ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ʻವಿಷಕನ್ಯೆʼ ಎಂದು ಸಂಬೋಧಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಂಡ ಕಾರಿದ್ದಾರೆ.
ವಿಧಾನಸಭಾ ಚುನಾವಣೆಯ (Karnataka Election) ಸಿದ್ಧತೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻನನ್ನ ತಾಯಿಯನ್ನು ವಿಷ ಕನ್ಯೆ ಎಂದು ಕರೆದ ಮಿಸ್ಟರ್ ಯತ್ನಾಳ್ ನಿಮ್ಮ ನಾಲಗೆಯನ್ನು…ʼʼ ಎಂದು ಹೇಳಿ ಸಂಭಾಳಿಸಿಕೊಂಡರು. ಬಳಿಕ ಮುಂದುವರಿಸಿ, ʻʻನಿಮ್ಮ ನಾಲಗೆಯನ್ನು ಯಾರು ಏನು ಮಾಡುತ್ತಾರೋ ಗೊತ್ತಿಲ್ಲ. ಯಾವ ರೀತಿ ಕಾರ್ಯಕರ್ತರು, ಜನ, ರಾಜ್ಯದ ಸಂಸ್ಕೃತಿ ಇರುವ ಯುವಜನ ಏನು ಮಾಡ್ತಾರೋ ಗೊತ್ತಿಲ್ಲʼʼ ಎಂದರು.
ʻʻಸೋನಿಯಾ ಗಾಂಧಿ ಅವರು ಈ ದೇಶದ ಪ್ರಧಾನ ಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದವರು. ಒಬ್ಬ ಆರ್ಥಿಕ ತಜ್ಞನನ್ನು ಈ ದೇಶದ ಪ್ರಧಾನಿ ಮಾಡಿದವರು. ಬಿಜೆಪಿಯವರು ನನ್ನನ್ನು ಜೈಲಿಗೆ ಕಳುಹಿಸಿದಾಗ ತಿಹಾರ್ ಜೈಲಿಗೆ ಅಟ್ಟಿದಾಗ ಬಂದು ಧೈರ್ಯ ತುಂಬಿದ ತಾಯಿ ಅವರು. ಅಂಥ ಒಬ್ಬ ತಾಯಿಯನ್ನು ಒಬ್ಬ ಮಾಜಿ ಕೇಂದ್ರ ಸಚಿವ, ಹಾಲಿ ಶಾಸಕ ವಿಷ ಕನ್ಯೆ ಎಂದು ಕರೆದಿದ್ದಾರೆ. ಮಿಸ್ಟರ್ ಯತ್ನಾಳ್ ಯಾರು ಏನು ಮಾಡ್ತಾರೋ ಗೊತ್ತಿಲ್ಲ.. ರಾಜ್ಯದ ಸಂಸ್ಕೃತಿ ಇರುವ ಯುವ ಜನ ಏನು ಮಾಡ್ತಾರೋ ಗೊತ್ತಿಲ್ಲ.. ನನ್ನ ತಾಯಿಯನ್ನ, ಪ್ರಧಾನ ಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದ ಒಬ್ಬ ಹೆಣ್ಮಗಳನ್ನು, ದೇಶದ ಶಾಂತಿಗಾಗಿ, ಸಮಗ್ರತೆಗಾಗಿ ತನ್ನ ಗಂಡನನ್ನೇ ಕಳೆದುಕೊಂಡ ಒಬ್ಬ ಹೆಣ್ಮಗಳನ್ನು ವಿಷ ಕನ್ಯೆ ಎಂದು ಕರೆಯುತ್ತೀಯಲ್ಲಾ.. ಕಾಂಗ್ರೆಸ್ ಯಾವ ಕಾರಣಕ್ಕೂ ಇದನ್ನು ಸಹಿಸಲ್ಲʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ʻʻನಾನು ಬಸನಗೌಡ ಪಾಟೀಲ್ ಕ್ಷಮೆ ಕೇಳಬೇಕು ಎಂದು ಕೇಳಲ್ಲ. ಒಬ್ಬ ಹೆಣ್ಮಗಳಿಗೆ ಮಾಡಿದ ಅಪಮಾನಕ್ಕಾಗಿ ಪ್ರಧಾನ ಮಂತ್ರಿಗಳು ಕ್ಷಮೆ ಕೇಳಬೇಕು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷಮೆ ಕೇಳಬೇಕು. ಇವತ್ತು ಒಬ್ಬ ಪಂಚಾಯಿತಿ ಸದಸ್ಯರು ಕೂಡಾ ಅಧಿಕಾರ ಬಿಟ್ಟು ಕೊಡಲ್ಲ. ಹಾಗಿರುವಾಗ ಒಂದು ದೇಶದ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ ಒಬ್ಬ ಮಹಿಳೆಯನ್ನು ವಿಷ ಕನ್ಯೆ ಎಂದು ಕರೆದಿರುವ ಯತ್ನಾಳ್ ಅವರನ್ನು ಬಿಜೆಪಿ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರು ಪಕ್ಷದಿಂದಲೇ ಉಚ್ಚಾಟಿಸಬೇಕುʼʼ ಎಂದು ಆಗ್ರಹಿಸಿದರು.
ʻʻನಮ್ಮ ಶಕ್ತಿ ಮೇ 13ರಿಂದ ಶುರುವಾಗುತ್ತದೆ. ಶಕ್ತಿ ತುಂಬಿರುವ ರಾಜ್ಯ ನಮ್ಮದು. ರಾಜ್ಯದಿಂದ ದೇಶದ ಬಾಗಿಲು ತೆಗೆಯುತ್ತಿದೆ. ಜನ, ಕಾರ್ಯಕರ್ತರು ದಂಗೆ ಏಳುವ ಮುನ್ನ ಯತ್ನಾಳರನ್ನು ಪಕ್ಷದಿಂದ ಉಚ್ಚಾಟನೆ ಮಾಡಿʼʼ ಎಂದು ಹೇಳಿದರು.
ಪ್ರಧಾನಿ ಮೌನ ಪ್ರಶ್ನಾರ್ಹ ಎಂದ ಸುಪ್ರೀಯಾ ಶ್ರೀನಾಥೆ
ಈ ನಡುವೆ, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷೆ ಸುಪ್ರೀಯಾ ಶ್ರಿನಾಥೆ ಅವರು ಕೂಡಾ ಯತ್ನಾಳ್ ಹೇಳಿಕೆಯನ್ನು ಖಂಡಿಸಿದ್ದಾರೆ.
ʻʻಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ, ಜರ್ಸಿ ಕೌ, ಕಾಂಗ್ರೆಸ್ ಕಿ ವಿಧವಾ ಎಂದು ಹೇಳಿದ್ದರು.. ಸೋನಿಯಾ ಗಾಂಧಿ ದೇಶಕ್ಕೆ ತ್ಯಾಗ ಮಾಡಿದ ಇಂದಿರಾ ಗಾಂಧಿ ಸೊಸೆ, ಹುತಾತ್ಮರಾದ ರಾಜೀವ್ ಗಾಂಧಿ ಪತ್ನಿ. ಯತ್ನಾಳ್ ಹೇಳಿಕೆ ಕೇವಲ ಸೋನಿಯಾ ವಿರುದ್ಧ ಮಾತ್ರವಲ್ಲ, ಮಹಿಳೆಯರ ಮೇಲಿನ ದಾಳಿಯಾಗಿದೆ. ಪ್ರಧಾನಿ ಮೋದಿ ಮೌನ ಪ್ರಶ್ನಾರ್ಹವಾಗಿದೆʼʼ ಎಂದಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೂಡಲೇ ಕ್ಷಮೆ ಯಾಚಿಸಬೇಕು. ಅವರನ್ನು ಬಿಜೆಪಿಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : Karnataka Election 2023: ಸೋನಿಯಾ ಗಾಂಧಿ ವಿಷಕನ್ಯೆ, ರಾಹುಲ್ ಹುಚ್ಚ: ಬಿಜೆಪಿ ನಾಯಕ ಯತ್ನಾಳ್ ವಿವಾದಾತ್ಮಕ ಹೇಳಿಕೆ