ಬಾಗಲಕೋಟೆ: ಕಾಂಗ್ರೆಸ್‌ನಲ್ಲಿ ಈಗಾಗಲೇ ಸಿಎಂ ಆಗೋದಕ್ಕೆ ಬಹಳ ಉತ್ಸಾಹದಲ್ಲಿ ಮೂರು ಮಂದಿ ಚಡ್ಡಿ ಹೊಲಿಸಿಕೊಂಡು ಕೂತಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಟೀಕಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, ಯಾವ ಇಜಾರ್ ಹೊಲಿಸ್ಯಾನ, ಯಾವ ಪೈಜಾಮ್ ಹೊಲಿಸ್ಯಾನ, ಯಾವ ಪುಲ್ ಸೂಟ್ ಹೊಲಿಸ್ಯಾನ. 93 ವರ್ಷದ ಶಾಮನೂರು ಶಿವಶಂಕ್ರಪ್ಪ ನಾನು ಮುಖ್ಯಮಂತ್ರಿ ಆಗ್ತಿನಿ ಅಂತಾರ. ಅಹಿಂದ ನಾಯಕ ನಾ ಮುಖ್ಯಮಂತ್ರಿ ಅಂತಾನ. ಗೌಡ್ರ ಸಮಾಜದಾಗ ಹುಟ್ಟಿದಾವ ನಾ ಮುಖ್ಯಮಂತ್ರಿ ಅಂತಾನ.
ನಾ ಏನು ಕಾಣದೆ ಐವತ್ತು ವರ್ಷ ಹಂಗ ಕಳೆದೆ, ರಾಜ್ಯದಲ್ಲಿ ನಾ ಸಿಎಂ ಅಂತ ದಲಿತ ನಾಯಕ ಖರ್ಗೆ ಹೇಳತಾರ. ಇಷ್ಟು ಮಂದಿ ಚಡ್ಡಿ ಇಜಾರ್ ಹೊಲಿಸಿಕೊಂಡು ಕುಂತಾರ. ಜನರಿಗೆ ಸುಳ್ಳು ಹೇಳಿ ಮೋಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಅದಕ್ಕಾಗಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅವಸಾನ ಆಗಿದೆ. ಸ್ಕ್ರ್ಯಾಪ್ ಆಗಿ ಹೋಗಿದೆ. ಚುನಾವಣೆ ಆದ ಮೇಲೆ ಇನ್ನೂ ಕೆಳಗೆ ಹೋಗುತ್ತದೆ.
ನಮಲ್ಲಿ ಯಾರೂ ಮುಖ್ಯಮಂತ್ರಿ ಆಗ್ತಿವಿ ಅಂತ ಹೇಳಲ್ಲ. ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಅನೇಕ ವರ್ಷಗಳಿಂದ ಬಡವರು ಹೋರಾಟ ಮಾಡ್ತಾ ಬಂದಿದ್ರು, ಮೀಸಲಾತಿ ಸಿಗಬೇಕು ಅಂತ. ನಾವು 101 ಜಾತಿಗೆ ಅನ್ಯಾಯ ಆಗದ ರೀತಿಯಲ್ಲಿ, ಅವರ ಜನಸಂಖ್ಯೆಗೆ ಅನುಗುಣವಾಗಿ ಹಂಚುವ ಕೆಲಸ ಮಾಡಿದ್ದೇವೆ. ಅಷ್ಟೇ ಅಲ್ಲದೇ ಪಂಚಮಸಾಲಿ, ಸಮುದಾಯ ಕೇಳ್ತಿದರು ಎಂದು ಮೀಸಲಾತಿ ಜತೆಗೆ 2% ಕೊಡುವ ಕೆಲಸ ಮಾಡಿದ್ದೇವೆ. ಆ ಕಡೆ ಒಕ್ಕಲಿಗ ಸಮುದಾಯಕ್ಕೂ ಕಲ್ಪಿಸಿದ್ದೇವೆ.
ಸಂವಿಧಾನದ ಆಶಯದ ಅನುಗುಣವಾಗಿ ಮಾಡಿದ್ದಿವಿ ಹೊರತು, ಬೇಕಾಬಿಟ್ಟಿ ಮಾಡಿಲ್ಲ. ಕಾಂಗ್ರೆಸ್‌ನವರು ಜನರಿಗೆ ಮಿಸ್ ಗೈಡ್ ಮಾಡ್ತಿದ್ದಾರೆ. ಸಮಾಜ ಇದನ್ನು ಅರ್ಥ ಮಾಡ್ಕೊಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾವು ಮಾಡಿರೋ ಮೀಸಲಾತಿ ರದ್ದು ಮಾಡ್ತಿನಿ ಅಂತ ಹೇಳಿದ್ದಾರೆ ಡಿಕೆಶಿ. ಅಷ್ಟೇ ಅಲ್ಲ ಅವೈಜ್ಞಾನಿಕ ಅಂತ ಹೇಳಿದ್ದಾರೆ.
60 ವರ್ಷ ಆಡಳಿತ ನಡೆಸಿದರೂ ಮಾಡಲು ಅವರ ಕೈಯಲ್ಲಿ ಆಗಲಿಲ್ಲ. ವೈಜ್ಞಾನಿಕವಾಗಿ ಮಾಡಲಿಕ್ಕೆ ನಿಮಗ ಯಾರು ಆಣೆ ಹಾಕಿದ್ದರೇನು ? ಬನಶಂಕರಿ ಮೇಲೆ ಆಣೆ ಹಾಕಿದ್ರಾ ಮಾಡಬೇಡ ಅಂತ? ನಮಗಿಂತ ಹೆಚ್ಚಿಗೆ 6 ವರ್ಷ ಅಧಿಕಾರದಲ್ಲಿದ್ರಿ. ಯಾಕ ಮಾಡಲಿಲ್ಲ? ಇವತ್ತ ಮಾಡಿದ್ರಾಗ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡ್ತಾರೆ. ಯಾವ ಜನಾಂಗದವರು ಮೀಸಲಾತಿಗಾಗಿ ಹೋರಾಟ ಮಾಡ್ತಿದ್ದರೋ ಅವರಿಗೆಲ್ಲ ಮೀಸಲಾತಿ ಕೊಡುವ ಕೆಲಸ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ. ಸಂವಿಧಾನದ ಚೌಕಟ್ಟಿನಲ್ಲೇ ಮಾಡಿದ್ದಾರೆ ಎಂದರು.
ನಾಲ್ಕು ತಂಡಗಳಲ್ಲಿ ಮಾಡಿದ ವಿಜಯ ಸಂಕಲ್ಪ ಯಾತ್ರೆಯನ್ನ ಯಶಸ್ವಿಗೊಳಿಸಿದ್ದೇವೆ, ಮೇ ತಿಂಗಳ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದ ಕಾರಜೋಳ, ಮೋದಿಯವ್ರು ಬಿಜೆಪಿ ಗೆಲ್ಲುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‌ನವರು 60 ವರ್ಷ ಆಡಳಿತ ಮಾಡಿ, ಪ್ರಜೆಗಳ ಧ್ವನಿಯನ್ನೆ ಕಳೆಡದಿಟ್ಟಂಥವರು. ಪ್ರಜಾಧ್ವನಿ ಮಾಡ್ತಾರೆ, ಭಾರತ ಜೋಡೋ ಯಾತ್ರೆ ಮಾಡ್ತಾರೆ. ಭಾರತವನ್ನ ತುಂಡು ತುಂಡು ಮಾಡಿದವರೇ, ಭಾರತ್ ಜೋಡೊ ಯಾತ್ರೆ ಮಾಡ್ತಾರೆ, ಇದು ಹಾಸ್ಯಾಸ್ಪದ. ನಮ್ಮ ಪಕ್ಷ ನಾವು ಮಾಡಿರೋ ಸಾಧನೆ ಮುಂದಿಟ್ಟು ಮತ ಕೇಳ್ತಿವಿ ಖಂಡಿತ ನಾವೇ ಗೆಲ್ಲುತ್ತೇವೆ ಎಂದರು.