Site icon Vistara News

Karnataka Election: ಕಾಂಗ್ರೆಸ್‌ಗೆ 113, 120 ಸ್ಥಾನ ಸಾಕಾಗಲ್ಲ, 150 ಸ್ಥಾನವನ್ನೇ ನೀಡಬೇಕು ಅಂತ ಖರ್ಗೆ ಹೇಳಿದ್ಯಾಕೆ?

AICC president mallikarjun Kharge

ಚಿಕ್ಕಮಗಳೂರು: ರಾಜ್ಯದಲ್ಲಿ ಸರ್ಕಾರ ಬದಲಾಗಬೇಕು ಎಂದು ಜನರು ಬಯಸಿದ್ದಾರೆ. ಆದರೆ, ಕಾಂಗ್ರೆಸ್‌ಗೆ ಕೇವಲ 113, 120 ಸೀಟು ಕೊಟ್ಟರೆ ಸಾಲದು. ಯಾಕೆಂದರೆ, ಇದು ಕಳ್ಳತನದ ಸರ್ಕಾರ. ಕೇವಲ ಮ್ಯಾಜಿಕ್‌ ಸಂಖ್ಯೆಯನ್ನು ನೀಡಿದರೆ, ಕೆಲವು ಸ್ಥಾನ ಹೆಚ್ಚು ನೀಡಿದರೆ ಅವರು ನಾಲ್ಕೈದು ಜನರನ್ನು ಹೊತ್ತುಕೊಂಡು ಹೋಗಿ ಸರ್ಕಾರ ಮಾಡುತ್ತಾರೆ. ಮಧ್ಯಪ್ರದೇಶ, ಗೋವಾದಲ್ಲಿ ಇದನ್ನೇ ಮಾಡಿದ್ದು. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka election)ಕಾಂಗ್ರೆಸ್‌ಗೆ 150 ಸ್ಥಾನಗಳನ್ನು ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ದೊಡ್ಡ ಸಂಖ್ಯೆಯ ಸ್ಥಾನಗಳೊಂದಿಗೆ ಗೆಲ್ಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿದರು.

ಬದಲಾವಣೆಗೆ ನಾಂದಿ ಹಾಡಿದ ಚಿಕ್ಕಮಗಳೂರು

ʻʻಬಹಳ ದಿನಗಳ ನಂತರ ಕಾಫಿ ನಾಡಿಗೆ ಬಂದಿದ್ದೇನೆ. ಚಿಕ್ಕಮಗಳೂರು ನಮ್ಮ ಪಾಲಿಗೆ ಅದೃಷ್ಟದ ಜಿಲ್ಲೆ. 1979ರಲ್ಲಿ ಇಂದಿರಾ ಗಾಂಧಿ ಅವರು ಚುನಾವಣೆಗೆ ನಿಂತಾಗ ಬಂದಿದ್ದೆವು. ಆ ಎಲೆಕ್ಷನ್ ಗೆದ್ದ ಮೇಲೆ ದೇಶದ ಚಿತ್ರಣವೇ ಬದಲಾಗಿ ಹೋಯಿತು. 1980ರ ಸಾರ್ವತ್ರಿಕ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಮೆಜಾರಿಟಿ ಬಂತು. ಹೀಗೆ ಕಾಂಗ್ರೆಸ್‌ಗೆ ದೇಶದ ಚಿತ್ರಣ ಬದಲು ಮಾಡುವ ಶಕ್ತಿ ನೀಡಿದ್ದು ಕಾಫಿನಾಡು. ಈ ಬಾರಿ ಮತ್ತೆ ಅಂತದ್ದೇ ಶಕ್ತಿ ಪಡೆಯುತ್ತೇವೆʼʼ ಎಂದು ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ʻʻಈ ಚುನಾವಣೆ ಬಹಳ ಮಹತ್ವದ ಚುನಾವಣೆ. ರಾಜ್ಯದ ದೃಷ್ಟಿಯಿಂದ ಅಷ್ಟೆ ಅಲ್ಲ, ದೇಶದ ದೃಷ್ಟಿಯಿಂದಲೂ ಒಳ್ಳೆಯ ಸಂದೇಶ ನೀಡುವ ಚುನಾವಣೆ. ಕರ್ನಾಟಕ ಅಭಿವೃದ್ಧಿ, ಪ್ರಗತಿಪರ ರಾಜ್ಯ. ಅನೇಕ ಇನ್ನೋವೇಟೀವ್ ಸ್ಕೀಂ ತಂದು ಕಾಂಗ್ರೆಸ್ ರಾಜ್ಯವನ್ನು ಅಭಿವೃದ್ಧಿ ಮಾಡಿದೆ. ಕರ್ನಾಟಕ ಅತ್ಯುತ್ತಮ ರಾಜ್ಯ ಎನ್ನುವ ಹೆಗ್ಗಳಿಕೆಯನ್ನು ಹೊಂದಿತ್ತು. ಆದರೆ ಇಂದು ಆಡಳಿತದಲ್ಲಿ ವ್ಯತ್ಯಾಸವಾಗಿರುವುದರಿಂದ ಜನರ ಅಪೇಕ್ಷೆಯಂತೆ ಇಂದು ಆಡಳಿತ ನಡೆಯುತ್ತಿಲ್ಲ. ಹಿಂದೆ ಆದರ್ಶ ಆಡಳಿತಕ್ಕಾಗಿ ಬೇರೆ ರಾಜ್ಯಗಳು ನಮ್ಮತ್ತ ನೋಡುತ್ತಿದ್ದವು. ಇವತ್ತು ಆ ಗೌರವ ಉಳಿದಿಲ್ಲ. ಅದಕ್ಕೆ ಕಾರಣ ಬಿಜೆಪಿ ಸರ್ಕಾರʼʼ ಎಂದು ಹೇಳಿದರು ಮಲ್ಲಿಕಾರ್ಜುನ ಖರ್ಗೆ.

ʻʻ40% ಕಮಿಷನ್ ಸರ್ಕಾರ ಎಂದು ಎಲ್ಲರೂ ಮಾತನಾಡುತ್ತಾರೆ. ನಾನು ಅದನ್ನೇ ಪುನರುಚ್ಛಾರ ಮಾಡಲು ಬಂದಿಲ್ಲ. ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲರು, ಲೋಕಾಯುಕ್ತದವರೆಗೂ ದೂರು ಬರೆದಿದ್ದಾರೆ. ಇತಿಹಾಸದಲ್ಲಿ ಇದುವರೆಗೆ ಯಾವ ಕಂಟ್ರಾಕ್ಟರ್ ಕೂಡಾ ದೂರು ನೀಡಿರಲಿಲ್ಲ. ಆದರೆ, ಅವರಿಗೆ ನ್ಯಾಯ ಸಿಗಲಿಲ್ಲʼʼ ಎಂದು ಬೇಸರದಿಂದ ಹೇಳಿದರು ಖರ್ಗೆ.

ಡಬಲ್‌ ಎಂಜಿನ್‌ ಹೆಸರಿಗೆ ಮಾತ್ರ, ಅಭಿವೃದ್ಧಿ ಆಗಿಲ್ಲ

ʻಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ಅನೇಕ ಬಾರಿ ರಾಜ್ಯಕ್ಕೆ ಬರುತ್ತಿದ್ದಾರೆ, ಅನೇಕ ಮಾತುಗಳನ್ನು ಹೇಳುತ್ತಾರೆ. ಆದರೆ, ರಾಜ್ಯಕ್ಕೆ ಅವರ ಕಾಲದಲ್ಲಿ ಯಾವ ಹೊಸ ಕೆಲಸವೂ ಆಗಿಲ್ಲ. ನಾಲ್ಕು ಲೈನ್‌ ರೋಡ್‌ಗೆ ಇನ್ನೆರಡು ರೋಡ್‌ ಸೇರಿಸಿ ಅದನ್ನೇ ಅಭಿವೃದ್ಧಿ ಎಂದು ಹೇಳುವುದಷ್ಟೇ ಅವರ ಚಾಳಿ. ಚಿಕ್ಕಮಗಳೂರು- ಕಡೂರು ರಸ್ತೆ ಕೆಲಸ ಮಾಡಿಸಿದ್ದು ನಾನು. ಅದರ ಉದ್ಘಾಟನೆಗೆ ದೇವೇಗೌಡರನ್ನು ಕರೆಸಿದ್ದೆ. ಯಗಚಿ‌ ಡ್ಯಾಂ ಹಾಗೇ ಬಿದ್ದಿತ್ತು, ನಾನು ಆಸಕ್ತಿ ವಹಿಸಿ ಕೆಲಸ ಮಾಡಿಸಿದ್ದೆ. ಆದರೆ, ನಾನು ಕ್ರೆಡಿಟ್‌ ಕೇಳಲ್ಲʼʼ ಎಂದು ಹೇಳಿದರು ಖರ್ಗೆ.

ʻʻಟೂರಿಸಂ ಅಭಿವೃದ್ಧಿಗೆ ಚಿಕ್ಕಮಗಳೂರು ದೊಡ್ಡ ಸೆಂಟರ್. ನೈಸರ್ಗಿಕತೆಯನ್ನು ಬಳಸಿಕೊಂಡು ಅಭಿವೃದ್ಧಿ ಮಾಡಬಹುದು. ಡಬಲ್ ಎಂಜಿನ್ ಸರ್ಕಾರ ಅಂತಾರೆ. 9 ವರ್ಷ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇತ್ತು. ಯಾಕೆ ಮಾಡಿಲ್ಲʼʼʼ ಎಂದು ಅವರು ಪ್ರಶ್ನಿಸಿದರು.

ಒಂದೇ ಜಾತಿಯಿಂದ ದೇಶ ಕಟ್ಟಲು ಆಗಲ್ಲ, ಎಲ್ಲರೂ ಜತೆ ಸೇರಬೇಕು

ರಾಜ್ಯದಲ್ಲಿ ಲಿಂಗಾಯತ ಸಿಎಂಗಳು ಭ್ರಷ್ಟರಾಗಿದ್ದರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ʻʻಒಂದು ಜಾತಿಯಿಂದ ದೇಶ ಕಟ್ಟುವುದಕ್ಕೆ ಆಗುವುದಿಲ್ಲ. ಎಲ್ಲರೂ ಸೇರಿದರೆ ಮಾತ್ರ ದೇಶ ಕಟ್ಟೋಕೆ ಸಾಧ್ಯ ಒಂದೇ ಜಾತಿ-ಧರ್ಮದವರು ಬೇರೆ-ಬೇರೆ ಪಕ್ಷದಲ್ಲಿ ಇರುತ್ತಾರೆ, ಒಂದೇ ಮನೆಯಲ್ಲಿ ಇರುತ್ತಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗೋದು ದೇಶದ ಅಭಿವೃದ್ಧಿಗೆ ಪೂರಕʼʼ ಎಂದರು.

ಕಾಂಗ್ರೆಸ್‌ನೊಳಗಿನ ಮುಖ್ಯಮಂತ್ರಿ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಚುನಾವಣೆ ಆದ ಮೇಲೆ ಸದಸ್ಯರಿಂದ ಅಭಿಪ್ರಾಯ ಪಡೆದು ಮುಖ್ಯಮಂತ್ರಿಯನ್ನು ಅಂತಿಮಗೊಳಿಸುವುದು ಕ್ರಮ. ಈಗ ದಲಿತ, ಒಕ್ಕಲಿಗ, ಕುರುಬ, ಲಿಂಗಾಯತ ಅನ್ನುವುದು ಸರಿಯಲ್ಲ ಎಂದರು.

ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮತಬೇಟೆ

ಮಲ್ಲಿಕಾರ್ಜು ಖರ್ಗೆ ಅರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಚಿಕ್ಕಮಗಳೂರು ನಗರದ ಆಶ್ರಯ ಮೈದಾನದಲ್ಲಿ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶ ನಡೆಯಿತು. ತರೀಕೆರೆ ನಗರದಲ್ಲಿ ಕಡೂರು, ತರೀಕೆರೆ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ‌ನಡೆದಿದೆ.

ಇದನ್ನೂ ಓದಿ : Karnataka Election: ನಾಳೆ ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಎಂಟ್ರಿ, ಕಾಂಗ್ರೆಸ್ ʼವೋಕಲ್‌ ಫಾರ್‌ ಲೋಕಲ್‌ʼ ಪ್ರಚಾರದ ಮೆಗಾ ಪ್ಲ್ಯಾನ್!‌ ‌

Exit mobile version