ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಒಂದೊಮ್ಮೆ ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ನಡುವೆ ಕದನವೇ ನಡೆಯಲಿದೆ ಎಂದು ಬಿಜೆಪಿ ಹೇಳುತ್ತಿದೆ. ಸಾರ್ವಜನಿಕ ವಲಯದಲ್ಲೂ ಈ ಬಗ್ಗೆ ಸಾಕಷ್ಟು ಕುತೂಹಲವಿದೆ. ಇದರ ನಡುವೆಯೇ ಅವರಿಬ್ಬರ ನಡುವೆ ಜನ ಭಾವಿಸಿಕೊಳ್ಳುವ ರೀತಿಯಲ್ಲಿ, ಬಿಜೆಪಿಯವರು ಪ್ರಚಾರ ಮಾಡುವ ರೀತಿಯಲ್ಲಿ ಯಾವುದೇ ಪೈಪೋಟಿ ಇಲ್ಲ, ಅವರಿಬ್ಬರು ಆತ್ಮೀಯವಾಗಿಯೇ ಇದ್ದಾರೆ ಎಂದು ಬಿಂಬಿಸುವ ವಿಡಿಯೊವೊಂದನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ಸಜ್ಜಾಗಿದೆ.
ಚುನಾವಣಾ ಪ್ರಚಾರದ ಭರಾಟೆಯ ನಡುವೆಯೂ ಅವರಿಬ್ಬರು ಕುಳಿತು ಲೋಕಾಭಿರಾಮವಾಗಿ, ಆತ್ಮೀಯವಾಗಿ ಮತ್ತು ವೈಯಕ್ತಿಕ ವಿಚಾರಗಳನ್ನೂ ಮಾತನಾಡಿರುವ ವಿಡಿಯೊವೊಂದನ್ನು ಕಾಂಗ್ರೆಸ್ ಸಿದ್ಧಪಡಿಸಿದೆ.
ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿಚಾರದಲ್ಲಿ ಒಗ್ಗಟ್ಟಿನ ಸಂದೇಶ ರವಾನಿಸಲು ಮತ್ತೊಂದು ಯತ್ನವನ್ನು ಕಾಂಗ್ರೆಸ್ ನಡೆಸಿದೆ ಎನ್ನಲಾಗಿದೆ.
ಇದೊಂದು ಮಾತುಕತೆ ಮತ್ತು ಹೊಸ ಮಾದರಿಯ ಸಂದರ್ಶನವಾಗಿದೆ. ಪರಸ್ಪರ ಪ್ರಶ್ನೆ ಕೇಳುತ್ತಾ, ಮನಬಿಚ್ಚಿ ಮಾತನಾಡಿರುವ ನಾಯಕರು ಪ್ರಸಕ್ತ ರಾಜಕೀಯ ಬೆಳವಣಿಗೆಗಳನ್ನು ಚರ್ಚಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಕೈ ಹೇಗಿದೆ ಎಂದು ಕೇಳುವ ಮೂಲಕ ಪ್ರೊಮೋ ತೆರೆದುಕೊಳ್ಳುತ್ತದೆ. ಹಳೆ ಮೈಸೂರು ಭಾಗದಲ್ಲಿ ಒಳ್ಳೆಯ ಪ್ರಚಾರ ಆಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಮಂಡ್ಯದಲ್ಲಿ ಐದು ಸೀಟು ಗ್ಯಾರಂಟಿ ಎನ್ನುತ್ತಾರೆ.
ಜನರಿಗೆ ನಮ್ಮ ಮೇಲೆ ನಂಬಿಕೆ ಇದೆ, ಅದನ್ನು ಉಳಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರೆ, ನಾವು ನುಡಿದಂತೆ ನಡೆಯುತ್ತೇವೆ ಎನ್ನುವ ನಂಬಿಕೆ ಜನರಿಗೆ ಇದೆ. ಅದೊಂದೇ ಸಾಕು ಎನ್ನುತ್ತಾರೆ ಡಿಕೆ ಶಿವಕುಮಾರ್.
ಮಾತಿನ ಮಧ್ಯೆ ಜಗದೀಶ್ ಶೆಟ್ಟರ್ ಅವರ ಪ್ರಸ್ತಾಪವೂ ಬರುತ್ತದೆ. ಜಗದೀಶ್ ಶೆಟ್ಟರ್ ಅವರು ಬಿಜೆಪಿಯಲ್ಲಿ ದೊಡ್ಡ ನಾಯಕರಾಗಿದ್ದರು. ಆದರೆ, ಅವರನ್ನು ಕಣ್ಣೀರು ಹಾಕಿಸಿದರು ಅಂತ ಮಾತನಾಡಿಕೊಳ್ಳುತ್ತಾರೆ. ಅವರಿಗೆ ಲಿಂಗಾಯತ ನಾಯಕರೇ ಬೇಕಾಗಿಲ್ಲವಂತೆ ಎಂದು ಸಿದ್ದು-ಡಿ.ಕೆ.ಶಿ ಮಾತನಾಡಿಕೊಳ್ಳುವುದು ಗಮನ ಸೆಳೆದಿದೆ.
ಈ ನಡುವೆ, ಇಂದಿರಾ ಕ್ಯಾಂಟೀನ್ ಮುಚ್ಚಿ ಬೇರೇನೋ ತೆರೆಯುತ್ತಾರಂತಲ್ಲಾ ಎಂದು ಸಿದ್ದರಾಮಯ್ಯ ಹೇಳಿದಾಗ, ನಿನ್ನೆ ಬಿಜೆಪಿಯವರೆಲ್ಲ ಇಂದಿರಾ ಕ್ಯಾಂಟೀನ್‌ನಲ್ಲೇ ಊಟ ಮಾಡಿದ್ದು ಎಂದು ಡಿ.ಕೆ. ಹೇಳುತ್ತಾರೆ. ಆಗ ಇಬ್ಬರೂ ಜೋರಾಗಿ ನಗುತ್ತಾರೆ. ಈ ಪ್ರೋಮೋದ ಪೂರ್ಣ ವಿಡಿಯೊವನ್ನು ಮೇ 7ರಂದೇ ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ಪೈಪೋಟಿ ಇದೆ, ಒಬ್ಬರ ಬೆಂಬಲಿಗರನ್ನು ಸೋಲಿಸಲು ಇನ್ನೊಬ್ಬರು ಪ್ರಯತ್ನಿಸುತ್ತಿದ್ದಾರೆ. ತಮ್ಮ ಕಡೆಯವರೇ ಹೆಚ್ಚು ಶಾಸಕರು ಗೆದ್ದರೆ ಮುಖ್ಯಮಂತ್ರಿಯಾಗಲು ಅನುಕೂಲ ಎಂಬ ಮನೋಭಾವ ಹೊಂದಿದ್ದಾರೆ. ಹೀಗಾಗಿ ಬಿಜೆಪಿ ಜತೆಗಿನ ಫೈಟ್‌ಗಿಂತಲೂ ಆಂತರಿಕ ಹೋರಾಟವೇ ದೊಡ್ಡದಾಗಿದೆ ಎಂಬ ಸುದ್ದಿಗಳೆಲ್ಲ ಹರಡಿರುವ ನಡುವೆ ಈ ವಿಡಿಯೊದ ಮೂಲಕ ಕಾಂಗ್ರೆಸ್ ಹೊಸ ಸಂದೇಶ ನೀಡಲು ಮುಂದಾಗಿದೆ. ಇದು ಮತದಾರರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : Karnataka Election: ಬಜರಂಗದಳಕ್ಕೆ ಅಪಮಾನ; 100 ಕೋಟಿ ರೂ. ಪರಿಹಾರ ಕೇಳಿ ಕಾಂಗ್ರೆಸ್‌ಗೆ ವಿಎಚ್‌ಪಿ ನೋಟಿಸ್