Site icon Vistara News

Karnataka Election Exit Poll: ಅತಂತ್ರ ವಿಧಾನಸಭೆ ನಿರೀಕ್ಷೆ, ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ, ಜೆಡಿಎಸ್‌‌‌ಗೆ ಲಕ್, ಬಿಜೆಪಿಗೆ ಹಿನ್ನಡೆ

Karnataka Election Exit Poll predicts congress may largest party and JDS May play king maker role

ಬೆಂಗಳೂರು: ಭಾರೀ ತುರುಸಿನಿಂದ ಕೂಡಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ಪೂರ್ಣಗೊಂಡಿದ್ದು, ಬಹುತೇಕ ಮತಗಟ್ಟೆ ಸಮೀಕ್ಷೆಗಳು ಮತ್ತು ಪೋಲ್ ಆಫ್ ಪೋಲ್ಸ್ ಫಲಿತಾಂಶ ಹೊರ ಬಿದ್ದಿದೆ. ಈ ಎಲ್ಲ ಸಮೀಕ್ಷೆಗಳ ಸಾರ ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ. ಕಾಂಗ್ರೆಸ್ ಪಕ್ಷವು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ, ಬಿಜೆಪಿ ಎರಡನೇ ಸ್ಥಾನ ಮತ್ತು ಮೂರನೇ ಸ್ಥಾನದಲ್ಲಿ ಜೆಡಿಎಸ್ ಇರಲಿದೆ. ಪಕ್ಷೇತರರಿಗೆ ಅಂಥ ಅವಕಾಶಗಳಿಲ್ಲ. ಈ ಮತಗಟ್ಟೆಗಳ ಸಮೀಕ್ಷೆ ಆಸುಪಾಸಿನಲ್ಲೇ ಫಲಿತಾಂಶ ಕೂಡ ಬಂದು ಬಿಟ್ಟರೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಈ ಬಾರಿ ಮತ್ತೆ ಪ್ರಮುಖ ಪಾತ್ರ ನಿರ್ವಹಿಸುವ ಸಾಧ್ಯತೆ (Karnataka Election Exit Poll) ಇದೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

2018ರ ವಿಧಾನಸಭೆ ಚುನಾವಣೆ ವೇಳೆಯೂ ಇಂಥದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಫಲಿತಾಂಶ ಪ್ರಕಟವಾದ ನಂತರ ನಡೆದ ಎಲ್ಲ ಬೆಳವಣಿಗೆಗಳೂ ಇತಿಹಾಸದಲ್ಲಿ ಪುಟದಲ್ಲಿವೆ. ಆದರೆ, ಪ್ರಸಕ್ತ ಚುನಾವಣೆಯಲ್ಲಿ ಮತಗಟ್ಟೆ ಸಮೀಕ್ಷೆಗಳು ಸಾಕಷ್ಟು ಹೊಳಹುಗಳನ್ನು ನೀಡುತ್ತಿವೆ. ಕಳೆದ ಮೂರುವರೆ ವರ್ಷದಲ್ಲಿ ಆಡಳಿತ ನಡೆಸಿದ ಬಿಜೆಪಿಗೆ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ತಟ್ಟಿದೆ. ಅದರ ಪರಿಣಾಮವನ್ನು ನಾವು ಸಮೀಕ್ಷೆಯಲ್ಲಿ ಕಾಣಬಹುದಾಗಿದೆ. ಮತ್ತೊಂದೆಡೆ, ಕಾಂಗ್ರೆಸ್‌ನ ವ್ಯವಸ್ಥಿತ ಪ್ರಚಾರ ಮತ್ತು ಸಾಮೂಹಿಕ ನಾಯಕತ್ವ, ಜನಪ್ರಿಯ ಯೋಜನೆಗಳ ಘೋಷಣೆಗಳು ಜನರನ್ನು ಆಕರ್ಷಿಸಿದಂತಿದೆ. ಜೆಡಿಎಸ್ ತನ್ನ ‘ಮೂಲಧ್ಯೇಯ’ಕ್ಕೆ ಬದ್ಧವಾಗಿರುವ ಸಂಗತಿ ಈ ಸಮೀಕ್ಷೆಗಳಲ್ಲಿ ವ್ಯಕ್ತವಾಗಿದೆ.

ಕಾಂಗ್ರೆಸ್ ಎಡವಟ್ಟು ಮಾಡಿಕೊಳ್ಳದಿದ್ದರೆ…

ಮೊದಲಿನಿಂದಲೂ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯನ್ನು ಸುನಾಮಿಯನ್ನಾಗಿಸಲು ಕಾಂಗ್ರೆಸ್ ಯಶಸ್ವಿಯಾಗಿತ್ತು. ಆದರೆ, ಅಂತಿಮ ಪ್ರಚಾರದ ಸಂದರ್ಭದಲ್ಲಿ ಮೋದಿ ವಿರುದ್ಧ ವೈಯಕ್ತಿಕ ದಾಳಿ ಮತ್ತು ಬಜರಂಗದಳ ನಿಷೇಧದಂಥ ಅನವಶ್ಯಕ ಸಂಗತಿಗಳು ತಲೆದೋರದೇ ಇದ್ದಿದ್ದರೆ, ಮತಗಟ್ಟೆ ಸಮೀಕ್ಷೆಗಳಲ್ಲಿ ಸಂಪೂರ್ಣ ಬಹುಮತ ವ್ಯಕ್ತವಾಗುತ್ತಿತ್ತಾ? ಇದಕ್ಕೆ ನಿಖರವಾದ ಉತ್ತರವಿಲ್ಲ. ಆದರೆ, ಆ ಸಾಧ್ಯತೆಯಂತೂ ಇತ್ತು.

ಬಿಜೆಪಿಗೆ ಪ್ರಧಾನಿ ಮೋದಿ ವರ್ಚಸ್ಸಿನ ಆಸರೆ

ಈ ಮತಗಟ್ಟೆ ಸಮೀಕ್ಷೆಗಳು ಕೂಡ ಪ್ರಧಾನ ಮೋದಿಯ ವರ್ಚಸ್ಸನ್ನು ಓರೆಗೆ ಹಚ್ಚಿದಂತಿವೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಬಿಜೆಪಿಗೆ, ಪ್ರಧಾನಿ ಮೋದಿ ಅವರ ಅಬ್ಬರದ ಪ್ರಚಾರಗಳು ಕೈ ಹಿಡಿದಂತೆ ಕಾಣುತ್ತಿದೆ. ಇಲ್ಲದಿದ್ದರೆ, ಬಿಜೆಪಿಯ ಸಂಖ್ಯೆ ಇನ್ನಷ್ಟು ಕೆಳಗಿಳಿಯುವ ಸಾಧ್ಯತೆಗಳಿದ್ದವು. ಹಾಗೆಯೇ, ಲಿಂಗಾಯತ ನಾಯಕರ ಕಡಗಣನೆ, ಸ್ಥಳೀಯ ನಾಯಕತ್ವದ ಕೊರತೆ, ಹೊಸ ಮುಖಗಳ ಮೇಲೆ ಬೆಟ್ಟಿಂಗ್ ಮಾಡಿರುವ ಅಪಾಯದ ಹೊಳಹುಗಳನ್ನು ಈ ಸಮೀಕ್ಷೆಯಲ್ಲಿ ಕಾಣಬಹುದಾಗಿದೆ.

ಮತಗಟ್ಟೆ ಸಮೀಕ್ಷೆಗಳು ಹೇಳುವುದೇನು?

ಝೀ ನ್ಯೂಸ್ ಬಿಜೆಪಿಗೆ 79ರಿಂದ 80, ಕಾಂಗ್ರೆಸ್‌ 108ರಿಂದ 118, ಜೆಡಿಎಸ್ 25ರಿಂದ 35 ಹಾಗೂ ಇತರು 2ರಿಂದ 6ಸ್ಥಾನಗಳನ್ನು ಪಡೆಯಲಿದೆ. ಇನ್ನು ರಿಪಬ್ಲಿಕ್ ಟಿವಿ ಪ್ರಕಾರ, ಬಿಜೆಪಿ 85ರಿಂದ 100, ಕಾಂಗ್ರೆಸ್ 94ರಿಂದ 108, ಜೆಡಿಎಸ್ 24ರಿಂದ 32 ಸೀಟ್ ಗೆಲ್ಲುವ ಸಾಧ್ಯತೆ ಇದೆ. ನ್ಯೂಸ್ ನೇಷನ್ ಮತ್ತು ಸಿಜಿಎಸ್ ಮತಗಟ್ಟೆ ಸಮೀಕ್ಷೆಯ ಪ್ರಕಾರ, ಬಿಜೆಪಿ 114, ಕಾಂಗ್ರೆಸ್ 86, ಜೆಡಿಎಸ್ 21 ಹಾಗೂ ಇತರರು ಮೂರು ಸ್ಥಾನಗಳನ್ನು ಪಡೆದುಕೊಳ್ಳಬಹುದು. ಎಬಿಪಿ-ಸಿ ವೋಟರ್ ಪ್ರಕಾರ, ಬಿಜೆಪಿ 66 – 86, ಕಾಂಗ್ರೆಸ್ 81- 101, ಜೆಡಿಎಸ್: 20- 27 ಮತ್ತು ಇತರರು ಮೂರು ಕ್ಷೇತ್ರ ಗೆಲ್ಲಬಹುದು. ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆ ಕೂಡ ಬಿಜೆಪಿಗೆ 85, ಕಾಂಗ್ರೆಸ್ 113, ಜೆಡಿಎಸ್‌ 23 ಹಾಗೂ ಇತರಿಗೆ 3 ಸ್ಥಾನಗಳನ್ನು ನೀಡಿದೆ. ಟಿವಿ 9 ಸಿ ವೋಟರ್‌ ಸಮೀಕ್ಷೆ ಪ್ರಕಾರ ಬಿಜೆಪಿಯು 83-95, ಕಾಂಗ್ರೆಸ್‌ 100-112, ಜೆಡಿಎಸ್‌ 21-29 ಹಾಗೂ ಪಕ್ಷೇತರರು 02-06 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ. ಜನ್‌ ಕೀ ಬಾತ್‌ ಸಮೀಕ್ಷೆ ಪ್ರಕಾರ ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ. ಬಿಜೆಪಿಯು 94-117, ಕಾಂಗ್ರೆಸ್‌ 91-106, ಜೆಡಿಎಸ್‌ 14-24 ಕ್ಷೇತ್ರಗಳಲ್ಲಿ ಗೆಲುವು ಸಾ ಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆದರೆ, ಇಲ್ಲೂ ಕಾಂಗ್ರೆಸ್‌ 100ರ ಗಡಿ ದಾಟುತ್ತದೆ ಎಂದು ಸಮೀಕ್ಷೆ ತಿಳಿಸಿರುವುದು ಜಿದ್ದಾಜಿದ್ದಿಯ ಕದನ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಪೋಲ್‌ ಸ್ಟ್ರ್ಯಾಟ್ ಮತಗಟ್ಟೆ ಸಮೀಕ್ಷೆ ಕೂಡ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಲಭಿಸಲಿವೆ ಎಂದು ತಿಳಿಸಿದೆ. ಆಡಳಿತಾರೂಢ‌ ಬಿಜೆಪಿಯು 88-98, ಕಾಂಗ್ರೆಸ್‌ 99-109, ಜೆಡಿಎಸ್‌ 21-26 ಹಾಗೂ ಜೆಡಿಎಸ್‌ 2-4 ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದೆ ಎಂದು ತಿಳಿಸಿದೆ.

ಇಂಡಿಯಾ ಟುಡೇ ಸಮೀಕ್ಷೆ ಹೇಗಿದೆ?

ಆದರೆ, ಎಲ್ಲ ಮತಗಟ್ಟೆ ಸಮೀಕ್ಷೆಗಳಿಗಿಂತಲೂ ಇಂಡಿಯಾ ಟುಡೇ ಮ್ಯಾಕ್ ಮಾತ್ರ ಸಂಪೂರ್ಣವಾಗಿ ಭಿನ್ನವಾದ ಚಿತ್ರಣವನ್ನು ನೀಡಿದೆ. ಈ ಮತಗಟ್ಟೆ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 122ರಿಂದ 140, ಬಿಜೆಪಿ 62ರಿಂದ 80, ಜೆಡಿಎಸ್ 20ರಿಂದ 25 ಹಾಗೂ ಇತರರು ಮೂರು ಕಡೆ ಗೆಲ್ಲಲಿದ್ದಾರೆ. ಮೇಲ್ನೋಟಕ್ಕೆ ಈ ಸಮೀಕ್ಷೆಯನ್ನು ನಂಬುವುದು ಕಷ್ಟವಾದರೂ, ಮತದಾರನ ಮನದಾಳ ಅರಿಯುವುದು ಕಷ್ಟ. 2014, 2019 ಲೋಕಸಭೆ ಚುನಾವಣೆ, ದಿಲ್ಲಿಯ ಕಳೆದ ಎರಡು ವಿಧಾನಸಭೆ ಚುನಾವಣೆ ವೇಳೆಯ ಕೆಲವು ಮತಗಟ್ಟೆ ಸಮೀಕ್ಷೆಗಳು ಇದೇ ರೀತಿ ನಂಬಲು ಸಾಧ್ಯವಾಗದಂಥ ಸಮೀಕ್ಷೆಯನ್ನು ನೀಡಿದ್ದವು ಎಂಬುದನ್ನು ನಾವು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Karnataka Election Exit Poll: ಮತದಾನ ಮುಕ್ತಾಯ, ಮತಗಟ್ಟೆ ಸಮೀಕ್ಷೆಗೆ ಕ್ಷಣಗಣನೆ; 2018ರಲ್ಲಿ ಏನಾಗಿತ್ತು?

ಪೋಲ್ ಆಫ್ ಪೋಲ್ಸ್‌ಗಳು ಹೇಳುವುದೇನು?

ಮತಗಟ್ಟೆ ಸಮೀಕ್ಷೆಗಳ ರೀತಿಯಲ್ಲೇ ಪೋಲ್ ಆಫ್ ಪೋಲ್ಸ್ ಕೂಡ ಯಾವ ಪಕ್ಷಕ್ಕೂ ಬಹುಮತ ನೀಡಿಲ್ಲ. ವಿಸ್ತಾರ ನ್ಯಸ್-ಅಖಾಡ ಪೋಲ್ ಆಫ್ ಪೋಲ್ಸ್ ಕೂಡ ಅತಂತ್ರ ವಿಧಾಸಭೆ ಫಲಿತಾಂಶವನ್ನು ಊಹೆ ಮಾಡಿದೆ. ಅಂದರೆ, ಬಿಜೆಪಿ 84ರಿಂದ 97, ಕಾಂಗ್ರೆಸ್ 95ರಿಂದ 108, ಜೆಡಿಎಸ್ 22ರಿಂದ 30 ಹಾಗೂ ಇತರರು 2ರಿಂದ 5 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.

Exit mobile version