ಬೆಂಗಳೂರು: ನನಗೆ ಯಾರ ಮೇಲೂ ಬೇಸರವಿಲ್ಲ. ನನಗೆ ನನ್ನ ಮೇಲೆಯೇ ಬೇಸರ. ನಾನು ಮೌನವಾಗಿ ಇದ್ದಿದ್ದೇ ತಪ್ಪಾಯಿತಾ ಅಂತ ಕೆಲವೊಮ್ಮೆ ಅನಿಸುತ್ತದೆ; ಹೀಗೆ ನೋವು ಹೇಳಿಕೊಂಡರು ಕಾಂಗ್ರೆಸ್ ಟಿಕೆಟ್ (Karnataka Election) ವಂಚಿತ ಎಚ್.ಎಂ. ರೇವಣ್ಣ (H.M Revanna). ಕುರುಬ ಸಮಾಜದ ಮುಖಂಡರು, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರು, ಕಾಂಗ್ರೆಸ್‌ನ ಕಟ್ಟಾಳುವೇ ಅಗಿದ್ದ ಎಚ್.ಎಂ. ರೇವಣ್ಣ ಒಂದೋ ದಾಸರಹಳ್ಳಿ ಇಲ್ಲವೇ ಹರಿಹರದಿಂದ ಟಿಕೆಟ್ ಕೊಡಿ ಎಂದು ಕೇಳಿದ್ದರು. ಆದರೆ, ಅವರೀಗ ಟಿಕೆಟ್ ವಂಚಿತರು.
ತಮಗೆ ಟಿಕೆಟ್ ಸಿಗದಿರುವ ಬಗ್ಗೆ ಬೇಸರದಿಂದ ಮಾತನಾಡಿದ ಅವರು ಮಧ್ಯೆ ಮಧ್ಯೆ ಭಾವುಕರೂ ಆದರು.
ʻʻನನ್ನ ವಿದ್ಯಾರ್ಥಿ ಜೀವನದಿಂದಲೇ ರಾಜಕೀಯ ಆರಂಭವಾಗಿತ್ತು. ಅವತ್ತಿನಿಂದ ಇವತ್ತಿನವರೆಗೂ ನಾನು ಕಾಂಗ್ರೆಸ್ ನೀಡಿದ ಎಲ್ಲ ಕೆಲಸಗಳನ್ನು ಮಾಡ್ತಾ ಬಂದಿದ್ದೇನೆ. ಹೇಗೆ ನಡೆಸಿಕೊಳ್ತಾರೆ ಕಾಂಗ್ರೆಸ್‌ನವರು ಅನ್ನೋದನ್ನು ನೋಡೋಣʼʼ ಎಂದರು ಎಚ್.ಎಂ ರೇವಣ್ಣ.
ʻʻನಾನು ಕಾಂಗ್ರೆಸಿಗಾ, ನನ್ನ ರಕ್ತ ಕಾಂಗ್ರೆಸ್. ನನಗೆ ನೋವಾಗಿದೆ, ಇಲ್ಲ ಅಂತ ನಾನು ಹೇಳೋದಿಲ್ಲʼʼ ಎಂದು ಭಾವುಕರಾದರು ಎಚ್ಎಮ್ ರೇವಣ್ಣ.
ಅಲ್ಲೋಗ್ತೇನೆ.. ಇಲ್ಲೋಗ್ತೇನೆ ಎನ್ನೋದೆಲ್ಲ ಸುಳ್ಳು
ʻʻನೋವಾಗಿದೆ ಅಂತ ನಾನು ಅಲ್ಲೆಲ್ಲೋ ಬಿಜೆಪಿಗೆ ಹೋಗ್ತೀನಿ ಅಂತ ಅನ್ನೋದೆಲ್ಲ ಸತ್ಯಕ್ಕೆ ದೂರವಾದ ಮಾತು. ನಾನು ನಿನ್ನೆ ಸಿಎಂ ಮೀಟ್ ಮಾಡಿದೆ. ಅಲ್ಲಿ ಹೋದೆ ಇಲ್ಲಿ ಹೋದೆ ಅಂತೆಲ್ಲ ಹೇಳ್ತಾ ಇದ್ದಾರೆ, ಅದೆಲ್ಲ ಸತ್ಯಕ್ಕೆ ದೂರವಾದ ಮಾತು. ಸಿಎಂ ನನ್ನೊಟ್ಟಿಗೆ ಮಾತನಾಡಿಲ್ಲ. ಆದರೆ ನಮ್ಮವರು, ನಮ್ಮ ಕಾಂಗ್ರೆಸ್‌ನವರು ನನ್ನೊಂದಿಗೆ ಮಾತನಾಡಿದ್ದಾರೆʼʼ ಎಂದು ಹೇಳುತ್ತಲೇ, ʻʻನನಗೆ ಯಾರ ಮೇಲೂ ಅಸಮಾಧಾನ ಇಲ್ಲ. ನನಗೆ ನನ್ನ ಮೇಲೆಯೇ ಅಸಮಾಧಾನ, ನಾನು ಇಷ್ಟು ದಿನ ಮೌನವಾಗಿದ್ದೇ ತಪ್ಪು ಅನಿಸುತ್ತೆʼʼ ಎಂದು ನುಡಿದರು.
ಯಾಕೆ ಹೀಗಾಯ್ತು ಅಂತ ಸಿದ್ದರಾಮಯ್ಯ ಅವರೇ ಹೇಳ್ಬೇಕು
ʻʻನಂಗೆ ಯಾಕೆ ಇಂಥ ಸ್ಥಿತಿ ಬಂತು ಅಂತ ಸಿದ್ದರಾಮಯ್ಯ ಅವರೇ ಹೇಳಬೇಕು. ಅವರನ್ನು ನೀವೇ ಕೇಳಿʼʼ ಎಂದು ಪತ್ರಕರ್ತರಿಗೂ ಜವಾಬ್ದಾರಿ ವಹಿಸಿದ ಅವರು, ಅವರ ಎಲ್ಲ ಹೋರಾಟಗಳಲ್ಲಿಯೂ ನಾನು ಅವರ ಪರ ನಿಂತಿದ್ದೇನೆ. ಅಷ್ಟಾದರೂ ನನಗ್ಯಾಕೆ ಟಿಕೆಟ್ ಸಿಕ್ಕಿಲ್ಲ ಅನ್ನೋದಕ್ಕೆ ಅವರೆ ಉತ್ತರಿಸ ಬೇಕುʼʼ ಎಂದು ಹೇಳಿದರು.
ಬಿಜೆಪಿಯಿಂದ ಬಂದವರಿಗೆ ಬೇಗ ಟಿಕೆಟ್ ಸಿಗುತ್ತದೆ
ʻʻಮಾಗಡಿ ಬಿಟ್ಟು ಬಂದು ನಾನು ತಪ್ಪು ಮಾಡಿದೆ ಅನಿಸುತ್ತೆ. ಅಲ್ಲಿಂದ ಬಂದ ನಂತರ ನನ್ನನ್ನು ಫುಟ್ ಬಾಲ್ ಆಡಿದ ಹಾಗೆ ಆಡಿಸುತ್ತಿದ್ದಾರೆ. ನಿನ್ನೆವರೆಗೂ ಬಿಜೆಪಿಯಲಿದ್ದು, ಇವತ್ತು ಕಾಂಗ್ರೆಸ್ ಗೆ ಬರ್ತೀವಿ ಅಂದ್ರೆ ಬನ್ನಿ ಅಂತ ಕರೆದು ಟಿಕೆಟ್ ಕೊಡ್ತಾರೆ. ಆದರೆ ಪಕ್ಷಕ್ಕಾಗಿ ದುಡಿದವರಿಗೆ ಈ ರೀತಿ ನಡೆಸಿಕೊಳ್ತಾರೆʼʼ ಎಂದು ಹೇಳಿದರು.
ಟಿಕೆಟ್ ಸಿಗದಿರುವ ವಿಷಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ, ʻʻಜಾಸ್ತಿ ಬೇಡ ಎಲ್ಲರೊಂದಿಗೆ ಮಾತನಾಡಿದ್ದೇನೆ. ಆದರೆ ಅವರೆಲ್ಲ ಏನು ಹೇಳಿದರು ಅಂತ ಹೇಳಲು ಸಾಧ್ಯವಿಲ್ಲʼʼ ಎಂದರು.
ಎಚ್.ಎಂ. ರೇವಣ್ಣ ಅವರು ನಿಷ್ಠಾವಂತರ ಕಾಂಗ್ರೆಸ್ ನಾಯಕರಾಗಿದ್ದು, 1989 ಮತ್ತು 1999ರಲ್ಲಿ ಮಾಗಡಿಯಿಂದ ಗೆದ್ದಿದ್ದರು. 2017ರಲ್ಲಿ ಸಿದ್ದರಾಮಯ್ಯ ಸಂಪುಟ ಸೇರಿ ಸಾರಿಗೆ ಮಂತ್ರಿಗಳಾದರು. ಮಾಗಡಿ ಬಾಲಕೃಷ್ಣ ಅವರಿಗಾಗಿ ಸೀಟು ಬಿಟ್ಟುಕೊಟ್ಟಿದ್ದ ಎಚ್.ಎಂ. ರೇವಣ್ಣ ಅವರು 2018ರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿರುದ್ಧ ಚನ್ನಪಟ್ಟಣದಲ್ಲಿ ಸ್ವರ್ಧಿಸಿ ಸೋಲು ಕಂಡಿದ್ದರು. ಈ ಬಾರಿ ದಾಸರಹಳ್ಳಿ ಅಥವಾ ಹರಿಹರದಿಂದ ಟಿಕೆಟ್ ಕೇಳಿದ್ದರು. ಸಿದ್ದರಾಮಯ್ಯ ಅವರನ್ನು ನಂಬಿದ್ದರು.
ಇದನ್ನೂ ಓದಿ : Inside Story: ಪರಮೇಶ್ವರ್ ಬಾಣಕ್ಕೆ ಸಭೆಯೇ ಸೈಲೆಂಟ್: ʼಬೆಂಬಲಿಗರʼ ನಡುವೆ ಆಯ್ಕೆಯ ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ