Site icon Vistara News

Karnataka Election : ಮೂರು ದೇವರ ದರ್ಶನ ಮಾಡಿ ಸರತಿ ಸಾಲಲ್ಲಿ ನಿಂತು ಮತ ಹಾಕಿದ ಸಿಎಂ ಬೊಮ್ಮಾಯಿ

CM Bommai voted in shiggavi

CM Bommai voted in shiggavi

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಬೆಳಗ್ಗೆ ದೇವರ ದರ್ಶನ ಮಾಡಿ ಸರತಿ ಸಾಲಿನಲ್ಲಿ ನಿಂತು ಮತದಾನ (Karnataka Election 2023) ಮಾಡಿ ಗಮನ ಸೆಳೆದರು. ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿನ ಮತಗಟ್ಟೆ ಸಂಖ್ಯೆ 102ರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುತ್ರ ಭರತ ಬೊಮ್ಮಾಯಿ ಹಾಗೂ ಪುತ್ರಿ ಅದಿತಿ ಬೊಮ್ಮಾಯಿ ಅವರ ಜತೆಗೆ ಬಂದು ಮತ ಹಾಕಿದರು.

ಹುಬ್ಬಳ್ಳಿಯ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಹುಬ್ಬಳ್ಳಿಯಲ್ಲಿದ್ದ ಬಸವರಾಜ ಬೊಮ್ಮಾಯಿಯವರು ಬೆಳಗ್ಗೆ ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಆಂಜನೇಯನ ದೇವಸ್ಥಾನಕ್ಜೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಹುಬ್ಬಳ್ಳಿಯ ಪಾರ್ಶ್ವ ಪದ್ಮಾಲಯ ಧಾಮ್‌ ಜೈನಮಂದಿರ

ಆಂಜನೇಯನ ದೇವಸ್ಥಾನದ ಬಳಿಕ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ಇರುವ ಪಾರ್ಶ್ವ ಪದ್ಮಾಲಯ ಧಾಮ್ ಜೈನ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಶಿಗ್ಗಾಂವಿಯ ತಡಸ್‌ ಕ್ರಾಸ್‌ ಬಳಿ ಇರುವ ಗಾಯತ್ರಿ ದೇವಿ ಮಂದಿರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕುಟುಂಬ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿಗ್ಗಾಂವಿಗೆ ತೆರಳುವ ಹಾದಿಯಲ್ಲಿ ಶಿಗ್ಗಾವಿಯ ತಡಸ್ ಕ್ರಾಸ್ ಬಳಿ ಇರುವ ಗಾಯತ್ರಿ ದೇವಿ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಇದು ಮಹತ್ವದ ಚುನಾವಣೆ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಬಳಿಕ ಮಾತನಾಡಿದ ಅವರು, ʻʻನಾನು ಮತದಾನ ಮಾಡಿದ್ದೇನೆ. ಎಲ್ಲರು ಮತದಾನ ಮಾಡಬೇಕು. ತಾವು ಹೊರಗಡೆ ಬನ್ನಿ ಹಕ್ಕನ್ನು ಚಲಾಯಿಸಿ. ರಾಜ್ಯದ ಭವ್ಯ ಭವಿಷ್ಯ ಬರೆಯಲು ಇದು ಮಹತ್ವದ ಚುನಾವಣೆʼʼ ಎಂದರು ಬೊಮ್ಮಾಯಿ.

ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಬೊಮ್ಮಾಯಿ

ʻʻಈ ಚುನಾವಣೆ ಒಂದು ಕಡೆ ಅಭಿವೃದ್ಧಿ ಮತ್ತೊಂದು ಕಡೆ ಸುಳ್ಳಿನ‌ ಚುನಾವಣೆ. ಕಳೆದ ಸಲ ಅಪವಿತ್ರ ಮೈತ್ರಿ ಮಾಡಿಕೊಂಡು‌ ಸರಕಾರ ನಡೆಸಲು‌ ಆಗದಿದ್ದಾಗ ನಮಗೆ ಅಧಿಕಾರ ಕೊಟ್ಟರುʼʼ ಎಂದು ಹೇಳಿದರು ಬೊಮ್ಮಾಯಿ.

ಕುಟುಂಬ ಸಮೇತ ಮತ ಚಲಾಯಿಸಿದ ಮಾಜಿ ಸಿಎಂ ಯಡಿಯೂರಪ್ಪ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪ (BS Yediyurappa) ಅವರು ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದ್ದಲ್ಲದೆ ವಿಧಾನಸಭಾ ಚುನಾವಣೆಯ (Karnataka Election 2023) ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರ ವ್ಯಾಪ್ತಿಗೆ ಬರುವ ಶಿಕಾರಿಪುರ (Shikaripura Constituency) ಪಟ್ಟಣದ ಆಡಳಿತಸೌಧದಲ್ಲಿ ಇಡೀ ಕುಟುಂಬ ಜತೆಯಾಗಿ ಮತದಾನ ಮಾಡಿತು.

ಸಂಸದ ಬಿ.ವೈ. ರಾಘವೇಂದ್ರ, ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಬಂದರು ಬಿಎಸ್‌ವೈ. ಅವರ ಜತೆ ಕುಟುಂಬದ 8 ಸದಸ್ಯರು ಜತೆಯಾಗಿ ಮತಗಟ್ಟೆಗೆ ಬಂದರು.

ಮತ ಚಲಾಯಿಸಿದ ಬಳಿಕ ಮಾತನಾಡಿದ ಬಿಎಸ್‌. ಯಡಿಯೂರಪ್ಪ ಅವರು, ಈ ಬಾರಿ ಸಂಪೂರ್ಣ ಬಹುಮತ ಪಡೆದು ಸರಕಾರ ರಚನೆ ಮಾಡ್ತೇವೆ. ಸೂರ್ಯಚಂದ್ರ ಇರೋದು ಎಷ್ಟು ಸತ್ಯವೋ ಸರಕಾರ ರಚನೆ ಮಾಡೋದೂ ಅಷ್ಟೇ ಸತ್ಯ ಎಂದರು.

ಇದನ್ನೂ ಓದಿ : ‌Karnataka Election 2023: ಹಲವು ಕಡೆ ಕೈಕೊಟ್ಟ ಮತಯಂತ್ರ, ತಾಳ್ಮೆಯಿಂದ ಕಾಯ್ದ ಮತದಾರ

Exit mobile version