Site icon Vistara News

Karnataka Election : ಬಜರಂಗ ಗಲಾಟೆ ನಡುವೆ ಮೋದಿ ಪತ್ನಿ ವಿಷಯ ಪ್ರಸ್ತಾಪ; ಎಲ್ಲಿ ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದ ಉಗ್ರಪ್ಪ

VS Ugrappa rakes up Modis wife issue and connects to RamBhakthi

VS Ugrappa rakes up Modis wife issue and connects to RamBhakthi

ಬೆಂಗಳೂರು: ಕಾಂಗ್ರೆಸ್‌ ತನ್ನ ವಿಧಾನಸಭಾ ಚುನಾವಣೆ (Karnataka Election 2023) ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವುದಾಗಿ ಭರವಸೆ ನೀಡಿದ್ದನ್ನು ಪ್ರತಿಭಟಿಸಿ ಬಿಜೆಪಿ ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ (Hanuman Chalisa) ಪಠಣ ಅಭಿಯಾನವನ್ನು ನಡೆಸುತ್ತಿರುವ ನಡುವೆಯೇ ಕಾಂಗ್ರೆಸ್‌ ರಾಮ ಭಕ್ತರ ಪ್ರಸ್ತಾಪದೊಂದಿಗೆ ಪ್ರಧಾನಿ ನರೇಂದ್ರ ಮೋದಿ (Prime minister Narendra Modi) ಅವರ ಪತ್ನಿಯ ವಿಚಾರವನ್ನು ಎಳೆದುತಂದಿದೆ.

ಚಾಮರಾಜ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಈ ಪ್ರಶ್ನೆಯನ್ನು ಎತ್ತಿದ್ದಾರೆ.

ʻʻಇಡೀ ರಾಮಾಯಣ ನಡೆದಿರುವುದು ಸೀತೆಗಾಗಿ ಅಲ್ಲವೇ? ಈಗ ಪ್ರಧಾನಿ ನರೇಂದ್ರ ಮೋದಿ ಸೇರಿ ಆಧುನಿಕ ರಾಮ ಭಕ್ತರಿಗೆ ಕೇಳುತ್ತೇನೆ, ಪ್ರಧಾನಿ ಮೋದಿ ತಮ್ಮ ಶ್ರೀಮತಿಯನ್ನು ಎಲ್ಲಿ ಬಿಟ್ಟಿದ್ದಾರೆ? ಅವರಿಗೆ ಮಾಸಿಕ ಭತ್ಯ ಏನಾದ್ರು ಕೊಡುತ್ತಿದ್ದಾರಾ?ʼʼ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಶ್ರೀಮತಿಯವರಾದ ಜಸೋದಾ ಬೆನ್‌ ಅವರು ಅವರು ಪ್ರತಿವರ್ಷ ಅಂಜನಾದ್ರಿ ಹಂಪಿಗೆ ಬಂದು ಪೂಜೆ ಮಾಡಿಕೊಂಡು ಹೋಗುತ್ತಾರೆ. ಅವರು ನಿಜವಾದ ಹನುಮ ಭಕ್ತರು. ಆಕೆಗೆ ನಮಸ್ಕಾರ ಮಾಡುತ್ತೇನೆ‌. ಪ್ರಧಾನಿ ಮೋದಿ ಅವರು ಇವರು ರಾಮನ, ಹನುಮನ ಭಕ್ತರಾಗಿದ್ರೆ ಅವರ ಆದರ್ಶ ಪಾಲಿಸಲಿʼʼ ಎಂದು ಉಗ್ರ ಸವಾಲು ಹಾಕಿದರು.

ಬಿಜೆಪಿ ಹಿಂದೂ ಸಿದ್ಧಾಂತದ ವಿರೋಧಿ ಎಂದ ಉಗ್ರಪ್ಪ

ʻʻʻಹಿಂದೂ ಸಿದ್ಧಾಂತದ ವಿರೋಧಿ ಯಾರಾದರೂ ಇದ್ದರೆ ಅದು ಬಿಜೆಪಿ. ಸ್ವಾಮಿ ವಿವೇಕಾನಂದರಿಗಿಂತ ದೊಡ್ಡ ಹಿಂದೂ ಫಿಲಾಸಫರ್‌ ಬೇಕಾ? ವಿವೇಕಾನಂದರು ʻಮೈಡಿಯರ್ ಬ್ರದರ್ಸ್‌ ಎಂಡ್‌ ಸಿಸ್ಟರ್ಸ್‌ʼ ಅಂದ್ರು. ಆದರೆ, ಬಿಜೆಪಿಯವರು ಮಾತ್ರ ಅವರು ಬೇಡ ಇವರು ಬೇಡ ಅಂತಾರೆʼʼ ಎಂದು ಹೇಳಿದರು ಉಗ್ರಪ್ಪ.

ಮೋದಿ ಪ್ರತಿದಿನ ರಾಮಾಯಣ ಓದುತ್ತಾರಾ?

ʻʻಇವರು ರಾಮನ, ಹನುಮನ ಭಕ್ತರು ಅಂತಾರೆ. ಅವರ ಆದರ್ಶ ಪಾಲಿಸಬೇಕು‌. ನಾನು ಹನುಮನ ಭಕ್ತ. ನಾನು ಪ್ರತಿದಿನ ರಾಮಾಯಣ ಓದಿ ಮಲಗುತ್ತೇನೆ. ಮೋದಿ ಹಾಗೂ ಇವರು ರಾಮಾಯಣ ಓದಿದ್ದಾರಾ?ʼʼ ಎಂದು ಕೇಳಿದರು.

ʻʻನಾವು ಪ್ರಣಾಳಿಕೆಯಲ್ಲಿ ಬಜರಂಗ ದಳ, ಪಿಎಫ್ ಐ ಬ್ಯಾನ್ ಮಾಡುತ್ತೇವೆ ಅಂದಿದ್ದೇವೆ. ಯಾರು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಾರೋ ಅವರ ವಿರುದ್ಧ ಕ್ರಮ ನಮ್ಮದು. ಸಮಾಜಘಾತುಕ ಶಕ್ತಿಗಳಿಗೆ ನಾವು ಒಂದು ಸಂದೇಶ ಕೊಟ್ಟಿದ್ದೇವೆʼʼ ಎಂದು ಹೇಳಿದರು ವಿ.ಎಸ್‌. ಉಗ್ರಪ್ಪ.

ಇದು ಸತ್ಯ ಮತ್ತು ಅಸತ್ಯದ ನಡುವಿನ ಸಮರ

ʻʻಇಂದು ಸತ್ಯ ಮತ್ತು ಅಸತ್ಯದ ನಡುವೆ ನಡೆಯುತ್ತಿರುವ ಚುನಾವಣೆ. ಸತ್ಯ ಕಾಂಗ್ರೆಸ್ ಪರವಾಗಿದೆ. ಅಸತ್ಯ ಬಿಜೆಪಿ ಪರವಾಗಿದೆ. ಸದ್ಯ ಸತ್ಯದ ಪರವಾಗಿ ಗಾಳಿ ಬೀಸುತ್ತಿದೆ. ಮೋದಿ ಮತ್ತು ಅವರ ತಂಡ ಅಸತ್ಯದ ಸೌಧ ಕಟ್ಟಿದ್ದಾರೆ. ಆದ್ರೆ ಅದು ಬಹಳ ದಿನ ಉಳಿಯುವುದಿಲ್ಲ. ಮೇ 13ಕ್ಕೆ ಆ ಸೌಧ ಕುಸಿಯುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ 135-150 ಸ್ಥಾನ ಗೆಲ್ಲುತ್ತದೆʼʼ ಎಂದು ಉಗ್ರಪ್ಪ ಹೇಳಿದರು.

ʻʻಸುಳ್ಳಿನ ಸರದಾರ ಅಂತ ಯಾರಾದ್ರೂ ಇದ್ದರೆ ಅದು ನರೇಂದ್ರ ಮೋದಿ. 2014 ರಲ್ಲಿ ಪ್ರಧಾನಿಯಾಗಬೇಕಾದ್ರೆ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ‌. ಎಲ್ಲಾ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಅಂತ ಹೇಳಿದವರು. ಆದರೆ ಈಗ ಜನಸಾಮಾನ್ಯರ ಬದುಕಿನ ಮೇಲೆ ಚಪ್ಪಡಿ ಕಲ್ಲು ಎಳೆದಿದ್ದಾರೆ. ಮೋದಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದರು. ಕಪ್ಪು ಹಣ ತಂದು ಬಿಡುತ್ತೇವೆ, ಪ್ರತಿ ಖಾತೆಗೆ 15 ಲಕ್ಷ ರೂ.ಹಾಕುತ್ತೇವೆ ಅಂದ್ರು. ಭ್ರಷ್ಟಾಚಾರ ಮಾತ್ರ ನಿಲ್ಲಿಸಲು ಇವರಿಗೆ ಆಗಿಲ್ಲ. ಭ್ರಷ್ಟಾಚಾರ ಗಂಗೋತ್ರಿಯನ್ನ ಬಿಜೆಪಿ ಅವರು ಹರಿಸಿದ್ದಾರೆʼʼ ಎಂದು ಹೇಳಿದರು ಉಗ್ರಪ್ಪ.

ʻʻಸೈನಿಕರಿಗೆ ವಿಮಾನ ಕೊಡಲು ಆಗಲಿಲ್ಲ. ಈ ಕಾರಣದಿಂದ ಪುಲ್ವಾಮ ದಾಳಿಯಾಯಿತು. ಆದರೆ ಪುಲ್ವಾಮ ದಾಳಿ ಇಟ್ಟುಕೊಂಡು ಕಳೆದ ಚುನಾವಣೆ ಗೆದ್ದರು. ಕಾಂಗ್ರೆಸ್‌ 1947ರಿಂದ 2014ರ ವರೆಗೆ ದೇಶದಲ್ಲಿ 5100 ಡ್ಯಾಂ ಕಟ್ಟಿದೆ. ನಿಮ್ಮ ಯೋಗ್ಯತೆಗೆ ಒಂದು ಡ್ಯಾಂ ಕಟ್ಟಲು ಸಾಧ್ಯವಾಗಲಿಲ್ಲʼʼ ಎಂದೂ ಉಗ್ರಪ್ಪ ಹರಿಹಾಯ್ದರು.

ಇದನ್ನೂ ಓದಿ: Karnataka Election: ಕಾಂಗ್ರೆಸ್‌ಗೆ ಪಾಟಿಸವಾಲು; ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಣ

Exit mobile version