Site icon Vistara News

Karnataka Election : ಸರ್ಕಾರದ ಆಯಸ್ಸು ಇನ್ನು 40 ದಿನ; ವಿಧಾನಸೌಧವನ್ನು ಗಂಜಲ ಹಾಕಿ ತೊಳೆಯುತ್ತೇವೆ: ಡಿ.ಕೆ. ಶಿವಕುಮಾರ್

tipu sultan DK Shivakumar alleges bjp for spreading false history

ಬೆಂಗಳೂರು: ‘ಬಿಜೆಪಿ ಸರ್ಕಾರ ಇಡೀ ರಾಜ್ಯಕ್ಕೆ ಕಳಂಕ ತಂದಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಅವರ ಮಂತ್ರಿಗಳು ವಿಧಾನಸೌಧದಿಂದ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಹೊರಡಲಿ, ನಾವು ಗಂಜಲ ತಂದು ವಿಧಾನಸೌಧವನ್ನು ಶುದ್ಧ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿ ಹಾಗೂ ಸದಾಶಿವನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.ಬಿಜೆಪಿ ಸರ್ಕಾರ ಕಾಂಗ್ರೆಸ್ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್, ‘ಕಾಂಗ್ರೆಸ್ ಪಕ್ಷ ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ಎರಡು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದು, ಆಮೂಲಕ 200 ಯುನಿಟ್ ಉಚಿತ, 2 ಸಾವಿರ ಪ್ರೋತ್ಸಾಹ ಧನ ನೀಡುವುದು ಖಚಿತ ಎಂದು ಘೋಷಿಸಿದ ನಂತರ ಬಿಜೆಪಿಯವರ ತಲೆ ಕೆಟ್ಟು ಹೋಗಿದೆ. ಮಹಿಳೆಯರಿಗೆ ಪ್ರೋತ್ಸಾಹ ಧನದ ಮೂಲಕ ವರ್ಷಕ್ಕೆ 24 ಸಾವಿರ, 200 ಯುನಿಟ್ ಉಚಿತ ವಿದ್ಯುತ್ ಮೂಲಕ ವಿದ್ಯುತ್ ಮೂಲಕ ವರ್ಷಕ್ಕೆ 18 ಸಾವಿರ ರೂ. ಗೃಹಿಣಿಯರಿಗೆ ಉಳಿತಾಯವಾಗುತ್ತದೆ.

ಇಂತಹ ದೊಡ್ಡ ಯೋಜನೆ, ಜನರ ಹೃದಯ ತಲುಪುವ ಯೋಜನೆ ಘೋಷಿಸಿರುವುದರ ಬಗ್ಗೆ ಸಂಕಟದಿಂದ ಅಪಸ್ವರ ಎತ್ತಿದ್ದಾರೆ. ಈ ಸರ್ಕಾರದ ಆಯಸ್ಸು ಇನ್ನು 40 ದಿನ ಇದೆ. ನೀವು ಇನ್ಯಾರಿಂದ ವಸೂಲಿ ಮಾಡುವುದು ಬಾಕಿ ಇದೆಯೋ ಅದನ್ನು ಮಾಡಿಕೊಂಡು ನಿಮ್ಮ ಟೆಂಟ್ ಖಾಲಿ ಮಾಡಿ. ನಾವು ಬಂದು ವಿಧಾನಸೌಧ ಸ್ವಚ್ಛ ಮಾಡುತ್ತೇವೆ. ಈ ಸರ್ಕಾರವನ್ನು ಜನರೇ ಓಡಿಸುತ್ತಾರೆ ಎಂದರು.

ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂಬ ಬ್ರ್ಯಾಂಡ್ ಬಂದಿದ್ದು, ಅದನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಾಲದಲ್ಲಿ 35 ಸಾವಿರ ಕೋಟಿ ಅಕ್ರಮವಾಗಿದೆ ಎಂದು ಹೇಳಿಸಿದ್ದಾರೆ. ಈಗ ಆರೋಪ ಮಾಡುವವರು ಕಳೆದ ಮೂರುವರೆ ವರ್ಷಗಳಿಂದ ಕಡಲೇಕಾಯಿ ತಿನ್ನುತ್ತಿದ್ದರಾ? ನಿಮಗೆ ಅಧಿಕಾರ ಇದ್ದಾಗ ತನಿಖೆ ಮಾಡದಂತೆ ತಡೆದಿದ್ದವರು ಯಾರು? ನಿಮ್ಮ ಅಧಿಕಾರ ಉಪಯೋಗಿಸಿಕೊಂಡು ತನಿಖೆ ಮಾಡಿಸಿ ಜನರ ಮುಂದೆ ಸತ್ಯಾಸತ್ಯತೆ ಇಡಬೇಕಾಗಿತ್ತು.

ಜನರ ಮನದಲ್ಲಿ ಕಾಂಗ್ರೆಸ್ ಬಗ್ಗೆ ಒಲವು ಮೂಡಿದೆ. ಬಿಜೆಪಿಯವರು, ಖಾಸಗಿ ಸಂಸ್ಥೆಗಳು, ಮಾಧ್ಯಮಗಳು ಸಮೀಕ್ಷೆಯಲ್ಲಿ ಬಿಜೆಪಿ ಸಂಖ್ಯಾಬಲ 60ರ ಮೇಲೆ ದಾಟುತ್ತಿಲ್ಲ. ನಮ್ಮದು 120-130 ಕ್ಷೇತ್ರಗಳು ಬರುತ್ತಿವೆ. ಇವು ನಿಜವಾಗುತ್ತದೋ ಸುಳ್ಳಾಗುತ್ತದೋ ಮುಂದಿನ ವಿಚಾರ. ಆದರೆ ಬಿಜೆಪಿಯವರಲ್ಲಿ ಯಡಿಯೂರಪ್ಪ- ಬೊಮ್ಮಾಯಿ, ಯತ್ನಾಳ್-ನಿರಾಣಿ, ಯೋಗೇಶ್ವರ್, ಅಶೋಕ್, ಮಾಜಿ ಡಿಸಿಎಂ – ಹೀಗೆ ಬೇರೆ ಬೇರೆ ನಾಯಕರ ನಡುವೆ ಆಂತರಿಕ ಜಗಳ ಹೆಚ್ಚಾಗುತ್ತಿದೆ. ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡುತ್ತೀರಲ್ಲ, ಬಿಜೆಪಿ ಪಕ್ಷದಲ್ಲಿ 32 ಗುಂಪುಗಳಿವೆ. ಇವೆಲ್ಲವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅವರುಗಳು ಬಹಿರಂಗವಾಗಿ ಮಾತನಾಡಲು ಹೆದರುತ್ತಿದ್ದಾರೆ. ಈ ಕಾರಣಕ್ಕೆ ನಮ್ಮ ಪಕ್ಷದಲ್ಲಿದ್ದ ಸುಧಾಕರ್ ಅವರಿಂದ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿಸಿದ್ದಾರೆ ಎಂದರು.

ನಿಮ್ಮ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ಮಾತನಾಡಿದರು. ಪಿಪಿಇ ಕಿಟ್, ವ್ಯಾಕ್ಸಿನ್, ಔಷಧಿ ಹಗರಣ ಮಾಡಿದ್ದಾರೆ. ಇವುಗಳ ಬಗ್ಗೆ ಈ ಸರ್ಕಾರ ಮಾತನಾಡುತ್ತಿಲ್ಲ. ಪರಿಶಿಷ್ಟ ಜಾತಿ ಪಂಗಡದ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅರ್ಜಿ ಹಾಕದವರಿಗೆ ಹಣ ನೀಡಿದ ಹಿನ್ನೆಲೆಯಲ್ಲಿ ಅಮಾನತು ಮಾಡಿದ್ದಾರೆ. ಈ ಅಧಿಕಾರಿ ನಿಮ್ಮ ಬೆಂಬಲ ಇಲ್ಲದೇ, ಅರ್ಜಿ ಹಾಕದವರಿಗೆ ಹಣ ನೀಡಲು ಸಾಧ್ಯವೇ? ಈ ರೀತಿ ದಲಿತರ ಹಣ ಲೂಟಿ ಮಾಡಿದ್ದೀರ… ಈ ಸರ್ಕಾರ ಮಠ ಮಾನ್ಯಗಳ ಹಣದಲ್ಲೂ ಕಮಿಷನ್ ಪಡೆದಿದ್ದು, ಈ ಸರ್ಕಾರ 40% ಕಮಿಷನ್ ಸರ್ಕಾರ ಎಂಬ ಬ್ರ್ಯಾಂಡ್ ಪಡೆದಿದೆ. ಈ ಬ್ರ್ಯಾಂಡ್ ಅನ್ನು ವಿಶ್ವ ಮಟ್ಟದಲ್ಲೇ ಮಾರಾಟ ಮಾಡಬಹುದು ಎಂದು ಹೇಳಿದರು.

ಇದನ್ನೂ ಓದಿ : Siddaramaiah | ನಾನು ಹಿಂದು ವಿರೋಧಿಯಲ್ಲ, ಹಿಂದುತ್ವದ ವಿರೋಧಿ: ಮಾಜಿ ಸಿಎಂ ಸಿದ್ದರಾಮಯ್ಯ

ಯಡಿಯೂರಪ್ಪ, ತಮ್ಮ ಮಗನ ಭವಿಷ್ಯದ ಬಗ್ಗೆ ಯೋಚಿಸಲಿ

ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಯಡಿಯೂರಪ್ಪನವರು ಏನಾದರೂ ಹೇಳಿಕೊಳ್ಳಲಿ. ಹೈಕಮಾಂಡ್ ಒಪ್ಪಿಗೆ ನೀಡಿದರೆ, ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಒಬ್ಬ ನಾಯಕ ತನ್ನ ಆಸೆ ಹೇಳಿಕೊಳ್ಳಬಾರದಾ? ಯಡಿಯೂರಪ್ಪನವರು ತಮ್ಮ ಹಾಗೂ ತಮ್ಮ ಮಗನ ಭವಿಷ್ಯದ ಬಗ್ಗೆ ನೋಡಿಕೊಳ್ಳಲಿ. ನಂತರ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಸ್ತ್ರೀಶಕ್ತಿ ಸಂಘಗಳ ಸಾಲದ ಪ್ರಮಾಣ ಹೆಚ್ಚಳದ ಘೋಷಣೆ ಪಕ್ಷದ ನಾಲ್ಕನೇ ಗ್ಯಾರಂಟಿ ಯೋಜನೆಯೇ ಎಂದು ಕೇಳಿದಾಗ, ‘ಅದನ್ನು ನಮ್ಮ ಗ್ಯಾರಂಟಿ ಯೋಜನೆ ಪಟ್ಟಿಯ ಕಾರ್ಯಕ್ರಮ ಎಂದು ಹೇಳಿಲ್ಲ. 10 ಕೆ.ಜಿ ಅಕ್ಕಿ ನೀಡುವ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಇನ್ನುಳಿದ ಯೋಜನೆಗಳನ್ನು ಘೋಷಿಸಲು ಇನ್ನು ಸಮಯಾವಕಾಶ ಇವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಘೋಷಿಸುತ್ತೇವೆ’ ಎಂದು ಸ್ಪಷ್ಟನೆ ನೀಡಿದರು.

Exit mobile version