Site icon Vistara News

Karnataka Election: ಸಚಿವ ಮುರುಗೇಶ್‌ ನಿರಾಣಿ ಸ್ಪರ್ಧೆ ಅನರ್ಹವಾಗಲಿ: ಕಾಂಗ್ರೆಸ್‌ ವಕ್ತಾರ ಗೌರವ್‌ ವಲ್ಲಭ್‌ ಆಗ್ರಹ

Gaurav Vallabh at congress press meet

#image_title

ಬೆಂಗಳೂರು: ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರ ಕಾರ್ಖಾನೆಯಲ್ಲಿ 963 ಬೆಳ್ಳಿ ದೀಪಗಳು ಜಪ್ತಿಯಾಗಿದ್ದು, ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಳಿಸಬೇಕು ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಗೌರವ್‌ ವಲ್ಲಭ್‌, ಈ ಹಿಂದೆ ಕುಕ್ಕರ್, ಟಿವಿ ನೀಡುವ ಸುದ್ದಿ ಕೇಳಿದ್ದಿರಿ. ಈ ಹಿಂದೆ ಇವರ ವಿರುದ್ಧ ಭೂ ಕಬಳಿಕೆ ಹಗರಣವು ಕೇಳಿಬಂದಿತ್ತು. ಬಿಜೆಪಿ 40% ಕಮಿಷನ್ ಸರ್ಕಾರ ರಾಜ್ಯದ 6.50 ಕೋಟಿ ಜನರನ್ನು ಲೂಟಿ ಮಾಡಿದೆ. ಕೇವಲ 963 ಬೆಳ್ಳಿ ದೀಪಗಳು ಮಾತ್ರವಲ್ಲ, 1.82 ಕೋಟಿ ಹಣ, 357ಲಕ್ಷ ರೂ. ಮೊತ್ತದ ುಡುಗೊರೆಗಳು ಕೂಡ ಜಪ್ತಿಯಾಗಿವೆ. 45 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು ಕೂಡ ಜಪ್ತಿಯಾಗಿರುವುದು ಆತಂಕಕಾರಿ ಬೆಳವಣಿಗೆ.

ಇದುವರೆಗೂ ರಾಜ್ಯದಲ್ಲಿ 82 ಕೋಟಿ ರೂ. ಹಣ, 19 ಕೋಟಿ ಉಡುಗೊರೆ, 56 ಕೋಟಿ ರೂ. ಮೌಲ್ಯದ ಮದ್ಯ, 16 ಕೋಟಿ ರೂ. ಮೌಲ್ಯದ ಡ್ರಗ್ಸ್, 73 ಕೋಟಿ ರೂ. ಮೌಲ್ಯದ ಚಿನ್ನ, 4.2 ಕೋಟಿ ರೂ. ಮೌಲ್ಯದ ಬೆಳ್ಳಿ ಜಪ್ತಿಯಾಗಿದ್ದು, ಚುನಾವಣೆಗೆ ಇನ್ನು 16 ದಿನಗಳು ಬಾಕಿ ಇವೆ. ಒಟ್ಟಾರೆ 253 ಕೋಟಿ ರೂ. ಮೊತ್ತ ಜಪ್ತಿಯಾಗಿದೆ. ಇದು ಯಾರ ಹಣ, ಇದೆಲ್ಲೂ ಕನ್ನಡಿಗರನ್ನು ಲೂಟಿ ಮಾಡಿರುವ ಹಣ. ಈಗ ಅದನ್ನು ಚುನಾವಣೆ (Karnataka Election) ಸಮಯದಲ್ಲಿ ಬಳಸಲಾಗುತ್ತಿದೆ.

ಭ್ರಷ್ಟಚಾರದ ಆರೋಪಿತ ಮಂತ್ರಿಯೊಬ್ಬರು, ಮತ್ತೊಬ್ಬ ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಂತ್ರಿಯನ್ನು ಮುಖ್ಯಮಂತ್ರಿ ಎಂದು ಬಿಂಬಿಸಲು ಈ ಹಿಂದೆ ಮುಂದಾಗಿದ್ದರು. ಭ್ರಷ್ಟಾಚಾರ ಆರೋಪ ಹೊತ್ತಿರುವ ಈಶ್ವರಪ್ಪ ಅವರು 2011ರಲ್ಲಿ ನಿರಾಣಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಾರ್ವಜನಿಕ ವೇದಿಕೆಯಲ್ಲಿ ಹೇಳಿದ್ದರು. ಹೀಗಾಗಿ ಬಿಜೆಪಿಯಲ್ಲಿ ಸಿಎಂ ಎಂದರೆ ಮತ್ತಷ್ಟು ಭ್ರಷ್ಟನಾಗು ಎಂದರ್ಥ. ಈ ವಿಚಾರವಾಗಿ ನಾವು ಮೂರು ಬೇಡಿಕೆಯನ್ನು ಇಡುತ್ತಿದ್ದೇವೆ.

ಹಣ, ಉಚಿತ ಉಡುಗೊರೆ, ಬೆಳ್ಳಿ ಸಾಮಾಗ್ರಿ ಜತೆಗೆ ಮಾದಕ ವಸ್ತುಗಳು ನಿರಾಣಿ ಅವರ ಕಾರ್ಖಾನೆ ವ್ಯಾಪ್ತಿಯಲ್ಲಿ ಸಿಕ್ಕಿರುವುದರಿಂದ ಚುನಾವಣಾ ಆಯೋಗ ನಿರಾಣಿ ಅವರನ್ನು ಚುನಾವಣೆ ಸ್ಪರ್ಧೆಯಿಂದ ಹೊರಹಾಕಬೇಕು. ಅವರನ್ನು ಚುನಾವಣೆ ಸ್ಪರ್ಧೆಯಿಂದ ಅನರ್ಹ ಮಾಡಬೇಕು.

ಚುನಾವಣೆಯಲ್ಲಿ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ, ಇಡಿ, ಸಿಬಿಐ, ಡಿಎಫ್ಐ, ಡಿಆರ್‌ಐ ತನಿಖಾ ಸಂಸ್ಥೆಗಳು ತನಿಖೆ ಮಾಡದೇ ಕಣ್ಣುಮುಚ್ಚಿ ಕುಳಿತಿವೆ. ಈ ಸಂಸ್ಥೆಗಳು ಕೂಡಲೇ ತನಿಖೆ ಆರಂಭಿಸಬೇಕು.

ರಾಜ್ಯದ ಜನ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಆರಿಸಲು ತೀರ್ಮಾನಿಸಿದ್ದಾರೆ. ಆದರೆ ಮಾದರಿ ನೀತಿ ಸಂಹಿತೆ ಜಾರಿ ಇದ್ದಾಗಲೂ ಭ್ರಷ್ಟಾಚಾರ ನಡೆಯುತ್ತಿದೆ. ಸಣ್ಣ ಮತ್ತು ಬೃಹತ್ ಕೈಗಾರಿಕಾ ಸಚಿವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. 2013ರಲ್ಲಿ ಇವರ ಹೆಸರು ಭೂ ಕಬಳಿಕೆ ಹಗರಣದಲ್ಲಿ ಕೇಳಿ ಬಂದಿತ್ತು. ಹೀಗಾಗಿ ಇವರನ್ನು ಚುನಾವಣೆ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು. ಈ ಬಾರಿ ಭ್ರಷ್ಟ ಬಿಜೆಪಿ ಸರ್ಕಾರ ಬೇಡ ಎಂದು ಜನ ತೀರ್ಮಾನಿಸಿದ್ದಾರೆ ಎಂದರು.

ಇದನ್ನೂ ಓದಿ: Assembly Session: ಉತ್ತರ ನೀಡುವ ವಿಷಯಕ್ಕೆ ಸದನದಲ್ಲೇ ಏಕವಚನದಲ್ಲಿ ಬೈದಾಡಿಕೊಂಡ ಮರಿತಿಬ್ಬೇಗೌಡ ಹಾಗೂ ಮುರುಗೇಶ್‌ ನಿರಾಣಿ

Exit mobile version