ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಈಗಾಗಲೇ ತಯಾರಿಯಲ್ಲಿರುವ ಆಡಳಿತಾರೂಢ ಬಿಜೆಪಿಯು ಜನಸಂಕಲ್ಪ ಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಇದರ ಭಾಗವಾಗಿ ಈಚೆಗೆ ಕೊರಟಗೆರೆ ಕ್ಷೇತ್ರದಲ್ಲಿ ನಡೆದಿದ್ದ ಬಿಜೆಪಿ ಜನ ಸಂಕಲ್ಪ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡಿದ್ದ ಭಾಷಣವನ್ನು ತಿರುಚಲಾಗಿದ್ದು, ಕೆಪಿಸಿಸಿ ಮಾಜಿ ಅಧ್ಯಕ್ಷ, ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ಎಂಬುದಾಗಿ ಸಿಎಂ ಹೇಳಿದ್ದಾರೆಂಬ ರೀತಿಯಲ್ಲಿ ವಿಡಿಯೊವನ್ನು ಬಿತ್ತರಿಸಲಾಗಿದೆ. ಈಗ ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಎಂ ಭಾಷಣದ ವಿಡಿಯೊವನ್ನು ತಿರುಚಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಕೊರಟಗೆರೆ ಬಿಜೆಪಿ ಮಂಡಲದ ಅಧ್ಯಕ್ಷ ದೂರು ನೀಡಿದ್ದಾರೆ. ಸಾರ್ವಜನಿಕ ಸೇವಾ ಬಳಗ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ಹಾಗೂ ಡಾ.ಜಿ ಪರಮೇಶ್ವರ್ ಕೊರಟಗೆರೆ ಎಂಬ ಫೇಸ್‌ಬುಕ್ ಖಾತೆ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊವನ್ನು ಶೇರ್ ಮಾಡಲಾಗಿದೆ. ಇದೀಗ ಸಖತ್ ವೈರಲ್ ಆಗಿದೆ.
ಕೊರಟಗೆರೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದಿದ್ದ ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದರು. ಈ ವೇಳೆ ಮಾಜಿ ಡಿಸಿಎಂ ಪರಮೇಶ್ವರ್ ಅವರನ್ನು ಕಾಂಗ್ರೆಸ್‌ನವರೇ ಸೊಲಿಸುತ್ತಾರೆಂದು ಹೇಳಿಕೆ ನೀಡಿದ್ದರು. ಆ ವಿಡಿಯೊವನ್ನು ಇಟ್ಟುಕೊಂಡ ಕಿಡಿಗೇಡಿಗಳು, ಅದನ್ನು ತಿರುಚಿ ಪರಮೇಶ್ವರ್‌ಗೆ ಅತಿ ಹೆಚ್ಚು ಮತಗಳನ್ನು ಕೊಟ್ಟು ಗೆಲ್ಲಿಸಬೇಕೆಂದು ಕರೆ ನೀಡಲು ಬಂದಿದ್ದೇನೆಂದು ಹೇಳಿರುವಂತೆ ಭಾಷಣವನ್ನು ಎಡಿಟ್ ಮಾಡಲಾಗಿದೆ.
ಹೀಗೆ ವಿಡಿಯೊವನ್ನು ಎಡಿಟ್ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಲಾಗಿದ್ದು, ಈ ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ದೂರು ನೀಡಲಾಗಿದೆ.
ಇದನ್ನೂ ಓದಿ | Border Dispute | ಕರ್ನಾಟಕದಿಂದ ಮಹಾರಾಷ್ಟ್ರದತ್ತ ಹೊರಟ ಸಾರಿಗೆ ಬಸ್; ಇನ್ನೂ ಆರಂಭವಾಗದ ಮಹಾ ಸಂಚಾರ