ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (karnataka Election 2023) ಭರ್ಜರಿ ಬಹುಮತ ಗಳಿಸಿರುವ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆಗೆ ಮಂಗಳವಾರವೇ ಉತ್ತರ ದೊರೆಯುವ ಸಾಧ್ಯತೆ ಇದೆ. ಹುದ್ದೆಯ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಸೋಮವಾರವೇ ದಿಲ್ಲಿಗೆ ಹೋಗಿದ್ದರು. ಮತ್ತೊಬ್ಬ ಆಕಾಂಕ್ಷಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರು ಅನಾರೋಗ್ಯದ ಕಾರಣದಿಂದ ಸೋಮವಾರ ಹೋಗದೆ ಇದ್ದುದರಿಂದ ಮಹತ್ವ ಸಭೆ ಮುಂದೂಡಿಕೆಯಾಗಿತ್ತು. ಡಿ.ಕೆ. ಶಿವಕುಮಾರ್ ಅವರು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಇದೀಗ ಮಂಗಳವಾರ ಮುಂಜಾನೆ ದಿಲ್ಲಿಗೆ ಪ್ರಯಾಣಿಸಿದ್ದಾರೆ. ಇದರೊಂದಿಗೆ ಸಂಧಾನ ಮಾತುಕತೆ ನಡೆದು ಯಾರು ಸಿಎಂ ಎನ್ನುವುದು ನಿರ್ಧಾರವಾಗಲಿದೆ.
ಮಂಗಳವಾರ ದಿಲ್ಲಿಗೆ ಹೊರಡುವ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಡಿಕೆ.ಶಿವಕುಮಾರ್ ಭಾವುಕರಾದರು. ʻನಮ್ಮದು ಅವಿಭಕ್ತ ಮನೆ. ನಮ್ಮ ಮನೆಯ ಸದಸ್ಯರ ಸಂಖ್ಯೆ 135. ನಾನು ಈ ಮನೆಯನ್ನು ಒಡೆಯಲ್ಲ. ಅವರು ನನ್ನನ್ನು ಇಷ್ಟಪಡುತ್ತಾರೋ ಬಿಡುತ್ತಾರೋ, ನಾನೊಬ್ಬ ಜವಾಬ್ದಾರಿಯುತ ಮನುಷ್ಯ. ನಾನು ಬೆನ್ನಿಗೆ ಚೂರಿ ಹಾಕಲ್ಲ, ಬ್ಲ್ಯಾಕ್‌ಮೇಲ್ ಮಾಡಲ್ಲ. ಪಕ್ಷ ಹೇಳಿದಂತೆ ಕೇಳುತ್ತೇನೆʼʼ ಎಂದು ಹೇಳಿದರು ಡಿ.ಕೆ ಶಿವಕುಮಾರ್.
ʻʻಕಾಂಗ್ರೆಸ್ ಪಕ್ಷ, ನನ್ನ ಪಾಲಿನ ದೇವರು. ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವಾಲಯ. ಕಾಂಗ್ರೆಸ್ ಪಕ್ಷ, ನನಗೆ ತಾಯಿ ಇದ್ದಂತೆ. ದೇವರು ಮತ್ತು ತಾಯಿಗೆ, ಮಕ್ಕಳಿಗೆ ಏನು ನೀಡಬೇಕು ಎಂಬುದು ಗೊತ್ತಿರುತ್ತದೆʼʼ ಎಂದು ಹೇಳಿದರು. ಈ ಮೂಲಕ ಇದುವರೆಗೆ ಸಿಎಂ ಪಟ್ಟಕ್ಕಾಗಿ ಹಠ ತೊಟ್ಟಿದ್ದ ಡಿ.ಕೆ. ಶಿವಕುಮಾರ್ ಸದ್ಯಕ್ಕೆ ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ಸ್ವೀಕರಿಸುವ ಮನೋಸ್ಥಿತಿಯಲ್ಲಿರುವಂತೆ ಕಂಡಿತು.
ʻʻನಾನು ನನ್ನ ದೇವರನ್ನು ಭೇಟಿ ಮಾಡಲು ದೇವಾಲಯಕ್ಕೆ ಹೋಗುತ್ತಿದ್ದೇನೆ. ನಾನು ಒಬ್ಬನೇ ಹೋಗುತ್ತಿದ್ದೇನೆ.. ಪ್ರಧಾನ ಕಾರ್ಯದರ್ಶಿ ಒಬ್ಬನೇ ಬರುವಂತೆ ಹೇಳಿದ್ದಾರೆ. ಹೀಗಾಗಿ ಒಬ್ಬನೇ ಹೋಗುತ್ತಿದ್ದೇನೆ. ಯಾರನ್ನೂ ಜತೆಗೆ ಕರೆದೊಯ್ಯುತ್ತಿಲ್ಲʼʼ ಎಂದು ಕೂಡಾ ಡಿ.ಕೆ. ಶಿವಕುಮಾರ್ ಹೇಳಿದರು. ಶಿವಕುಮಾರ್ ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ ಅವರು ಆಗಲೇ ದಿಲ್ಲಿಯಲ್ಲಿದ್ದಾರೆ.
ಆರೋಗ್ಯ ಸ್ಥಿರ ಎಂದ ಶಿವಕುಮಾರ್
ಸೋಮವಾರ ಹೊಟ್ಟೆ ಉರಿ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿದ್ದ ಡಿ.ಕೆ. ಶಿವಕುಮಾರ್ ಅವರು ಅದೇ ಕಾರಣಕ್ಕಾಗಿ ದಿಲ್ಲಿಗೆ ಹೋಗಿರಲಿಲ್ಲ. ಹೀಗಾಗಿ ಸಭೆಯನ್ನೇ ಮುಂದಕ್ಕೆ ಹಾಕಲಾಗಿತ್ತು.
ಒಂದು ಹಂತದಲ್ಲಿ ಅವರು ಸಿಎಂ ಹುದ್ದೆ ಕೊಡಲು ಸತಾಯಿಸಲಾಗುತ್ತಿದೆ ಎಂಬ ಕಾರಣದಿಂದ ಬೇಸತ್ತು ದಿಲ್ಲಿ ಭೇಟಿ ರದ್ದು ಮಾಡಿದ್ದಾರೆ ಎಂದೆಲ್ಲ ಸುದ್ದಿ ಹರಡಿತ್ತು. ಬಳಿಕ ಅವರೇ ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಸ್ಪಷ್ಟನೆ ನೀಡಿದರು. ಆದರೂ ಅವರು ಹುದ್ದೆಯ ವಿಚಾರದಲ್ಲಿ ಮುನಿಸಿನಿಂದಲೇ ಹೀಗೆ ಮಾಡಿದ್ದಾರ ಎಂಬ ವಾದ ಮುಂದುವರಿದಿದೆ.
ʻʻನನ್ನ ಆರೋಗ್ಯ ಸ್ಥಿರವಾಗಿದೆ.ʼʼ ಎಂದು ದಿಲ್ಲಿಗೆ ಹೋಗುವ ವೇಳೆ ಡಿ.ಕೆ.ಶಿ ತಿಳಿಸಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗಳಿಸಿಕೊಂಡು ಭರ್ಜರಿ ಗೆಲುವು ಸಾಧಿಸಿತ್ತು. ಆದರೆ, ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಚಾರದಲ್ಲಿ ಹಗ್ಗ ಜಗ್ಗಾಟ ಮುಂದುವರಿದಿರುವುದರಿಂದ ಸರ್ಕಾರ ರಚನೆ ವಿಳಂಬವಾಗುತ್ತಿದೆ. ತಾನು ಕೆಪಿಸಿಸಿ ಅಧ್ಯಕ್ಷನಾಗಿ ಪಕ್ಷವನ್ನು ಗೆಲುವಿನ ದಡ ಸೇರಿಸಿದ್ದರಿಂದ ತಮಗೇ ಸಿಎಂ ಪಟ್ಟ ಬೇಕು ಎನ್ನುವುದು ಡಿ.ಕೆ.ಶಿವಕುಮಾರ್ ಅವರ ವಾದ. ಅದೇ ಹೊತ್ತಿಗೆ ನೂತನ ಶಾಸಕರು ನಿರ್ಧರಿಸಲಿ ಎನ್ನುವುದು ಸಿದ್ದರಾಮಯ್ಯ ಮತ್ತು ಟೀಮ್ ವಾದ. ಈ ಶಾಸಕರ ಎಣಿಕೆಯಲ್ಲಿ ಸಿದ್ದರಾಮಯ್ಯ ಅವರಿಗೆ 85, ಡಿಕೆಶಿಗೆ 35 ಶಾಸಕರ ಬೆಂಬಲವಿದೆ ಎಂದು ಹೇಳಲಾಗಿದೆ. ಹೀಗಾಗಿ ಯಾರಿಗೆ ಸಿಎಂ ಪಟ್ಟ ಎನ್ನುವ ವಿಚಾರದಲ್ಲಿ ಹೈಕಮಾಂಡ್ ಕೂಡಾ ಗೊಂದಲದಲ್ಲಿದೆ.
ಹೀಗಾಗಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸೇರಿದಂತೆ ಪ್ರಮುಖ ನಾಯಕರ ಸಮ್ಮುಖದಲ್ಲಿ ಚರ್ಚೆ ನಡೆದು ಸಂಧಾನ ಸೂತ್ರ ರೂಪುಗೊಳ್ಳುವ ಸಾಧ್ಯತೆ ಇದೆ.
ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಈಗ ಸಿಎಂ ಮಾಡಿದರೂ ಎರಡೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್‌ಗೆ ಅವಕಾಶ ನೀಡಬೇಕು ಎಂದು ಬೆಂಬಲಿಗರ ಒತ್ತಡವಿದೆ. ಹೈಕಮಾಂಡ್ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಇದನ್ನೂ ಓದಿ: Karnataka CM: ದೆಹಲಿಗೆ ತೆರಳದ ಡಿಕೆಶಿ, ಖರ್ಗೆ ಜತೆಗಿನ ಸಭೆ ರದ್ದು; ಮಂಗಳವಾರವೂ ಡಿಕೆಶಿ ಹೋದರಷ್ಟೇ ಸಭೆ?