ಮೈಸೂರು: ರಾಜ್ಯದಲ್ಲಿ ಮೇ ತಿಂಗಳಿಗೆ ಕಾಂಗ್ರೆಸ್ ಸರ್ಕಾರ (Prajadwani Yatra) ಬರಲಿದೆ. ಕಾಂಗ್ರೆಸ್‌ಗೆ 140 ಸ್ಥಾನ ಬಂದೇ ಬರುತ್ತದೆ. ಜೆಡಿಎಸ್ 25 ಸ್ಥಾನಕ್ಕೆ ನಿಂತುಕೊಳ್ಳುತ್ತದೆ. ಬಿಜೆಪಿಗೆ 66 ಸ್ಥಾನ ಬರುತ್ತದೆ. ಮೇ ತಿಂಗಳಿಗೆ ನಮ್ಮ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ, ಪ್ರತಿ ಕುಟುಂಬದ ಯಜಮಾನಿಗೆ ಜೂನ್‌ನಲ್ಲಿ ಗೃಹ ಲಕ್ಷ್ಮಿ ಯೋಜನೆಯ 2000 ರೂಪಾಯಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
ಹುಣಸೂರಿನ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಮೈಸೂರು ಜಿಲ್ಲೆಗೆ ನಾಡಿನ ಇತಿಹಾಸದಲ್ಲಿ ಪ್ರಮುಖ ಸ್ಥಾನವಿದೆ. ಚಾಮುಂಡೇಶ್ವರಿಗೆ ಪೂಜೆ ಮಾಡಿ ನಾಡಿನ ಪರಂಪರೆಯನ್ನು ಸ್ಮರಿಸಿಕೊಳ್ಳುತ್ತೇವೆ. ಸಣ್ಣ ಜಾತಿ ಜಗಳಗಳು ಇಲ್ಲಿ ಆಗಿಲ್ಲ. ಹುಣಸೂರು ರಾಷ್ಟ್ರ ಮತ್ತು ರಾಜ್ಯಕ್ಕೆ ದೊಡ್ಡ ನಾಯಕರನ್ನು ಕೊಟ್ಟ ಪುಣ್ಯ ಭೂಮಿಯಾಗಿದೆ. ದೇವರಾಜ ಅರಸು ಅವರ ಆದರ್ಶ ನಮಗೆಲ್ಲ ಸ್ಫೂರ್ತಿ. ನಾನು ಉಪಚುನಾವಣೆಗೆ ಹುಣಸೂರಿಗೆ ಬಂದಿದ್ದೆ. ವಿಶ್ವನಾಥ್ ಅವರ ವಿರುದ್ಧ ಮಂಜುನಾಥ್ ಗೆಲ್ಲಿಸಿ ದೊಡ್ಡ ಶಕ್ತಿ ಕೊಟ್ಟಿದ್ದೀರಿ ಎಂದರು.
ಹುಣಸೂರಿನಲ್ಲಿ ನಾನೇ ಅಭ್ಯರ್ಥಿ ಎಂದ ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಈ ದೇಶದ ಶಕ್ತಿ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ಜನರು ನೆನಪು ಮಾಡಿಕೊಳ್ಳುತ್ತಾರೆ. ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡಿದೆವು ಎಂಬುವುದು ಮುಖ್ಯ. ದೇವರು ಅವಕಾಶ ಕೊಡುತ್ತಾನೆ, ಇಂದು ಮಂಜುನಾಥ್ ಶಾಸಕರಾಗಿದ್ದಾರೆ. ಅವರಿಗೆ ಸಿಕ್ಕ ಅವಕಾಶದಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ ಎಂದ ಅವರು, ಹುಣಸೂರಿನಲ್ಲಿ ಎಚ್.ಪಿ.ಮಂಜುನಾಥ್ ಅಭ್ಯರ್ಥಿಯಲ್ಲ, ನಾನೇ ಅಭ್ಯರ್ಥಿ. ನಿಮ್ಮ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿಗಳು ಎಂದು ಭಾವಿಸಿ ನೀವೆಲ್ಲ ನಮ್ಮ ಕೈ ಬಲಪಡಿಸಬೇಕು ಎಂದು ಕೋರಿದರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ನಾನು ಹುಟ್ಟಿದ್ದು ಇಲ್ಲೇ, ಸಾಯುವುದೂ ಇಲ್ಲೇ. ಕೇವಲ 70 ದಿನದಲ್ಲಿ ಚುನಾವಣೆ ಬರುತ್ತದೆ. ಕಳೆದ ಮೂರು ಅವಧಿಗಳಲ್ಲಿ ಶಾಸಕನಾಗಿದ್ದೇನೆ. ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಕೆಲಸಗಳಾಗಿದೆ. ನಾನು ಸೋತಾಗ ಕೆಲಸಗಳು ಸ್ಥಗಿತವಾಗಿವೆ. ನಮ್ಮ ಕ್ಷೇತ್ರಕ್ಕೆ ಅನುದಾನ ನೀಡದೆ ಸರ್ಕಾರ ತಾರತಮ್ಯ ಮಾಡುತ್ತಿದೆ. ಹುಣಸೂರು ರಸ್ತೆಗಳು ಸರಿಯಾಗಲು ಡಾ.ಮಹದೇವಪ್ಪ ಕಾರಣ. ಭಾಗ್ಯಗಳ ಸರ್ಕಾರ ಬೇಕಾದರೆ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಕರೆ ನೀಡಿದರು.
ಇದನ್ನೂ ಓದಿ | Tender Scam: ಕಾಂಗ್ರೆಸ್ ಕಾಲದ ಟೆಂಡರ್ ಅಕ್ರಮಗಳಿಗೆ ಉತ್ತರ ಕೊಡಲಿ: ಟೆಂಡರ್ ಆರೋಪಕ್ಕೆ ಸಿಎಂ ಬೊಮ್ಮಾಯಿ ಉತ್ತರ
ತಾಲೂಕಿನಲ್ಲಿ ಜ್ವಲಂತ ಸಮಸ್ಯೆಗಳಿವೆ. ಇವುಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದೇನೆ. ತಂಬಾಕು ಬೆಳೆಗಾರರಿಗೆ ಬೆಲೆ ನಿಗದಿ ಮಾಡುತ್ತೇನೆ. ಯಾವುದೇ ಗಲಾಟೆಗಳಿಗೆ ಅವಕಾಶ ಕೊಡದೆ ಒಳ್ಳೆಯ ಆಡಳಿತ ಕೊಟ್ಟಿದ್ದೇನೆ. ಯಾರನ್ನೂ ದ್ವೇಷ ಮಾಡಿಲ್ಲ, ಕೇಸ್ ಹಾಕಿಸಿಲ್ಲ ಎಂದು ಪರೋಕ್ಷವಾಗಿ ಹೊರಗಿನವರಿಗೆ ಮತ ಹಾಕದಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಎಚ್.ಎಂ.ರೇವಣ್ಣ, ಮಾಜಿ ಸಂಸದ ಆರ್.ಧ್ರುವನಾರಾಯಣ, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.