Site icon Vistara News

Karnataka Election: ಬಿಜೆಪಿ, ಆರೆಸ್ಸೆಸ್‌ ಕಚೇರಿಯಲ್ಲಿ ಅಂಬೇಡ್ಕರ್‌ ಫೋಟೊ ಇದೆಯೇ; ಮೋದಿಗೆ ಖರ್ಗೆ ತಿರುಗುಬಾಣ

Mallikarjun Kharge

ಹಾಸನ: “ಡಾ.ಬಿ.ಆರ್.ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಅವಮಾನ ಮಾಡಿದೆ. ಈಗ ಅದೇ ಪಕ್ಷದ ನಾಯಕರು ಅಂಬೇಡ್ಕರ್‌ ಅವರ ಹೆಸರಿನಲ್ಲಿ ಮತ (Karnataka Election) ಕೇಳುತ್ತಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. “ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್‌ ಅವರ ಫೋಟೊ ಇದೆಯೇ” ಎಂದು ಪ್ರಶ್ನಿಸಿದ್ದಾರೆ.

“ನೀವು (ನರೇಂದ್ರ ಮೋದಿ) ಅಂಬೇಡ್ಕರ್‌ ಅವರು ರಚಿಸಿದ ಕಾನೂನು ಪಾಲನೆ ಮಾಡುತ್ತಿದ್ದೀರಾ? ಅಂಬೇಡ್ಕರ್‌ ಅವರನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿತು. ಕಾಂಗ್ರೆಸ್‌ ಅವರನ್ನು ಕಾನೂನು ಸಚಿವ, ಕಾರ್ಮಿಕ ಸಚಿವರನ್ನಾಗಿ ಮಾಡಿ, ವಿವಿಧ ಕಾನೂನು ಮಾಡಿತು. ಆದರೆ, ಆಗ ಬಿಜೆಪಿ ಇತ್ತಾ? ನರೇಂದ್ರ ಮೋದಿ ಅವರು ಇದ್ದರಾ” ಎಂದು ಹಾಸನದ ಅರಕಲಗೂಡು ಪಟ್ಟಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಮೋದಿಗೆ ಖರ್ಗೆ ತಿರುಗೇಟು

“ಅಂಬೇಡ್ಕರ್‌ ಅವರಿಗೆ ಸಂವಿಧಾನ ರಚನೆ ಮಾಡಲು ಅವಕಾಶ ಕೊಟ್ಟಿದ್ದೇ ಕಾಂಗ್ರೆಸ್.‌ ಆದರೆ, ಹೊಸ ಪೀಳಿಗೆಗೆ ಮೋದಿ ಅವರು ಭ್ರಮೆ ಹುಟ್ಟಿಸುತ್ತಿದ್ದಾರೆ. ಇಷ್ಟೆಲ್ಲ ಮಾತನಾಡುವ ಅವರು, ಬಿಜೆಪಿ, ಆರ್‌ಎಸ್‌ಎಸ್‌ ಕಚೇರಿಯಲ್ಲಿ ಅಂಬೇಡ್ಕರ್‌ ಫೋಟೊ ಇಟ್ಟಿದ್ದಾರಾ? 1947ರಿಂದಲೂ ಅವರು ಅಂಬೇಡ್ಕರ್‌ ಫೋಟೊ ಇಟ್ಟಿಲ್ಲ. ಕಾಂಗ್ರೆಸ್‌ ಅಭಿವೃದ್ಧಿ ಮಾಡಿದ ಬಳಿಕ ಮೋದಿ ಅವರು ಸುಖ ಅನುಭವಿಸಲು ಬಂದಿದ್ದಾರೆ. ಅವರು ನಮಗೆ ಪಾಠ ಹೇಳುವುದು ಬೇಡ” ಎಂದರು.

ನೆಹರುಗೆ ಬೈದಿದ್ದು ಲೆಕ್ಕ ಇಟ್ಟಿದ್ದಾರಾ?

ಕಾಂಗ್ರೆಸ್‌ನವರು 91 ಬಾರಿ ಬೈದಿದ್ದಾರೆ ಎಂದು ನರೇಂದ್ರ ಮೋದಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, “ನರೇಂದ್ರ ಮೋದಿ ಅವರು ಎಲ್ಲವನ್ನೂ ಎಣಿಸಿಕೊಂಡು ಇಟ್ಟಿರಬೇಕು. ಆದರೆ, ದಲಿತರಿಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರಿಗೆ, ಗಾಂಧಿ ಫ್ಯಾಮಿಲಿಗೆ, ಜವಾಹರ ಲಾಲ್‌ ನೆಹರು ಅವರಿಗೆ ಮೋದಿ ಅವರು ಎಷ್ಟು ಬಾರಿ ಬೈದಿದ್ದಾರೆ? ಅದನ್ನು ಅವರು ಲೆಕ್ಕ ಇಟ್ಟಿದ್ದಾರಾ” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Karnataka Election : ವಿಷದ ಹಾವು ಹೇಳಿಕೆ ನಿಮಗೆ ಶೋಭೆಯಲ್ಲ ಖರ್ಗೆಯವರೇ ಎಂದ ಬಿ.ಎಸ್‌ ಯಡಿಯೂರಪ್ಪ

“ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಎಲ್ಲಿದೆ? ಅದರಲ್ಲಿ ಒಂದು ಇಂಜಿನ್ ಫೇಲ್ ಆಗಿದೆ. ಎಲ್ಲದಕ್ಕೂ ಜಿಎಸ್ ಟಿ ಆಗಿದೆ. ಗಾಳಿಗೆ ಯಾವಾಗ ಜಿಎಸ್‌ಟಿ ಹಾಕುತ್ತಾರೋ ಗೊತ್ತಿಲ್ಲ. ಇಷ್ಟೆಲ್ಲ ಮಾಡಿ, ಮಾತನಾಡಿ ರೈತರ ಆದಾಯ ದ್ವಿಗುಣವಾಯಿತೇ? ಅದೂ ಇಲ್ಲ” ಎಂದು ಹರಿಹಾಯ್ದರು.

Exit mobile version