ಚಿಕ್ಕೋಡಿ: ʻʻ೧೨೩.. ೧೨೩.. ಅಂತ ಹೇಳ್ಕೊಂಡು ಓಡಾಡ್ತಾರಲ್ಲಾ.. ಎಲ್ಲಿಂದ ಬರುತ್ತೇರಿ ೧೨೩ ಸೀಟು.. ನಾನು ಅಧ್ಯಕ್ಷ ಆಗಿದ್ದಾಗಲೇ ಬಂದಿದ್ದು ೫೯ ಸೀಟು.. ಜೆಡಿಎಸ್‌ಗೆ ಯಾವತ್ತಾದರೂ ೧೨೩ ಸೀಟು ಬಂದಿದ್ಯೇನ್ರೀ.. ಈಗ ಒಮ್ಮೆಗೇ ಎಲ್ಲಿಂದ ಬರುತ್ತೆ ೧೨೩ʼʼ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ನಾಯಕರನ್ನು ವ್ಯಂಗ್ಯ ಮಾಡಿದ ಬೆನ್ನಿಗೇ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ (Karnataka Election) ಅವರು ತಿರುಗೇಟು ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಅವರು ಮಾತನಾಡಿದರು.
ʻʻನಮ್ಮ ಪಕ್ಷದ 120 ಇರಲಿ, ಅವರ ಪರಿಸ್ಥಿತಿ ನೋಡಿಕೊಳ್ಳಲಿ.. ಸಿದ್ದರಾಮಯ್ಯ ಮೊದಲು ಅವರ ಪರಿಸ್ಥಿತಿ ನೋಡಿಕೊಳ್ಳಲಿ. ಅವರು ಕ್ಷೇತ್ರವೇ ಇಲ್ಲದೆ ದುರ್ಬೀನು ಹಾಕಿಕೊಂಡು ಹುಡುಕುತ್ತಿದ್ದಾರೆʼʼ ಎಂದ ಅವರು, ನಾವು ಎಷ್ಟು ಸೀಟು ಗೆಲ್ಲುತ್ತೇವೆ ಎನ್ನುವುದನ್ನು ಜನ ತೀರ್ಮಾನಿಸುತ್ತಾರೆ. ಅದರ ಬಗ್ಗೆ ಸಿದ್ದರಾಮಯ್ಯ ತಲೆ ಕೆಡಿಸಿಕೊಳ್ಳುವುದು ಬೇಡ ಎಂದರು.
ಡಿಎನ್‌ಎ ಹೇಳಿಕೆಗೆ ಮೊದಲು ಜೋಶಿ ಉತ್ತರ ಕೊಡಿ
ಬಿಜೆಪಿ ನಾಯಕ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಮಾಡಿದ ಬ್ರಾಹ್ಮಣ ಸಿಎಂ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಅವರು, ʻʻನಾನು ಕೊಟ್ಟಿರುವ ಡಿಎನ್ ಎ ಹೇಳಿಕೆಗೆ ಮೊದಲು ಜೋಶಿ ಉತ್ತರ ನೀಡಬೇಕು. ಬಳಿಕೆ ಬೇರೆ ಬೇರೆ ವಿಚಾರಗಳನ್ನು ಚರ್ಚೆ ಮಾರೋಣ. ನವಗ್ರಹವೋ ದ್ವಿತೀಯ ಗೃಹವೋ ತೃತೀಯ ಗ್ರಹವೋ ಎಂಬ ಬಗ್ಗೆ ಆಮೇಲೆ ಚರ್ಚೆ ಮಾಡೋಣʼʼ ಎಂದರು.
ರೌಡಿ ಶೀಟ್ ತೆಗೆಯಲು ಮನವಿ
ʻʻಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರ ಮೇಲೆ ಹಾಕಿರುವ ರೌಡಿ ಶೀಟನ್ನು ತೆಗೆಯುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆʼʼ ಎಂದು ಹೇಳಿದರು ಕುಮಾರಸ್ವಾಮಿ.
ಭವಾನಿ ರೇವಣ್ಣಗೆ ಟಿಕೇಟ್ ವಿಚಾರ
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʻʻತಲೆ ಕೆಡಿಸಿಕೊಳ್ಳಬೇಡಿ, ಅವನ್ನೆಲ್ಲ ನಾವೇ ತೀರ್ಮಾನ ಮಾಡುತ್ತೇವೆ. ಹಾಸನದ ಬಗ್ಗೆ ಇಡೀ ರಾಜ್ಯಕ್ಕೆ ಕುತೂಹಲ ಬರುವ ಹಾಗೆ ಮಾಡಿದ್ದು ಮಾಧ್ಯಮಗಳು. ಕುತೂಹಲ ನಿಮಗಿರಬಹುದು, ಆದರೆ, ನಮಗೆ ಅದರ ಬಗ್ಗೆ ಹೆಚ್ಚು ಕುತೂಹಲವಿಲ್ಲ. ನಾವು ಸಮಾಧಾನವಾಗಿ ಕುಳಿತು ಮಾತನಾಡುತ್ತೇವೆʼʼ ಎಂದರು.
ಬಜೆಟ್‌ನಿಂದ ಯಾವ ಉಪಯೋಗವೂ ಇಲ್ಲ!
ʻʻಈ ಬಾರಿಯ ಬಜೆಟ್ ಸುಮ್ನನೆ ಅವರಿಗೆ ಜಾಹಿರಾತು ಅಷ್ಟೆ, ಮೂರೂವರೆ ವರ್ಷ ಏನೂ ಮಾಡದೆ ಇದ್ದವರು ಇನ್ನೇನು ಮಾಡುತ್ತಾರೆ. ಬಜೆಟ್ ಮಂಡನೆಯಾಗಿ 15 ದಿನಗಳಲ್ಲಿ ಚುನಾವಣೆ ಘೋಷಣೆ ಆಗಲಿದೆ, ಯಾವ ಕಾರ್ಯಕ್ರಮವು ಆಗಲ್ಲಾ. ಮುಂದೆ ಈ ಸರ್ಕಾರ ಬರುತ್ತೊ ಇಲ್ಲವೊ ಜನ ಹೇಳಬೇಕು. ಆಗ ಹೊಸ ಬಜೆಟ್ ಬರುತ್ತದೆ. ಈ ಬಜೆಟ್ ವೇಸ್ಟ್ʼʼ ಎಂದರು.
ಇದನ್ನೂ ಓದಿ : Prajadwani Yatra: 123 ಅಂತೆ 123.. ಜೆಡಿಎಸ್‌ಗೆ ಎಲ್ಲಿಂದ ಬರುತ್ತೆ 123 ಸೀಟು, ಒಮ್ಮೆನಾದ್ರೂ ಗೆದ್ದಿದಾರಾ?; ಸಿದ್ದರಾಮಯ್ಯ ವ್ಯಂಗ್ಯ