Site icon Vistara News

Karnataka Election : ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್‌ ಹಾಕಿ ಎಂದವನ ಮೇಲೆ ಕೆಂಡಾಮಂಡಲ

karnataka-election: Congress fumes over Bajarang dal activists Whats app status

karnataka-election: Congress fumes over Bajarang dal activists Whats app status

ಚಿಕ್ಕಮಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ‌ (Karnataka Election 2023) ಮತದಾನ ಮುಗಿದು ಇನ್ನು ಫಲಿತಾಂಶಕ್ಕಾಗಿ ಕಾಯುವ ಸಮಯ. ಇದರ ನಡುವೆಯೇ ಮತದಾನದ ದಿನ ನಡೆದ ರಾದ್ಧಾಂತಗಳ ಪಶ್ಚಾತ್‌ ಕಂಪನಗಳು ಮುಂದುವರಿದಿವೆ. ಜನರು ಪರಸ್ಪರ ಬೈದಾಡುವುದು, ಜಗಳವಾಡುವುದು, ಹೊಯ್‌ಕೈಗಳಲ್ಲಿ ಭಾಗವಹಿಸಿರುವ ನಡುವೆಯೇ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು (Social media post) ಕೂಡಾ ವಿವಾದಕ್ಕೆ ಕಾರಣವಾಗಿದೆ. ಚಿಕ್ಕಮಗಳೂರಿನ ತರೀಕೆರೆಯಲ್ಲಿ ಬಜರಂಗದಳ ಕಾರ್ಯಕರ್ತನೊಬ್ಬ (Bajarang dal activist) ಹಾಕಿದ ಪೋಸ್ಟ್‌ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಕಾರ್ತಿಕ್ ತರೀಕೆರೆ ತಾಲೂಕಿನ ರಂಗೇನಹಳ್ಳಿ ಗ್ರಾಮದ ನಿವಾಸಿಯಾಗಿರುವ ಬಜರಂಗ ದಳ ಕಾರ್ಯಕರ್ತ ಕಾರ್ತಿಕ್‌ ಹಾಕಿದ ವಾಟ್ಸ್‌ ಆಪ್‌ ಸ್ಟೇಟಸ್‌ ಕಾಂಗ್ರೆಸ್‌ ನಾಯಕರನ್ನು, ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದೆ.

ʻʻಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿʼ ಎನ್ನುವುದು ಕಾರ್ತಿಕ್‌ ಹಾಕಿದ ಸ್ಟೇಟಸ್‌. ಈ ಸ್ಟೇಟಸ್ ನೋಡಿ ರೊಚ್ಚಿಗೆದ್ದ ಸ್ಥಳೀಯರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಕಾರ್ಯಕರ್ತರಿಂದ ಪ್ರತಿಭಟನೆ

ಲಕ್ಕವಳ್ಳಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ನಾಯಕರು, ಮುಸ್ಲಿಂ ಸಂಘಟನೆಗಳು ಮತ್ತು ಸ್ಥಳೀಯರು ಕಾರ್ತಿಕ್ ಬಂಧನಕ್ಕಾಗಿ ಆಗ್ರಹಿಸಿವೆ.

ಕಾರ್ತಿಕ್‌ ಹಗಲಿನಲ್ಲೇ ಸ್ಟೇಟಸ್‌ ಹಾಕಿದ್ದರೂ ವಿವಾದ ತೆರೆದುಕೊಂಡಿದ್ದು ತಡರಾತ್ರಿ. ಎಲ್ಲರೂ ಮತದಾನ ಮುಗಿಸಿ ಬಂದು ವಿರಮಿಸುತ್ತಿದ್ದಾಗ ಆತನ ಸ್ಟೇಟಸ್‌ ಚರ್ಚೆಗೆ ಕಾರಣವಾಯಿತು. ಆಗಲೇ ಎಲ್ಲರೂ ರೊಚ್ಚಿಗೆದ್ದು ಠಾಣೆಗೆ ಧಾವಿಸಿದ್ದಾರೆ.

ಇದು ಬಿಜೆಪಿಗೆ ಮತ ಹಾಕದವರ ಹೆಂಡತಿಯರನ್ನು ಅಪಮಾನ ಮಾಡುವ ಸಂಗತಿಯಾಗಿದೆ. ಮಹಿಳೆಯರಿಗೆ ಗೌರವ ನೀಡುತ್ತೇವೆ ಎನ್ನುವ ಸಂಘ ಪರಿವಾರದ ಕಾರ್ಯಕರ್ತರು ತಮ್ಮ ನಿಜ ಬಣ್ಣವನ್ನು ಈ ಮೂಲಕ ಬಯಲು ಮಾಡಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರಿನ ಮಸ್ಕಿಯಲ್ಲಿ ಕಾಂಗ್ರೆಸ್ -ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

ರಾಯಚೂರು: ರಾಯಚೂರು ಜಿಲ್ಲೆಯ ‌ಮಸ್ಕಿ ಪಟ್ಟಣದಲ್ಲಿ ಬುಧವಾರ ಮತದಾನ ಮುಕ್ತಾಯವಾದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ.

ಪಟ್ಟಣದ ಗಚ್ಚಿನಮಠ ಮತಗಟ್ಟೆ ‌ಬಳಿ ಸಿದ್ದನಗೌಡ ಎಂಬವರ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಸಿದ್ದನಗೌಡ ಅವರು ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಅವರ ಸಹೋದರರಾಗಿದ್ದಾರೆ.
ಸಿದ್ದನಗೌಡ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಿಂಧನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಯಚೂರಿನ ಮಸ್ಕಿಯಲ್ಲಿ ಸೇರಿರುವ ಕಾರ್ಯಕರ್ತರು

ಈ ನಡುವೆ ವಿಷಯ ತಿಳಿದ ಕಾಂಗ್ರೆಸ್‌ ಕಾರ್ಯಕರ್ತರು ಸಿಂಧನೂರು ‌ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಮಸ್ಕಿ ಪಟ್ಟಣದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೆಚ್ಚುವರಿ ಪೊಲೀಸರ ನಿಯೋಜಿಸಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಇದನ್ನೂ ಓದಿ : Karnataka Election: ಮತದಾನೋತ್ತರ ಹಿಂಸಾಚಾರ; ಮಂಗಳೂರಿನಲ್ಲಿ ಮಿಥುನ್ ರೈ ಕಾರಿನ ಮೇಲೆ ಕಲ್ಲು ತೂರಾಟ

Exit mobile version