Site icon Vistara News

Karnataka Election | ಭಿನ್ನಮತ ಎಲ್ಲ ಪಕ್ಷದಲ್ಲೂ ಇದೆ, ಬಿಜೆಪಿಯಲ್ಲೂ ಇದೆ ಎಂದು ಒಪ್ಪಿಕೊಂಡ ಕೆ.ಎಸ್‌. ಈಶ್ವರಪ್ಪ, ಸಿದ್ದುಗೂ ಸಲಹೆ

K S Eshwarappa makes a statement against Siddaramaiah.

ಶಿವಮೊಗ್ಗ: ಮಾಜಿ ಸಚಿವ, ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ಅವರು ಕಾಂಗ್ರೆಸ್‌ ಪಕ್ಷದ ಬಗ್ಗೆ ಒಳ್ಳೆಯ ಮಾತನ್ನು ಆಡಿದ್ದಾರೆ! ಕಾಂಗ್ರೆಸ್‌ ಪಕ್ಷದಲ್ಲಿ ಶಿಸ್ತು ಮೂಡುತ್ತಿರುವುದು ಒಳ್ಳೆಯ ಬೆಳವಣಿಗೆ (Karnataka Election) ಎಂದಿದ್ದಾರೆ. ಇದರ ಜತೆಗೇ ಭಿನ್ನಮತ ಎಲ್ಲಾ ಪಕ್ಷದಲ್ಲೂ ಇದೆ, ಬಿಜೆಪಿಯಲ್ಲೂ ಇದೆ ಎಂದು ಒಪ್ಪಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ ಅವರು, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ಅವರು ಪ್ರತ್ಯೇಕ ಬಸ್‌ನಲ್ಲಿ ಹೊರಟಿದ್ದರು. ಖರ್ಗೆಯವರು ಇಬ್ಬರೂ ಒಂದೇ ಬಸ್‌ನಲ್ಲಿ ಹೋಗಬೇಕು ಎಂದು ಹೇಳಿ ಕಳಿಸಿದ್ದಾರೆ. ಇವರಿಬ್ಬರೂ ಅದನ್ನು ಒಪ್ಪಿಕೊಂಡು ಬಂದಿರುವುದು ತುಂಬಾ ಸಂತೋಷ. ರಾಜಕೀಯ ಪಕ್ಷಕ್ಕೆ ಕಡಿವಾಣ ಹಾಕಿದಾಗ ಶಿಸ್ತು ಬರುತ್ತದೆ. ಅದರಲ್ಲೂ ಕಾಂಗ್ರೆಸ್‌ನಲ್ಲಿ ಶಿಸ್ತು ಬಂದಿರುವುದು ಸ್ವಾಗತಾರ್ಹ ಎಂದು ಹೇಳಿದರು.

ʻʻರಾಜಕಾರಣದಲ್ಲಿ ಭಿನ್ನಮತ ಇರುವುದು ಸಹಜ. ಭಿನ್ನಮತ ಎಲ್ಲ ಪಕ್ಷದಲ್ಲೂ ಇದೆ, ಬಿಜೆಪಿಯಲ್ಲೂ ಇದೆʼʼ ಎಂದು ಈಶ್ವರಪ್ಪ ನುಡಿದರು.

ಪ್ರತ್ಯೇಕತೆ ಸಿದ್ದರಾಮಯ್ಯ ವಿಶೇಷ!
ಯಾರು ಏನೇ ಮಾಡಿದರೂ ತನ್ನ ದಾರಿ ಬೇರೆ ಎನ್ನುತ್ತಾ ಸಾಗುವುದು ಸಿದ್ದರಾಮಯ್ಯ ಅವರ ವಿಶೇಷತೆ. ಸಿದ್ದರಾಮಯ್ಯ ಅವರಿಗೆ ಬೇರೆ ಬೇರೆ ಮಾಡುವುದು ರಕ್ತಗತವಾಗಿ ಬಂದಿದೆ. ಜೆಡಿಎಸ್‌ನಲ್ಲಿದ್ದಾಗ ಅಹಿಂದ ಸಮಾವೇಶ ಮಾಡದಂತೆ ದೇವೇಗೌಡರು ಹೇಳಿದ್ದರು. ಆದರೂ ಸಿದ್ದರಾಮಯ್ಯ ಸಮಾವೇಶ ಮಾಡಿದರು. ಅದಕ್ಕಾಗಿಯೇ ಅವರನ್ನು ಪಕ್ಷದಿಂದ ಕಿತ್ತು ಹಾಕಿದರು ಎಂದು ನೆನಪು ಮಾಡಿದರು ಈಶ್ವರಪ್ಪ.

ʻʻಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಂತಹ ವ್ಯಕ್ತಿ. ಅವರನ್ನು ನೋಡಿ ಕಾಂಗ್ರೆಸ್ ನವರು ಒಳ್ಳೆಯ ಸಿಎಂ ಅಂತಾರೆ. ಹಾಗಾಗಿ ಸಿದ್ದರಾಮಯ್ಯ ಅವರು ಪಕ್ಷದ ನಾಯಕರು ಹೇಳಿದ್ದನ್ನು ಪರಿ ಪಾಲನೆ ಮಾಡಲಿʼʼ ಎಂದು ಈಶ್ವರಪ್ಪ ಸಲಹೆ ನೀಡಿದ್ದಾರೆ.

ʻʻನೀವು ಪಕ್ಷದ ನಾಯಕರು ಹೇಳಿದಂತೆ ಕೇಳಿದರೆ ಕಾಂಗ್ರೆಸ್‌ನ ಇತರ ನಾಯಕರು, ಕಾರ್ಯಕರ್ತರು ಮೆಚ್ಚುತ್ತಾರೆ. ಅದನ್ನು ಬಿಟ್ಟು ಕೇಂದ್ರ ನಾಯಕರು ಹೇಳಿದ್ದನ್ನು ಒಪ್ಪಿ ಇಲ್ಲಿ ಪ್ರತ್ಯೇಕ ಸಭೆ ಮಾಡಿದ್ರೆ ಜಿಲ್ಲಾ ನಾಯಕರೂ ನಿಮ್ಮಂತೆ ಮಾಡ್ತಾರೆʼʼ ಎಂದು ಈಶ್ವರಪ್ಪ ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ.

ಇದನ್ನೂ ಓದಿ | ಜನವರಿಯಲ್ಲಿ ಬಸ್‌ ಯಾತ್ರೆ; ಫೆಬ್ರವರಿಯಲ್ಲಿ ರಾಹುಲ್‌ ಪ್ರವಾಸ: ಒಗ್ಗಟ್ಟಿನ ಮಂತ್ರ ಜಪಿಸಿದ ಎಐಸಿಸಿ ಮಹತ್ವದ ಸಭೆ

Exit mobile version