ್ತಿ ಎದುರು ಸಿಕ್ಕರೆ ಸೀಳಿ ಹಾಕುತ್ತಾರೇನೋ ಅನಿಸುತ್ತದೆ.. ಕೆಲವರ ಹಾವ ಭಾವಗಳು ಕೂಡಾ ಅಷ್ಟೇ ಅಗ್ರೆಸಿವ್ ಆಗಿರುತ್ತವೆ. ಆದರೆ, ಅದೇ ವ್ಯಕ್ತಿಗಳು ಎದುರಾಬದುರಾ ಏನಾದರೂ ಸಿಕ್ಕಿಬಿಟ್ಟರೆ, ಅಥವಾ ಒಂದೇ ಸಾಮಾನ್ಯ ವೇದಿಕೆಯಲ್ಲಿ ಸಿಕ್ಕಿಬಿಟ್ಟರೆ ಸಾಕು, ಜನ್ಮಾಂತರದ ಗೆಳೆಯರೇನೋ ಎಂಬಂತೆ ಆತ್ಮೀಯತೆ ತೋರಿಸುತ್ತಾರೆ.
ಬುಧವಾರ ನಡೆದಿದ್ದೂ ಹಾಗೇ!
ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡುವೆ ಎಂಥಾ ಟಾಕ್ ಫೈಟ್ ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತು. ಬೊಮ್ಮಾಯಿ ಅವರನ್ನು ಭ್ರಷ್ಟ ಸಿಎಂ ಎಂದು ಸಿದ್ದರಾಮಯ್ಯ ಕರೆದಿದ್ದರು. ಅದಕ್ಕೆ ಪ್ರತಿಯಾಗಿ ಬೊಮ್ಮಾಯಿ ಕೂಡಾ ಅದೇ ರೀತಿಯ ಉತ್ತರ ನೀಡಿದ್ದರು. ಸಿದ್ದರಾಮಯ್ಯ ಅವರು ತಾವು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದ್ದರು.
ಇದೆಲ್ಲದರ ನಡುವೆ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪರಸ್ಪರ ಎದುರಾದರು. ಇಬ್ಬರೂ ತಮ್ಮ ತಮ್ಮ ಪಕ್ಷಗಳ ಪ್ರಚಾರಕ್ಕೆ ಹೊರಟು ಫ್ರೆಷ್ ಆಗಿದ್ದರು. ಒಬ್ಬರನ್ನೊಬ್ಬರು ನೋಡುತ್ತಿದ್ದಂತೆಯೇ ಮುಖ ಊರಗಲವಾಯಿತು. ಕೈ ಕುಲುಕಿದ್ದೇನು, ನಕ್ಕಿದ್ದೇನು? ಎಲ್ಲವೂ ಸಖತ್ತಾಗಿತ್ತು.
ಈ ಸ್ನೇಹಾಚಾರ ಎಷ್ಟು ಮಜವಾಗಿತ್ತೆಂದರೆ ಸಿದ್ದರಾಮಯ್ಯ ಅವರು ಸಿಎಂ ಬೊಮ್ಮಾಯಿ ಅವರ ಭುಜಕ್ಕೆ ಸಣ್ಣಗೆ ಹೊಡೆದು ಖುಷಿ ಅನುಭವಿಸಿದರು. ಹೀಗೆ ಸಣ್ಣಗೆ ಬಡಿದ ಸಿದ್ದರಾಮಯ್ಯ ಮುಂದೆ ಸಾಗುತ್ತಿದ್ದರೆ, ಬೊಮ್ಮಾಯಿ ಅವರ ಜತೆಗೇ ಸಾಗಿ ಸಿದ್ದರಾಮಯ್ಯ ಅವರ ಬೆನ್ನನ್ನು ಸಣ್ಣಗೆ ಸವರಿದರು. ಕೊನೆಗೆ ಇಬ್ಬರೂ ಮತ್ತೊಮ್ಮೆ ಪರಸ್ಪರ ಕೈಕುಲುಕಿ ತಮ್ಮ ತಮ್ಮ ಪ್ರಚಾರ ತಾಣಗಳತ್ತ ಹೊರಟರು.
ರಾಜಕೀಯವೇ ಬೇರೆ ಸ್ನೇಹಾಚಾರವೇ ಬೇರೆ
ರಾಜಕಾರಣಿಗಳು ಹೊರಗಡೆ ಪರಸ್ಪರ ಬೈದಾಡಿಕೊಂಡಷ್ಟು, ಸೈದ್ಧಾಂತಿಕವಾಗಿ ನಿಲುವುಗಳನ್ನು ಖಂಡಿಸಿದಷ್ಟು ಆಳವಾಗಿ ಪರಸ್ಪರರನ್ನು ದ್ವೇಷಿಸುತ್ತಿರುವುದಿಲ್ಲ. ಅವರ ನಡೆನುಡಿಗಳೆಲ್ಲ ಬರೀ ರಾಜಕೀಯಕ್ಕೆ ಸೀಮಿತವಾಗಿರುತ್ತದೆ ಎನ್ನುವುದೂ ಸ್ಪಷ್ಟ. ನಿಜವೆಂದರೆ, ಹಿಂದೆ ಅರಮನೆ ಮೈದಾನದಲ್ಲಿ ನಡೆದಿದ್ದ ಬಿ.ಎಸ್. ಯಡಿಯೂರಪ್ಪ ಅವರ ಅಭಿನಂದನಾ ಸಮಾರಂಭದಲ್ಲಿ ಅವರ ಬಗ್ಗೆ ಅತ್ಯಂತ ನಿಖರವಾಗಿ ಮತ್ತು ಹೃದಯದಿಂದ ಮಾತನಾಡಿದವರು ಸಿದ್ದರಾಮಯ್ಯ ಅವರೇ ಆಗಿದ್ದರು. ಅಖಾಡದಲ್ಲಿ ಪರಸ್ಪರ ಹಾವು ಮುಂಗುಸಿಗಳಂತೆ ಬಡಿದಾಡುವ ಸಿದ್ದರಾಮಯ್ಯ ಮತ್ತು ಈಶ್ವರಪ್ಪ ಅದರಾಚೆಗೆ ಒಳ್ಳೆಯ ಸ್ನೇಹಿತರೆ. ಆವತ್ತು ಸಿದ್ದರಾಮಯ್ಯ ಅವರು ಸಣ್ಣ ಜ್ವರ ಬಂದು ಆಸ್ಪತ್ರೆ ಸೇರಿದಾಗ ಬಿಎಸ್‌ವೈ ಮತ್ತು ಈಶ್ವರಪ್ಪ ಆಸ್ಪತ್ರೆಗೆ ಓಡಿದ್ದರು. ಇದೇ ಕಾರಣಕ್ಕೆ ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಹೋದರೂ ನಾಯಕರ ನಡುವೆ ಅವರು ಪರಕೀಯ ಅನಿಸುವುದಿಲ್ಲ. ಅಥವಾ ಕಾಂಗ್ರೆಸ್-ಜೆಡಿಎಸ್ ಬಿಟ್ಟು ಬಿಜೆಪಿ ಸೇರಿ ಸರ್ಕಾರವನ್ನೇ ಉರುಳಿಸಿದ ಆ 17 ಮಂದಿ ಕೂಡಾ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ಒಟ್ಟಿನಲ್ಲಿ ರಾಜಕಾರಣಿಗಳು ಎಂದರೆ ಅವರದೇ ಒಂದು ಕುಟುಂಬದ ಹಾಗೆ. ಅವರು ಅಧಿಕಾರಕ್ಕಾಗಿ, ಪಕ್ಷಕ್ಕಾಗಿ, ಸಿದ್ಧಾಂತಕ್ಕಾಗಿ ಜಗಳ ಆಡಬಹುದು. ಆದರೆ, ಎದುರಾದಾಗ ಆತ್ಮೀಯರೇ ಆಗಿರುತ್ತಾರೆ ಅನಿಸುತ್ತದೆ.
ಇದನ್ನೂ ಓದಿ : Yogi Adityanath: ಅಯೋಧ್ಯೆಯಲ್ಲಿ ಕರ್ನಾಟಕ ಅತಿಥಿ ಗೃಹಕ್ಕೆ ಭೂಮಿ ಮಂಜೂರು: ಮಂಡ್ಯದಲ್ಲಿ ಯೋಗಿ ಆದಿತ್ಯನಾಥ ಹೇಳಿಕೆ