ಬೆಂಗಳೂರು: ʻʻರಾಜ್ಯದಲ್ಲಿ ಲಿಂಗಾಯತ ಮತದಾರರು ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ. ನೂರಕ್ಕೂ ಅಧಿಕ ಲಿಂಗಾಯತ ಸ್ವಾಮೀಜಿಗಳು ನನಗೆ ಕರೆ ಮಾಡಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ತಾವು ಮತ್ತು ತಮ್ಮ ಸಮುದಾಯ ಕಾಂಗ್ರೆಸ್‌ನ್ನೇ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆʼʼ- ಹೀಗೆಂದು ಹೇಳಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar)
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಮನದಾಳದ ಮಾತಿನ (DK Shivakumar- Siddaramaiah interview) ಎರಡನೇ ಭಾಗವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಲಿಂಗಾಯತ ಮತದಾರರ ಮನದಾಳ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಆಯನೂರು ಮಂಜುನಾಥ್ ಮೊದಲಾದವರ ಉಲ್ಲೇಖನವಾಗಿದೆ. ಬಿಜೆಪಿ ಏನಿದ್ದರೂ 62ಕ್ಕಿಂತ ಹೆಚ್ಚು ಸ್ಥಾನ ಪಡೆಯುವುದಿಲ್ಲ, ಕಾಂಗ್ರೆಸ್ 141 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಕಾಂಗ್ರೆಸ್ ನಾಯಕರು ಇಲ್ಲಿ ಹೇಳಿಕೊಂಡಿದ್ದಾರೆ.
ರಾಜ್ಯ ಕಾಂಗ್ರೆಸ್‌ನ ಇಬ್ಬರು ಟಾಪ್ ನಾಯಕರ ನಡುವೆ ಯಾವುದೇ ಪೈಪೋಟಿ, ಪ್ರತಿಷ್ಠೆ ಇಲ್ಲ. ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ಇದ್ದಾರೆ ಎಂಬ ಸಂದೇಶ ಸಾರಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು, ಅದರ ಭಾಗವಾಗಿ ಈ ಸಂದರ್ಶನದ ವಿಡಿಯೊ ಮಾಡಲಾಗಿದೆ ಎಂದು ಹೇಳಲಾಗಿದೆ.
ಲಿಂಗಾಯತ ಸ್ವಾಮಿಗಳ ಬೆಂಬಲದ ಸ್ಫೋಟಕ ಹೇಳಿಕೆ
ʻʻಸುಮಾರು 100 ವೀರಶೈವ ಲಿಂಗಾಯತ ಸ್ವಾಮೀಜಿಗಳು ಕರೆ ಮಾಡಿದ್ರು ಸರ್. ನಾವು ಈ ಬಾರಿ ಕಾಂಗ್ರೆಸ್ ಪಾರ್ಟಿಗೆ ಸಹಾಯ ಮಾಡುತ್ತೇವೆ ಎಂದಿದ್ದಾರೆ. ನಿಮಗೂ ಕರೆ ಮಾಡ್ತೇವೆ ಅಂದಿದ್ರು. ಯಡಿಯೂರಪ್ಪ ಅವರಿಗೆ ಅನ್ಯಾಯ ಆಯ್ತು ಹೋಯ್ತು, ಈಗ ಅವರ (ಬಿಜೆಪಿ) ಮೇಲೆ ನಂಬಿಕೆಯೇ ಹೋಗಿದೆ. ಇವರಿಗೆ ವೋಟ್ ಕೇಳಲು ಮರ್ಯಾದೆ ಇಲ್ಲ. ನಾವಂತೂ ಈ ಬಾರಿ ಕಾಂಗ್ರೆಸ್ ಗೆ ಆಶೀರ್ವಾದ ಮಾಡುತ್ತೇವೆ ಅಂತ ಹೇಳಿದ್ದಾರೆʼʼ ಎಂದು ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ಹೇಳುತ್ತಾರೆ.
ಬಿ.ಎಲ್. ಸಂತೋಷ್ ಲಿಂಗಾಯತ ಬೇಡ, ಹಿಂದುತ್ವ ಸಾಕು ಅಂತಿದ್ದಾರೆ!
ನಮಗೆ ಹಿಂದುತ್ವವೇ ಸಾಕು, ಲಿಂಗಾಯತರು ಬೇಕಾಗಿಲ್ಲ ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಹೇಳಿದ್ದಾರೆ ಎಂಬ ವಿಚಾರವಾಗಿ ವಿಡಿಯೊದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಾತನಾಡಿಕೊಂಡಿದ್ದಾರೆ.
ಬಿ.ಎಲ್. ಸಂತೋಷ್ ಅವರು ಹಿಂದುತ್ವದಿಂದಲೇ ಚುನಾವಣೆ ಗೆಲ್ಲಬಹುದು, ಬೇರೆ ಯಾರೂ ಬೇಕಾಗಿಲ್ಲ ಎಂದು ಹೇಳಿದ್ದಾರೆ ಅಂತ ನಾನೂ ಓದಿದೆ ಎನ್ನುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಾಮುಖ್ಯತೆಯೇ ಇಲ್ಲ, ಅವರನ್ನು ಡಸ್ಟ್ ಬಿನ್‌ಗೆ ಹಾಕಿದ್ದಾರೆ ಎಂದು ಮಾತನಾಡಿಕೊಂಡಿದ್ದಾರೆ.
ʻʻಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್ ಮೊದಲಾದ ಲಿಂಗಾಯತ ನಾಯಕರನ್ನು ಕಡೆಗಣಿಸಿದ್ದೇ ಸಂತೋಷ್ʼʼ ಎಂದು ಸಿದ್ದರಾಮಯ್ಯ ಅವರು ಹೇಳಿದಾಗ, ʻಬಿಜೆಪಿಯಲ್ಲಿ ಒಬ್ಬ ಒಳ್ಳೆ ನಾಯಕ, ಮನುಷ್ಯ ಅಂತ ಇದ್ದಿದ್ದು ಜಗದೀಶ್ ಶೆಟ್ಟರ್ ಮಾತ್ರ. ಅವರನ್ನು ಹೇಗೆ ಕಣ್ಣೀರು ಹಾಕಿಸಿಬಿಟ್ರು ಸರ್ʼʼ ಎಂದು ಡಿ.ಕೆ. ಶಿವಕುಮಾರ್ ಕರುಣೆ ತೋರುತ್ತಾರೆ.
ಲಕ್ಷ್ಮಣ ಸವದಿ ಒಂದು ದೊಡ್ಡ ಫೋರ್ಸ್. ಹಲವು ಜಿಲ್ಲೆಗಳಲ್ಲಿ ಅವರ ಫೋರ್ಸ್ ಇದೆ. ಸವದಿಗೆ ಇನ್ನೂ ಐದು ವರ್ಷ ಎಂಎಲ್‌ಸಿ ಅವಧಿ ಇದೆ. ಅದನ್ನು ಬಿಟ್ಟು ಕಾಂಗ್ರೆಸ್‌ಗೆ ಬರುತ್ತಾರೆ ಎಂದರೆ ಅವರು ಎಷ್ಟು ಹಿಂಸೆ ಅನುಭವಿಸಿರಬಹುದು ಎಂದು ಕಲ್ಪಿಸಿಕೊಳ್ಳಬಹುದು ಎನ್ನುತ್ತಾರೆ ಡಿಕೆ ಶಿವಕುಮಾರ್.
ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಆಯನೂರು ಮಂಜುನಾಥ್ ಅವರ ಪ್ರಸ್ತಾಪವೂ ಮಾತಿನ ನಡುವೆ ಬರುತ್ತದೆ. ಅವರು ಬಿಜೆಪಿ ವಿರುದ್ಧ ಬಿಡುಗಡೆ ಮಾಡಿರುವ ಒಂದು ಜಾಹೀರಾತು ತುಂಬ ಚೆನ್ನಾಗಿದೆ ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ. ಅವರು ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಆದರೆ, ಕೊಡಲಾಗಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದಾಗ, ಹೌದು ನನಗೂ ಕಾಲ್ ಮಾಡಿದ್ದರು ಎನ್ನುತ್ತಾರೆ ಸಿದ್ದರಾಮಯ್ಯ.
ಬಿಜೆಪಿಯವರು ಇಂದಿರಾ ಕ್ಯಾಂಟೀನಲ್ಲೇ ಊಟ ಮಾಡಿದ್ದು!
ʻʻನಾವು ಬಂದ ಮೇಲೆ ಇಂದಿರಾ ಕ್ಯಾಂಟೀನ್ ಮತ್ತೆ ಪ್ರಾರಂಭ ಮಾಡಬೇಕುʼʼ ಎಂದು ಸಿದ್ದರಾಮಯ್ಯ ಹೇಳಿದಾಗ, ʻʻನಿನ್ನೆ ಎಲ್ಲ ಬಿಜೆಪಿಯವರು ಇಂದಿರಾ ಕ್ಯಾಂಟೀನಲ್ಲೇ ಊಟ ಮಾಡಿದ್ದಾರೆʼʼ ಎಂದು ಹೇಳುತ್ತಾ ಡಿ.ಕೆ. ಶಿವಕುಮಾರ್ ಜೋರಾಗಿ ನಗುತ್ತಾರೆ.
ಅವರು 62ಕ್ಕಿಂತ ಹೆಚ್ಚು ಸೀಟು ಬರಲ್ಲ, ನಾವು 141 ಅಂದ ಡಿಕೆಶಿ
ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಅಟಲ್ ಕ್ಯಾಂಟೀನ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದಾಗ, ಅವರೆಲ್ಲಿ ಬರ್ತಾರೆ ಸಾರ್ ಎಂದು ಡಿಕೆ ಶಿವಕುಮಾರ್ ಜೋರಾಗಿ ನಗುತ್ತಾರೆ.
ʻʻನಿನ್ನೆ ಕೂಡ ಒಂದು ಸರ್ವೇ ವರದಿ ಬಂದಿದೆ. ಅವರು 62ರ ಮೇಲೆ ದಾಟಲ್ಲ ಸರ್. ಜೆಡಿಎಸ್ 20-23 ಬರಬಹುದು. ಮೂರು ಪಕ್ಷೇತರರು ಗೆಲ್ಲಬಹುದು ಈ ಬಾರಿ ಅಂತ ಇದೆʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದಾಗ, ಇಂಡಿಪೆಂಡೆಂಟ್ ಐದು ತನಕ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಸಿದ್ದರಾಮಯ್ಯ. ಈ ಬಾರಿ ಕಾಂಗ್ರೆಸ್‌ಗೆ 141 ಸೀಟು ಬರುವುದು ಗ್ಯಾರಂಟಿ ಎನ್ನುವುದು ಡಿ.ಕೆ.ಶಿಯ ಮಾತು.
ಎಲ್ಲರನ್ನೂ ಹೆದರಿಸುತ್ತಿದ್ದಾರೆ ಸರ್ ಎಂದ ಡಿ.ಕೆ.ಶಿವಕುಮಾರ್
ಬಿಜೆಪಿಯವರು ನಾನಾ ಇಲಾಖೆಗಳನ್ನು ಇಟ್ಟುಕೊಂಡು ಎಲ್ಲರನ್ನೂ ಹೆದರಿಸುತ್ತಿದ್ದಾರೆ. ಇದು ಎಲ್ಲಿಯವರೆಗೆ ಹೋಗಿದೆ ಎಂದರೆ ನನ್ನ ಬಿಸಿನೆಸ್ ಪಾರ್ಟ್ನರ್ ಕೂಡ ಫೋನ್ ಎತ್ತುತ್ತಿಲ್ಲ ಅಷ್ಟು ಹೆದರಿಸಿದ್ದಾರೆ. ಡೆವಲಪರ್‌ಗಳಿಗೆಲ್ಲ ಬೆದರಿಸಿದ್ದಾರೆ ಎಂದು ಡಿಕೆಶಿ ಹೇಳುತ್ತಾರೆ.
ಬಿಜೆಪಿಯವರು ಮಾಧ್ಯಮಗಳನ್ನೂ ಹೆದರಿಸುತ್ತಾರೆ ಎಂದು ಇಬ್ಬರೂ ನಾಯಕರು ಮಾತನಾಡಿಕೊಳ್ಳುತ್ತಾರೆ. ಮೋದಿ ಅವರು ಯಾವತ್ತೂ ಮೀಡಿಯಾದವರನ್ನು ಭೇಟಿ ಮಾಡಲ್ಲ. ಪ್ರಶ್ನೆ ಕೇಳಕ್ಕೆ ಅವಕಾಶ ಇಲ್ಲ. ಅವರು ಏನು ಹೇಳ್ತಾರೋ ಅದನ್ನೇ ರಿಪೋರ್ಟ್ ಮಾಡಬೇಕು. ಮಾಡದೆ ಹೋದರೆ ಹೆದರಿಸುತ್ತಾರೆ ಎಂದು ಹೇಳಿದರು ಸಿದ್ದರಾಮಯ್ಯ.
ʻʻನಮ್ಮ ಗ್ಯಾರಂಟಿ ಕಾರ್ಡು, ನಮ್ಮ ಮಾತು, ನಮ್ಮ ಬದ್ಧತೆ ಇದೆ ಸಾಕು ಜನರಿಗೆʼʼ ಎಂದು ಡಿಕೆ ಶಿವಕುಮಾರ್ ಹೇಳಿದರೆ, ನಾವು ಹಿಂದೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಹೀಗಾಗಿ ನಮ್ಮ ಮೇಲೆ ಜನರಿಗೆ ಭರವಸೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ : Karnataka Election: ಮೊದಲ ಸಂಪುಟದಲ್ಲೇ ಗ್ಯಾರಂಟಿ ಜಾರಿ ಮಾಡೋಣ; ಸಿದ್ದು-ಡಿಕೆಶಿ ಆಪ್ತ ಮಾತುಕತೆ