ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ನಾಯಕರು ಚುನಾವಣೆಯನ್ನು (Karnataka Election 2023) ದೃಷ್ಟಿಯಲ್ಲಿಟ್ಟುಕೊಂಡು ಹನುಮಾನ್ ಚಾಲೀಸ್ (Hanuman chalisa) ಪಠಣ ಮಾಡುತ್ತಿರುವ ನಡುವೆಯೇ ಕಾಂಗ್ರೆಸ್ ನಾಯಕರು ಕೂಟಾ ಟೆಂಪಲ್ ರನ್ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರು ಬೆಳಗ್ಗೆಯೇ ಆಂಜನೇಯ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವ ಮೂಲಕ ಬಿಜೆಪಿಯ ಹನುಮಾನ್ ಚಾಲೀಸ್ ಪಠಣಕ್ಕೆ ಸಡ್ಡು ಹೊಡೆದರು. ಅದರ ಜತೆಗೇ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜತೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿದರು.
ಅತ್ತ ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಮಹಾಲಕ್ಷ್ಮಿ ಲೇಔಟ್‌ನ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡುತ್ತಿದ್ದರೆ, ಇತ್ತ ಡಿ.ಕೆ. ಶಿವಕುಮಾರ್ ಅವರು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಇರುವ ಅಂಜನೇಯ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಆ ಮೂಲಕ ತಾವೂ ಗೆಲುವಿಗಾಗಿ ಬಜರಂಗ ಬಲಿಯ ಮೊರೆ ಹೋದರು.
ಆಂಜನೇಯ ಅತಿ ದೊಡ್ಡ ಸಮಾಜ ಸೇವಕ ಎಂದ ಡಿಕೆಶಿ
ʻʻರಾಮನ ತಂದೆ ದಶರಥ ಮಹಾರಾಜನ ದೇವಸ್ಥಾನ ಇಲ್ಲ. ರಾಮನ ಬಂಟ ಆಂಜನೇಯ ದೇವಸ್ಥಾನಗಳಿವೆ. ಆಂಜನೇಯ ಸಮಾಜದ ಸೇವಕ. ಆಂಜನೇಯನ ಅನುಗ್ರಹ ನಮ್ಮ ಮೇಲೆ ಯಾವಾಗ್ಲೂ ಕೂಡ ಇರುತ್ತದೆʼʼ ಎಂದು ಹೇಳಿದ ಡಿ.ಕೆ. ಶಿವಕುಮಾರ್ ಅವರು, ʻʻಇಲ್ಲಿಂದ ಮೈಸೂರಿನವರೆಗೆ ಸುಮಾರು 25 ಆಂಜನೇಯ ದೇವಸ್ಥಾನಗಳಿವೆ. ಆಂಜನೇಯ ಹೇಗೆ ಸೇವೆ ಮಾಡಿದ್ದಾನೋ ಆ ರೀತಿ ಸಮಾಜ ಸೇವೆ ಮಾಡುವ ಶಕ್ತಿ ಆಂಜನೇಯ ನೀಡಲಿ ಅಂತ ಕೇಳಿಕೊಂಡಿದ್ದೇನೆʼʼ ಎಂದು ಹೇಳಿದರು.
ಸಿದ್ದರಾಮಯ್ಯ ಜತೆಯಾಗಿ ನಾಡ ದೇವತೆಗೆ ಪೂಜೆ
ಈ ನಡುವೆ ಸಿದ್ದರಾಮಯ್ಯ ಮತ್ತು ತಾವು ಜತೆಯಾಗಿ ಹೋಗಿ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದರು. ʻʻನಮ್ಮ ನಾಡಿನ ದೇವತೆ ನಾಡಿನ ಜನತೆಯನ್ನು ಸುಭಿಕ್ಷವಾಗಿ ಇಡಲಿ ಅಂತ ಹೋಗ್ತಿದ್ದೇವೆ. ನಾಡಿನ ದೇವತೆ ಚಾಮುಂಡೇಶ್ವರಿ ಪ್ರಾರ್ಥನೆ ಮಾಡಬೇಕಾದದ್ದು ನಮ್ಮ ಕರ್ತವ್ಯ. ಇದು ನಮ್ಮ ಸಂಸ್ಕೃತಿ ಆಚಾರ ವಿಚಾರ ಅದನ್ನೇ ಹೇಳಿಕೊಟ್ಟಿದೆ. ನಾವು ಯಾವುದೇ ಕೆಲಸ ಮಾಡಲು ಹೋಗುವ ಮುಂಚೆ ಚಾಮುಂಡಿಗೆ ಪ್ರಾರ್ಥನೆ ಮಾಡಿ ಹೋಗುತ್ತೇವೆ. ನಾನು ಸಿದ್ದರಾಮಯ್ಯ ಇಬ್ಬರು ಹೋಗಿ ತಾಯಿ ಚಾಮುಂಡಿಗೆ ಆಶೀರ್ವಾದ ಪಡೆಯಲಿದ್ದೇವೆʼʼ ಎಂದು ನುಡಿದರು.
ಸಿದ್ದರಾಮಯ್ಯ ಅವರ ಹೆಸರಿನ ಪತ್ರ ನಕಲಿ
ಈ ನಡುವೆ ತಮ್ಮ ವಿರುದ್ಧ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತ ಪಡಿಸಿ ಬರೆದಿದ್ದಾರೆ ಎಂದು ಜಾಲತಾಣದಲ್ಲಿ ಓಡಾಡುತ್ತಿರುವ ಪತ್ರ ನಕಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ʻʻಪಾಪ ಸಿದ್ದರಾಮಯ್ಯನವರು ಯಾಕೆ ಹಾಗೆ ಮಾಡುತ್ತಾರೆ. ಬೆಳಗ್ಗೆ ಸಂಜೆ ಇಡೀ ಕ್ಷೇತ್ರ ಓಡಾಡೋಕೆ ಸುತ್ತಿಕೊಂಡು ಇದ್ದಾರೆ. ನಾವಿಬ್ಬರೂ ಕೂಡ ಮೊನ್ನೆಯಷ್ಟೇ ಇಬ್ಬರೂ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಅವರಿಗೆ ಅಸಮಾಧಾನ ಎಲ್ಲಿದೆ? ಇದೆಲ್ಲ ಮಾತನಾಡೋಕೆ ಪತ್ರ ಬರೆಯೋಕೆ ಅವರಿಗೆ ಎಲ್ಲಿ ಸಮಯವಿದೆ? ಬಿಜೆಪಿಯವರಿಗೆ ಇನ್ನೇನು ಕೆಲಸ ಇಲ್ಲ ಈ ರೀತಿ ಫೇಕ್ ಲೆಟರ್‌ಗಳನ್ನ ತಯಾರು ಮಾಡುತ್ತಾರೆ. ನನ್ನ ಮೇಲೆ ಯಾರಾದರೂ ಲೆಟರ್ ಬರೆದು ಅಸಮಾಧಾನ ವ್ಯಕ್ತಪಡಿಸುತ್ತಾರಾ..? ಬಿಜೆಪಿ ಗರ್ಭಗುಡಿಯಲ್ಲೇ ಇರುವ ಅಸಮಧಾನವನ್ನು ಮುಚ್ಚಿಹಾಕಲು ಈ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಮೋದಿ ಅವರದ್ದು ಒನ್ ಮ್ಯಾನ್ ಶೋ
ʻʻಮೋದಿ ಸಾಹೇಬರು ಬಂದು ಇಲ್ಲೇ ರೋಡಲ್ಲಿ ಮಲಗಿದ್ದಾಯ್ತು. ಮೋದಿ ಅವರು ರಾಷ್ಟ್ರೀಯ ನಾಯಕರು. ಅವರಿಗೆ ಒಬ್ಬನೇ ಒಬ್ಬ ರಾಜ್ಯದ ನಾಯಕನ ಜೊತೆಲಿಟ್ಟುಕೊಂಡು ಒಂದು ಪಾದಯಾತ್ರೆ, ರೋಡ್ ಶೋ ಮಾಡೋಕೆ ಆಗಿಲ್ಲ. ಕೊನೆಯ ಪಕ್ಷ ಕ್ಷೇತ್ರದ ಅಭ್ಯರ್ಥಿಗಳ ಜೊತೆಗೆ ರೋಡ್ ಶೋ ಮಾಡೋಕೆ ಆಗಿಲ್ಲ. ಒಬ್ಬರೇ ಸಂಸತ್ ಭವನದ ಪೂಜೆ ಮಾಡುತ್ತಾರೆ. ರಾಮಮಂದಿರಕ್ಕೂ ಒಬ್ಬರೇ ಪೂಜೆಗೆ ಕುಳಿತುಕೊಳ್ಳುತ್ತಾರೆ. ಇಲ್ಲಿ ಮತದಾನ ಕೇಳೋಕೆ ಬಂದಾಗ ಸಂದರ್ಭದಲ್ಲಿ ಒಬ್ಬರೇ ರೋಡ್ ಶೋ ಮಾಡ್ತಾರೆ. ನಾಯಕನಾದವರು ನಾಯಕರನ್ನು ಬೆಳೆಸಬೇಕುʼʼ ಎಂದು ಹೇಳಿದ ಅವರು, ʻʻಯಾವ ಸಂಸತ್ ಸದಸ್ಯನಿಗೂ ಸಮಾಧಾನ ಇಲ್ಲ. ಎಲ್ಲರೂ ಅವರ ಹೆಸರು ಹೇಳಿಕೊಂಡು ವೋಟ್ ಕೇಳ್ತಾ ಇದ್ದಾರೆ ಅಷ್ಟೇʼʼ ಎಂದು ನುಡಿದರು.
ಇದನ್ನೂ ಓದಿ : Karnataka Election 2023: ಹನುಮಾನ್ ಚಾಲೀಸಾ ಪಠಣೆಗೆ ತಡೆ; ಚುನಾವಣಾಧಿಕಾರಿಗಳ ಜತೆ ಬಜರಂಗದಳ ವಾಗ್ವಾದ