Site icon Vistara News

Karnataka Election : ಬಿಜೆಪಿ ನಾಯಕ ಸಿ.ಟಿ ರವಿ ಆರೋಗ್ಯ ಏರುಪೇರು, ಆಸ್ಪತ್ರೆಗೆ ದಾಖಲು

CT Ravi Hospitalized in chikkamagaluru

CT Ravi Hospitalized in chikkamagaluru

ಚಿಕ್ಕಮಗಳೂರು : ಹಿರಿಯ ಬಿಜೆಪಿ ನಾಯಕ, ಚಿಕ್ಕಮಗಳೂರು ಕ್ಷೇತ್ರದ (Karnataka Election 2023) ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ (CT Ravi) ಅವರು ಬುಧವಾರ ತಡರಾತ್ರಿ ಆಸ್ಪತ್ರೆ ಸೇರಿದ್ದಾರೆ. ಅವರಿಗೆ ಅನಾರೋಗ್ಯ ಕಾಡಿದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಅವರಿಗೆ ಇತ್ತೀಚೆಗೆ ಕಿಡ್ನಿ ಸಮಸ್ಯೆ ಎದುರಾಗಿದ್ದು, ಶಸ್ತ್ರಕ್ರಿಯೆ ಕೂಡಾ ನಡೆದಿತ್ತು. ಇದೀಗ ಬುಧವಾರ ರಾತ್ರಿ ಆರೋಗ್ಯದಲ್ಲಿ ದಿಢೀರ್‌ ವ್ಯತ್ಯಾಸವಾಗಿದ್ದರಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಚುನಾವಣೆ ಘೋಷಣೆಗೆ ಮುನ್ನ ಸಕ್ರಿಯರಾಗಿದ್ದ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿ.ಟಿ. ರವಿ ಅವರು ಬಳಿಕ ಹೆಚ್ಚು ಸಕ್ರಿಯರಾಗಿರಲಿಲ್ಲ. ಅದೇ ಸಂದರ್ಭದಲ್ಲಿ ಅವರಿಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಸೇರಿದ್ದರು. ಆಸ್ಪತ್ರೆಯಲ್ಲಿ ಅವರು ಆಪರೇಷನ್‌ಗೆ ಒಳಗಾಗಿ ಡಿಸ್‌ಚಾರ್ಜ್‌ ಆಗಿ ಮನೆ ಸೇರಿದ್ದರು. ಆದರೆ ವಿಶ್ರಾಂತಿ ಪಡೆಯಲು ಸೂಚಿಸಿದ್ದರಿಂದ ಅವರಿಗೆ ಚುನಾವಣೆಯಲ್ಲಿ ಹೆಚ್ಚು ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಚುನಾವಣೆಯ ಒತ್ತಡ ಮತ್ತಿತರ ಕಾರಣದಿಂದ ಸಮಸ್ಯೆ ಉಲ್ಬಣಿಸಿದೆ ಎನ್ನಲಾಗಿದೆ.

ಸಿ.ಟಿ. ರವಿ ಅವರು ಅದಕ್ಕಿಂತ ಮೊದಲು ರಾಜ್ಯಾದ್ಯಂತ ಓಡಾಡಿ ಪ್ರಚಾರ ಮತ್ತು ಪಕ್ಷದ ಸಭೆಗಳಲ್ಲಿ ಭಾಗಿಯಾಗಿದ್ದರು. ಅವರು ರಾಜ್ಯದ ಪ್ರಮುಖ ಪ್ರಚಾರಕದಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದರು. ಆದರೆ, ಕೊನೆಗೆ ತಮ್ಮ ಕ್ಷೇತ್ರದಲ್ಲೇ ಪ್ರಚಾರ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ.

ಅವರ ಬದಲು ಅವರ ಪತ್ನಿ ಪಲ್ಲವಿ ರವಿ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಪತಿಯ ಅನಾರೋಗ್ಯದ ಬಗ್ಗೆ ವಿವರಿಸಿ ಮತ ಯಾಚನೆ ಮಾಡಿದ್ದರು. ಅವರು ಕೂಡಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿ.ಟಿ. ರವಿ ಅವರು ಸ್ಪರ್ಧಿಸಿದ್ದರೆ ಕಾಂಗ್ರೆಸ್‌ನಿಂದ ಹಿಂದೆ ರವಿ ಅವರ ಆಪ್ತರೇ ಅಗಿದ್ದ ತಮ್ಮಯ್ಯ ಅವರು ಕಣದಲ್ಲಿದ್ದಾರೆ. ತಮ್ಮಯ್ಯ ಅವರು ಸಂಘ ಪರಿವಾರದ ಪಟ್ಟುಗಳನ್ನು, ಸಿ.ಟಿ. ರವಿ ಅವರ ಕಾರ್ಯತಂತ್ರಗಳನ್ನು ಸ್ಪ಼ಷ್ಟವಾಗಿ ತಿಳಿದವರಾದ್ದರಿಂದ ಇಲ್ಲಿ ಸ್ಪರ್ಧೆ ಭಾರಿ ನೇರಾನೇರ ಎಂದು ಹೇಳಲಾಗುತ್ತಿತ್ತು.

ಇದನ್ನೂ ಓದಿ : Karnataka Election : ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್‌ ಹಾಕಿ ಎಂದವನ ಮೇಲೆ ಕೆಂಡಾಮಂಡಲ

Exit mobile version