ವಿಜಯಪುರ: ವಿಧಾನಸಭಾ ಚುನಾವಣೆಯ (Karnataka Election 2023) ಮತದಾನಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಇವೆ. ಇದರ ಡುವೆಯೇ ರಾಜಕೀಯ ಹೊಡೆದಾಟ, ಹಲ್ಲೆ ಮತ್ತು ಈ ಸಂಬಂಧಿತ ನಾಟಕಗಳೆಲ್ಲ ಭರ್ಜರಿಯಾಗಿ ನಡೆಯುತ್ತಿವೆ. ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ (Babaleshwara Constituency) ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆ ಸೇರಿದವರಲ್ಲಿ ಬಬಲೇಶ್ವರ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ (Viju gowda pateel) ಕೂಡಾ ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ.ಬಿ. ಪಾಟೀಲ್ ಅವರ ಸೋದರ ಸುನಿಲ್ ಗೌಡ ಅವರ ಪತ್ನಿಗೂ ಗಾಯಗಳಾಗಿವೆ.
ಎರಡೂ ಗುಂಪುಗಳು ಪರಸ್ಪರ ದಾಳಿಯ ಆರೋಪ ಮಾಡಿದ್ದು, ಜತೆಗೇ ಎರಡೂ ಗುಂಪುಗಳು ಇದು ನಾಟಕ ಎಂದೂ ಹೇಳಿಕೊಂಡಿವೆ.
ಬಿಜೆಪಿ ಅಭ್ಯರ್ಥಿ ಮೇಲೆ ಮಾರಣಾಂತಿಕ ಹಲ್ಲೆ ಆರೋಪ
ಬಬಲೇಶ್ವರದ ಬಿಜೆಪಿ ಅಭ್ಯರ್ಥಿಯಾಗಿರುವ ವಿಜು ಗೌಡ ಪಾಟೀಲ್ ಅವರು ತನ್ನ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿ ಆಸ್ಪತ್ರೆ ಸೇರಿದ್ದಾರೆ. ಜತೆಗೆ ತಾವು ಆಸ್ಪತ್ರೆಯಲ್ಲಿರುವ ಫೋಟೊಗಳನ್ನು ಫೇಸ್ ಬುಕ್‌ಗೆ ಅಪ್ಲೋಡ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಟ್ಯಾಗ್ ಮಾಡಿದ್ದಾರೆ.
ʻʻತಿಕೋಟಾದಿಂದ ಬರುವಾಗ ನನ್ನ ಮೇಲೆ ಹಲ್ಲೆ ಆಗಿದೆ ಎಂದು ಫೇಸ್ಬುಕ್‌ನಲ್ಲಿ ಅವರು ಫೋಟೊ ಹಂಚಿಕೊಂಡಿದ್ದಾರೆ.
ಎಲ್ಲಾ ನಾಟಕ ಎಂದ ಎಂ.ಬಿ. ಪಾಟೀಲ್
ವಿಜು ಗೌಡ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬಬಲೇಶ್ವರದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ್ ಅವರು, ಇದೆಲ್ಲ ನಾಟಕ ಎಂದಿದ್ದಾರೆ. ವಿಜು ಗೌಡರಿಗೆ ಬಿಜೆಪಿ ಟಿಕೆಟ್ ಸಿಕ್ಕಿದಾಗ ಅವರ ಮಗ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದನ್ನು ನೆನಪಿಸಿಕೊಂಡು, ಅವರೆಲ್ಲ ಏನು ಬೇಕಾದರೂ ಮಾಡಬಲ್ಲರು ಎಂದಿದ್ದಾರೆ.
ʻʻ ಬಿಜೆಪಿ ಅಭ್ಯರ್ಥಿ ಮಗ ಗಾಳಿಯಲ್ಲಿ, ನೆಲಕ್ಕೆ ಗುಂಡು ಹಾರಿಸಿದ್ದು ನೋಡಿದ್ದೀರಿ.. ಬಿಜೆಪಿ ಟಿಕೆಟ್ ಘೋಷಣೆ ಸಂದರ್ಭದಲ್ಲಿ ಅವರ ಮಗ ಸಂಭ್ರಮಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ರು.. ಈಗ ಹೊಸದೊಂದು ನಾಟಕ ಅನುಕಂಪ ಗಿಟ್ಟಿಸಲು ಮಾಡಿದ್ದಾರೆ ಎಂದು ಖಚಿತ ಮಾಹಿತಿಯಿಂದ ತಿಳಿದು ಬಂದಿದೆʼʼ ಎಂದು ಎಂ.ಬಿ. ಪಾಟೀಲ್ ಹೇಳಿದ್ದು, ಇದೊಂದು ನಾಟಕ ಎಂದು ಪರೋಕ್ಷವಾಗಿ ಚುಚ್ಚಿದ್ದಾರೆ.
ಎಂ.ಬಿ. ಪಾಟೀಲ್ ಸೋದರನ ಪತ್ನಿ ಪ್ರಚಾರಕ್ಕೆ ಅಡ್ಡಿ
ಅತ್ತ ಬಿಜೆಪಿ ಅಭ್ಯರ್ಥಿಯ ಕಥೆ ಹೀಗಾದರೆ, ಇತ್ತ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ್ ಅವರ ಸೋದರ, ಎಂಎಲ್ಸಿ ಆಗಿರುವ ಸುನಿಲ್ ಗೌಡ ಪಾಟೀಲ್ ಅವರ ಪತ್ನಿಯ ಪ್ರಚಾರಕ್ಕೆ ಬಿಜೆಪಿಯವರು ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ರಾಂಪೂರ ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಅಡ್ಡಿ ಮಾಡಿದರು. ಈ ವೇಳೆ ನಡೆದ ತಳ್ಳಾಟದಿಂದ ಸುನೀಲ್ ಗೌಡ ಪಾಟೀಲ್ ಪತ್ನಿ ರೇಣುಕಾ ಪಾಟೀಲ್ ಕೈಗೆ ಗಾಯವಾಗಿದೆ ಎಂದು ಆರೋಪಿಸಲಾಗಿದೆ.
ನಾನು ಪ್ರಚಾರ ಮಾಡುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಆಕ್ಷೇಪಿಸಿದರು. ನಾವು ಯಾವ ಮಾತು ಆಡದೆ ಇದ್ದಾಗಲೂ ಏರಿ ಬಂದರು. ಈ ವೇಳೆ ಅವರನ್ನು ತಡೆಯಲು ಕೈ ಮುಂದೆ ಮಾಡಿದಾಗ ಅದಕ್ಕೇ ಏಟು ಬಿತ್ತು. ಆಸ್ಪತ್ರೆಯಲ್ಲಿ ಕೈ ಮೂಳೆ ಮುರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ. ತುಂಬಾ ನೋವು ಕೂಡಾ ಇದೆ ಎಂದು ರೇಣುಕಾ ಪಾಟೀಲ್ ಹೇಳಿದ್ದಾರೆ.
ನಮ್ಮಂತಹವರಿಗೆ ಹೀಗೆ ಮಾಡ್ತಾರೆ ಅಂದರೆ ಜನಸಾಮಾನ್ಯರ ಪರಿಸ್ಥಿತಿ ಏನು? ಬಬಲೇಶ್ವರದಲ್ಲಿ ಬಿಜೆಪಿಯವರಿಂದಾಗಿ ಮಹಿಳೆಯರ ಪಾಲಿಗೆ ಅಸುರಕ್ಷಿತ ಸ್ಥಿತಿ ನಿರ್ಮಾಣವಾಗಿದೆ ಎಂದು ರೇಣುಕಾ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ : Karnataka Election 2023: ಬೀದಿ ಬೀದಿಯಲ್ಲಿ ಕಾಂಚಾಣದ ನರ್ತನ, ಮರದ ಬುಡದಲ್ಲೂ ಸಿಕ್ಕಿತು ಹಣ! ಐಟಿ ರೈಡ್‌ನಲ್ಲಿ ಕೋಟಿಗಟ್ಟಲೆ ವಶ