ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು ಮುಂದಿನ ಪೀಳಿಗೆಗೆ ಮಾರಕ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದು, ನಾವೇನೂ ನಿಮ್ಮ ಹಾಗೆ ಪ್ರತಿಯೊಬ್ಬರ ಅಕೌಂಟ್‌ಗೆ 15 ಲಕ್ಷ ರೂ. ಹಾಕುತ್ತೇವೆ ಅಂತ ಗ್ಯಾರಂಟಿ ಕೊಟ್ಟಿಲ್ಲ ಎಂದಿದ್ದಾರೆ. ಅದರ ಜತೆಗೆ ನಮ್ಮ ಗ್ಯಾರಂಟಿ ಕಾರ್ಡ್ ನೋಡಿದ್ದಕ್ಕೆ ಥ್ಯಾಂಕ್ಸ್, ಕಳೆದ ಚುನಾವಣೆಯಲ್ಲಿ ನಿಮ್ಮದೇ ಪಕ್ಷ ನೀಡಿದ ಭರವಸೆಗಳನ್ನೂ ಅವಲೋಕಿಸಿ ಎಂದು ಸವಾಲು ಹಾಕಿದ್ದಾರೆ.
ವರ್ಚುವಲ್ ಸಂವಾದದ ಮೂಲಕ ದೇಶದ 50 ಲಕ್ಷ ಬಿಜೆಪಿ ಕಾರ್ಯಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ಗೇ ವಾರಂಟಿ ಇಲ್ಲ, ಅದರದ್ದೆ ಎಕ್ಸ್‌ಪೈರಿ ಡೇಟ್ ಮುಗಿದಿದೆ. ಹಾಗಿರುವಾಗ ಅದರ ಯಾವ ಗ್ಯಾರಂಟಿಗಳು ಕೆಲಸ ಮಾಡುತ್ತವೆ. ಅವರು ರಾಜಸ್ಥಾನದಲ್ಲಿ ನಾಲ್ಕು ವರ್ಷದ ಹಿಂದೆ ಕೊಟ್ಟ ಭರವಸೆಗಳನ್ನು ಇವತ್ತಿಗೂ ಈಡೇರಿಸಿಲ್ಲ. ಹಿಮಾಚಲ ಪ್ರದೇಶದಲ್ಲೂ ಅನುಷ್ಠಾನವಾಗಿಲ್ಲ. ಅವರದ್ದು ಬರೀ ಸುಳ್ಳು ಎಂದು ಹೇಳಿದ್ದರು. ಕಾಂಗ್ರೆಸ್‌ನದ್ದು ಬರೀ ಸುಳ್ಳಿನ ಗ್ಯಾರಂಟಿ. ಕೇವಲ ಭ್ರಷ್ಟಾಚಾರದ ಗ್ಯಾರಂಟಿ ಎಂದಿದ್ದರು.
ಮೋದಿ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್ ಅವರು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಬಂದಿರುವುದು ನನಗೆ ಭಾರಿ ಖುಷಿಯಾಗಿದೆ. ಆದರೆ, ಮೋದಿ ಅವರು ಕಳೆದ ಚುನಾವಣೆಯಲ್ಲಿ ಬಿಜೆಪಿ ಹೊರಡಿಸಿದ ಪ್ರಣಾಳಿಕೆಯನ್ನೂ ಒಮ್ಮೆ ಗಮನಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಅದರಲ್ಲಿರುವ ಬಹುತೇಕ ಭರವಸೆಗಳನ್ನು ಈಡೇರಿಸಿಲ್ಲ. ಅದೇ ಕಾರಣಕ್ಕಾಗಿ ಡಬಲ್ ಎಂಜಿನ್ ಸರ್ಕಾರ ಫೇಲ್ ಆಗಿದೆ. ಕಾಂಗ್ರೆಸ್‌ನ ಗ್ಯಾರಂಟಿಗಳು ಬಿಜೆಪಿಯ ಹಾಗಲ್ಲ. ನಾವು ಶೇಕಡಾ 95ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ. ಇದರ ಆಧಾರದಲ್ಲೇ ನಾವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಭರವಸೆಯನ್ನು ಹೊಂದಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ಕಳೆದ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ರೈತರ ಸಾಲಾ ಮನ್ನಾ ಮಾಡುತ್ತೇವೆ ಎಂದು ಹೇಳಲಾಗಿದೆ. ಸರ್ಕಾರದ ಅಧಿಕೃತ ಜಾಹೀರಾತಿನಲ್ಲೂ ಮಹಿಳೆಯರಿಗೆ ಮೂರು ಸಾವಿರ ಕೊಡುವ ಭರವಸೆ ಕೊಟ್ಟಿದ್ದಾರೆ. 3ರಿಂದ 10 ಗಂಟೆ ಉಚಿತ ವಿದ್ಯುತ್ ಕೊಡುವ ಭರವಸೆ ಕೊಟ್ಟಿದ್ದಾರೆ, ಯಾವುದನ್ನು ಈಡೇರಿಸಿದ್ದಾರೆ ಎಂದು ಪ್ರಶ್ನಿಸಿದರು ಡಿ.ಕೆ. ಶಿವಕುಮಾರ್.
ಸಿಲಿಂಡರ್‌ಗೆ ಕೈ ಮುಗಿದು ವೋಟ್ ಹಾಕಿ
ಕಾಂಗ್ರೆಸ್ ಸರ್ಕಾರ ಇರುವಾಗ ಗ್ಯಾಸ್ ದರ ಹೆಚ್ಚಳ ಮಾಡಿದಾಗ ʻಸಿಲಿಂಡರ್‌ಗೆ ಕೈ ಮುಗಿದು ವೋಟ್ ಹಾಕಿʼ ಎಂದು ಮೋದಿ ಅವರು ಕರೆ ಕೊಟ್ಟಿದ್ದರು. ಈಗ ನಾನೂ ಕೂಡಾ ಅದೇ ರೀತಿ ಕರೆ ಕೊಡುತ್ತಿದ್ದೇನೆ: ಭಾಯಿಯೋ ಬೆಹನೋ ಗ್ಯಾಸ್ ದರ ಏರಿಕೆ ಆಗಿದೆ, ಸಿಲಿಂಡರ್ ಗೆ ಕೈ ಮುಗಿದು ಮತದಾನ ಮಾಡಿ ಎಂದರು ಡಿ.ಕೆ. ಶಿವಕುಮಾರ್.
ಗ್ಯಾರಂಟಿ ಕಾರ್ಡ್‌ಗೆ ಮೇ 10ರಂದು ಬೀಳಲಿದೆ ಮುದ್ರೆ
ನಾವು ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ಕೊಡುತ್ತೇವೆ ಎಂದಿದ್ದೇವೆ, ಗೃಹ ಲಕ್ಷ್ಮಿ ಯೋಜನೆಯಡಿ ಕುಟುಂಬದ ಪ್ರಧಾನ ಮಹಿಳೆಗೆ ತಿಂಗಳಿಗೆ 2000 ರೂ. ಕೊಡುತ್ತೇವೆ, ಅನ್ನ ಭಾಗ್ಯ ಹತ್ತು ಕೆಜಿ ಅಕ್ಕಿ ನಿಶ್ಚಿತ, ಯುವ ನಿಧಿ ಖಂಡಿತ.. ನಾಲ್ಕು ಯೋಜನೆಗೆ ಜಾರಿ ಮಾಡುತ್ತೇವೆ. ಮೇ 10ರಂದು ರಾಜ್ಯದ ಭವಿಷ್ಯ ಬದಲಾವಣೆ ದಿನ. ನಮ್ಮ ಗ್ಯಾರಂಟಿ ಕಾರ್ಡ್‌ಗೆ ಮುದ್ರೆ ಹಾಕುವ ದಿನ. ನಾವು ಅಧಿಕಾರಕ್ಕೆ ಬಂದ ಮೊದಲನೇ ಕ್ಯಾಬಿನೆಟ್ ನಲ್ಲೇ ಗ್ಯಾರಂಟಿಗಳ ಜಾರಿಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು ಡಿ.ಕೆ. ಶಿವಕುಮಾರ್. ಜೂನ್ ತಿಂಗಳಿನಿಂದಲೇ ಗ್ಯಾರಂಟಿ ಘೋಷಣೆ ಜಾರಿಗೊಳಿಸುತ್ತೇವೆ ಎಂದು ಸಾರಿದರು. ಒಂದು ವೇಳೆ ಗ್ಯಾರಂಟಿಗಳನ್ನು ಜಾರಿಗೆ ತರದೇ ಹೋದರೆ ಮುಂದೆ ಯಾವತ್ತೂ ಮತ ಕೇಳಲ್ಲ ಎಂದು ಘೋಷಿಸಿದರು.
ಮೋದಿ ಅವರು ಹತಾಶರಾಗಿದ್ದಾರೆ. ಅವರು ನಮ್ಮ ಗ್ಯಾರಂಟಿಗಳನ್ನು ನೋಡಿ ಆತಂಕ ಪಡೋ ಅಗತ್ಯವಿಲ್ಲ. ಯಾಕೆಂದರೆ ಹೇಗಿದ್ದರೂ ಅವರ ಸರ್ಕಾರ ಬರೋದಿಲ್ಲ. ಅವರು ಕೊಟ್ಟ ಯಾವ ಭರವಸೆಗಳನ್ನು ಈಡೇರಿಸಿಲ್ಲ. ನಾವು ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಪೂರೈಸೋದು ಖಚಿತ ಎಂದರು ಡಿ.ಕೆ ಶಿವಕುಮಾರ್.
ಇದನ್ನೂ ಓದಿ : Modi Virtual samvada: ಕಾಂಗ್ರೆಸ್‌ನ ವಾರಂಟಿಯೇ ಮುಗಿದಿದೆ, ಇನ್ನು ಗ್ಯಾರಂಟಿ ಕಥೆ ಏನು?; ಮೋದಿ ಪ್ರಶ್ನೆ
karnataka-election: DKS thanks Narendra modi for observing Congress guarantee card, and suggests him to look into BJP manifesto also.