Site icon Vistara News

Karnataka Election : ಕಾಂಗ್ರೆಸ್‌ ಪ್ರಣಾಳಿಕೆ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಕಟ್‌ ಆ್ಯಂಡ್ ಪೇಸ್ಟ್‌ ಎಂದ ತೇಜಸ್ವಿಸೂರ್ಯ

karnataka-election: Congress Manifesto is cur and paste of govt programmes, say MP Tejaswisurya

#karnataka-election: Congress Manifesto is cur and paste of govt programmes, say MP Tejaswisurya

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ರೂಪಿಸಿರುವ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ (Congress Manifesto) ಸುಳ್ಳು ಮತ್ತು ವಿಪರ್ಯಾಸಗಳಿಂದ ತುಂಬಿದೆ ಹಾಗೂ ಇದು ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಕಟ್‌ ಆ್ಯಂಡ್ ಪೇಸ್ಟ್‌ ಎಂದು ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಕಾಂಗ್ರೆಸ್ ಪ್ರಣಾಳಿಕೆ ಕಟ್ ಆ್ಯಂಡ್ ಪೇಸ್ಟ್ ನಂತಿದೆ. ಬಿಜೆಪಿ ಜಾರಿಗೊಳಿಸಿದ್ದ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಮತ್ತೆ ಪ್ರಣಾಳಿಕೆಯಲ್ಲಿ ಸೇರಿಸಿದೆ. ಬಿಜೆಪಿ ಸರ್ಕಾರ ವಿದ್ಯಾವಾಹಿನಿಯಡಿ ಉಚಿತ ಬಸ್ ಪಾಸ್, ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸಿದೆ. ಇದೇ ಯೋಜನೆಗಳನ್ನು ಕಾಂಗ್ರೆಸ್ ಮತ್ತೆ ನೀಡಿದೆ. ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಾತಿ, ಕಸ್ತೂರ್ ಬಾ ಜನೌಷಧಿ ಕೇಂದ್ರಗಳ ಸ್ಥಾಪನೆ, ಮನೆಗಳಿಗೆ ನೀರು ಪೂರೈಕೆ, ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿದೆ. ಆದರೆ, ಇವೆಲ್ಲವನ್ನೂ ಬಿಜೆಪಿ ಸರ್ಕಾರ ಜಾರಿಗೊಳಿಸಿದೆʼʼ ಎಂದು ತೇಜಸ್ವಿ ಸೂರ್ಯ ಹೇಳಿದರು.

ʻʻಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನೇ ಗಂಭೀರವಾಗಿ ಪರಿಗಣಿಸಿಲ್ಲ. ನಾಲ್ಕೈದು ಹುಡುಗರನ್ನು ಕೂರಿಸಿ ಪ್ರಣಾಳಿಕೆಯನ್ನು ಆತುರವಾಗಿ ಸಿದ್ಧಪಡಿಸಿದಂತಿದೆ. ಜನರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲʼʼ ಎಂದು ತೇಜಸ್ವಿ ಸೂರ್ಯ ಹೇಳಿದರು.

ಲೋಕಾಯುಕ್ತಕ್ಕೆ ಶಕ್ತಿ ತುಂಬೋದು ಹಾಸ್ಯಾಸ್ಪದ!

ಲೋಕಾಯುಕ್ತಕ್ಕೆ ಶಕ್ತಿ ತುಂಬಲಾಗುವುದು ಎಂದು ಕಾಂಗ್ರೆಸ್ ಹೇಳಿರುವುದು ಹಾಸ್ಯಾಸ್ಪದ. ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಆರಂಭಿಸಿದ್ದರು. ಇದಕ್ಕೆ ಮುಖ್ಯಮಂತ್ರಿಯವರೇ ಅಧ್ಯಕ್ಷರಾಗಿರುತ್ತಾರೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಎಸಿಬಿ ಬದಲಿಗೆ ಮತ್ತೆ ಲೋಕಾಯುಕ್ತಕ್ಕೆ ಶಕ್ತಿ ತುಂಬಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಮಹದಾಯಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಆದರೆ, ಸೋನಿಯಾ ಗಾಂಧಿ ಕರ್ನಾಟಕಕ್ಕೆ ಒಂದೇ ಹನಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು. ಆದರೆ, ಬಸವರಾಜ ಬೊಮ್ಮಾಯಿ ಈ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿ 1 ಸಾವಿರ ಕೋಟಿ ಒದಗಿಸಿದೆ ಎಂದು ಮಾಹಿತಿ ನೀಡಿದರು.

ರೈತರಿಗೆ ಜಾರಿಗೊಳಿಸಲಾಗಿದ್ದ ಯಶಸ್ವಿನಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿತ್ತು. ಈಗ ಮತ್ತೆ ಜಾರಿಗೆ ತರುವುದಾಗಿ ಹೇಳುತ್ತಿದೆ. ಬ್ರಹ್ಮಾವರ ವಾಣಿ ವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸುವುದಾಗಿ ಕಾಂಗ್ರೆಸ್ ಹೇಳಿದೆ. ಆದರೆ, ಮಂಡ್ಯದ ಮೈಷುಗರ್ ಕಾರ್ಖಾನೆಯನ್ನು ಬಂದ್ ಮಾಡಿದ್ದೇ ಕಾಂಗ್ರೆಸ್ ಸರ್ಕಾರ. ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವುದಾಗಿ ಕಾಂಗ್ರೆಸ್ ಹೇಳಿದೆ. ಆದರೆ, ರಾಮನಗರ, ಚನ್ನಪಟ್ಟಣ ಸೇರಿದಂತೆ ಇತರೆಡೆ ಡಿ.ಕೆ.ಶಿವಕುಮಾರ್ ಸೇರಿ 199 ಮಂದಿ ವಿರುದ್ಧ ಅಕ್ರಮ ಗಣಿಕಾರಿಕೆ ಪ್ರಕರಣಗಳಿವೆ ಎಂದು ಆರೋಪಿಸಿದರು.
ಕಾಶ್ಮೀರ ಪಂಡಿತರಿಗೆ ಸಾಂಸ್ಕøತಿಕ ಕೇಂದ್ರ ಸ್ಥಾಪಿಸುವುದಾಗಿ ಕಾಂಗ್ರೆಸ್ ಹೇಳಿದೆ. ಆದರೆ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಾಶ್ಮೀರ ಪಂಡಿತರ ಪರಿಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಐತಿಹಾಸಿಕ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಆದರೆ, ತಾನು ಅಧಿಕಾರದಲ್ಲಿದ್ದಾಗ ಇಂತಹ ಪ್ರಯತ್ನವನ್ನು ಕಾಂಗ್ರೆಸ್ ಮಾಡಿರಲಿಲ್ಲ. ಬಿಜೆಪಿ ಸರ್ಕಾರ ಅಂಜನಾದ್ರಿ ಬೆಟ್ಟ ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದರು ತೇಜಸ್ವಿಸೂರ್ಯ.

ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ನೀಡುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಕನ್ನಡ ವಿರೋಧಿಯಾಗಿದೆ. ಬಜರಂಗದಳವನ್ನು ನಿಷೇಧಿಸುತ್ತೇವೆ ಎನ್ನುವುದರ ಮೂಲಕ ಕಾಂಗ್ರೆಸ್, ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ಹೇಳುತ್ತಿದೆ ಎಂದು ತೇಜಸ್ವಿ ಸೂರ್ಯ ಟೀಕಿಸಿದರು.

ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು. ಹಿಂದೂ ಯುವಕರ ಹತ್ಯೆಯಾಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಗೂಂಡಾರಾಜ್, ಇಸ್ಲಾಮೀಕರಣ, ಭಯೋತ್ಪಾದನೆ, ಭ್ರಷ್ಟಾಚಾರ ಹೆಚ್ಚಾಗುವುದು ಪ್ರಣಾಳಿಕೆಯಿಂದಲೇ ಗೊತ್ತಾಗುತ್ತದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ಒಂದು ಕಡೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಗೆ ವೇಗ ನೀಡಿ, ಸಮರ್ಥ ನಾಯಕತ್ವದಲ್ಲಿ 25 ವರ್ಷಗಳ ದೂರದೃಷ್ಟಿಯೊಂದಿಗೆ ಸಾಗುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್‍ನ ಕೋಮುವಾದಿ ಗುಣ ಬಯಲಾಗುತ್ತಿದೆ. ಓಲೈಕೆಗಾಗಿ ಶ್ರೀರಾಮ ಕಾಲ್ಪನಿಕವೆಂದಿದ್ದ ಕಾಂಗ್ರೆಸ್ ಈಗ ಹನುಮನನ್ನೂ ಬಿಟ್ಟಿಲ್ಲ. ಬಜರಂಗದಳವನ್ನು ಪಿಎಫ್‍ಐನೊಂದಿಗೆ ಹೋಲಿಸಿ ಕಾಂಗ್ರೆಸ್ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆಕ್ಷೇಪಿಸಿದರು.

ಪಿಎಫ್‍ಐ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಜಾತ್ಯತೀತವೆಂದು ಕಾಂಗ್ರೆಸ್ ಹೇಳಿಕೊಳ್ಳುತ್ತದೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಪಿಎಫ್‍ಐ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಇದೀಗ ನಿಷೇಧಿತ ಪಿಎಫ್‍ಐಯನ್ನು ಬಜರಂಗದಳಕ್ಕೆ ಹೋಲಿಸುತ್ತಿದೆ. ದೇಶದ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಿದ ಕಾಂಗ್ರೆಸ್ ಸರ್ಕಾರ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿತ್ತು. ಇದೇ ಕಾಂಗ್ರೆಸ್ ಇದೀಗ ಎಸ್‍ಡಿಪಿಐನೊಂದಿಗೆ ಸಖ್ಯ ಹೊಂದಿದೆ. ಸುಳ್ಳು, ದಾರಿತಪ್ಪಿಸುವ ಪ್ರಚಾರದಲ್ಲಿ ಕಾಂಗ್ರೆಸ್ ತೊಡಗಿದೆ. ಆದರೆ ನರೇಂದ್ರಮೋದಿಯವರ ಸರ್ಕಾರ ಅಭಿವೃದ್ಧಿ, ಎಲ್ಲರೂ ಒಳಗೊಳ್ಳುವಿಕೆ, ಸಾಂಸ್ಕøತಿಕ ಇತಿಹಾಸ ಸಂರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಗೌರವ ಭಾಟಿಯಾ ಹೇಳಿದರು.

ಸುಳ್ಳು ಭರವಸೆಗಳಿಗೆ ಹೆಸರಾಗಿರುವ ಕಾಂಗ್ರೆಸ್ ಇದೀಗ ಗ್ಯಾರಂಟಿಗಳನ್ನು ನೀಡುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಗಳು ಇದುವರೆಗೆ ಈಡೇರಿಲ್ಲ. ರಾಜ್ಯದ ಜನತೆ ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆ ಎಂದು ನುಡಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಉಪಸ್ಥಿತರಿದ್ದರು.

ಇದನ್ನೂ ಓದಿ : Karnataka Election: ಕಾಂಗ್ರೆಸ್‌ ಸರ್ಕಾರ ಇದ್ದಾಗ ಯಾಕೆ ಪಿಎಫ್ಐ, ಬಜರಂಗದಳ ಬ್ಯಾನ್‌ ಮಾಡಲಿಲ್ಲ: ಎಚ್‌.ಡಿ. ಕುಮಾರಸ್ವಾಮಿ

Exit mobile version