Site icon Vistara News

Karnataka Election : ತುಮಕೂರು ಬಂಡಾಯ; ಟಿಕೆಟ್‌ ಸಿಗದ ಸಿಟ್ಟಿನಿಂದ ಬಿಜೆಪಿಗೆ ರಾಜೀನಾಮೆ ನೀಡಿದ ಸೊಗಡು ಶಿವಣ್ಣ

Sogadu Shivanna Jyothi Ganesh

#image_title

ತುಮಕೂರು: ತುಮಕೂರು ನಗರ ಕ್ಷೇತ್ರದ (Karnataka Election) ಬಿಜೆಪಿ ಟಿಕೆಟ್‌ನ್ನು ಹಾಲಿ ಶಾಸಕ ಜ್ಯೋತಿ ಗಣೇಶ್‌ಗೆ ನೀಡಿದ್ದರಿಂದ ಆಕ್ರೋಶಿತರಾದ ಜಿಲ್ಲೆಯ ಪ್ರಭಾವಿ ಮುಖಂಡ ಸೊಗಡು ಶಿವಣ್ಣ (Sogadu Shivanna) ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಬುಧವಾರ ಬೆಂಬಲಿಗರ ಜತೆ ಸಭೆ ನಡೆಸಿದ ಬಳಿಕ ಅವರು ರಾಜೀನಾಮೆ ಘೋಷಿಸಿದರು.

ʻʻನಾನು ರಾಜೀನಾಮೆ ಕೊಡೋದು ಸತ್ಯ. ನೂರಕ್ಕೆ ನೂರು ಪಾಲು ನಾಳೆ ರಾಜೀನಾಮೆ ಕೊಡ್ತೀನಿ. ಚುನಾವಣೆಗೆ ಜೋಳಿಗೆ ಹಾಕಿಕೊಂಡು ನಿಂತ್ಕೋತ್ತೀನಿ. ನಮ್ಮ ಕ್ಷೇತ್ರದ ಮತದಾರ ದೇವರ ಸತ್ಯ ಮಾಡಿ ಹೇಳ್ತೀನಿ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೀನಿʼʼ ಎಂದು ಸೊಗಡು ಶಿವಣ್ಣ ಹೇಳಿದರು.

ಬಾವುಟ ಒಂದು ಇಟ್ಟು ಬರಬೇಕು

ʻʻನನಗೆ ಇವತ್ತು ರಾತ್ರಿಯವರೆಗೆ ಸಮಯ ಬೇಕು. ನನ್ನ ಪಕ್ಷದ ಬಾವುಟಗಳು ನನ್ನ ಮನೆಯಲ್ಲಿವೆ. ನಾನು ಕೊನೆಯವರೆಗೂ ಅದಕ್ಕೆ ಗೌರವ ಕೊಡಬೇಕು. ಹೀಗಾಗಿ ಅವುಗಳನ್ನ ಬೇರೆ ಕಡೆಗೆ ಶಿಫ್ಟ್ ಮಾಡಬೇಕಿದೆ. ಅದಾದ ನಂತರ ರಾಜೀನಾಮೆ ಘೋಷಿಸುತ್ತೇನೆʼʼ ಎಂದು ಸೊಗಡು ಶಿವಣ್ಣ ಹೇಳಿದರು.

ಪಕ್ಷೇತರನಾಗಿ ಕಣಕ್ಕೆ ಎಂದ ಸೊಗಡು

ʻʻನಿಮ್ಮ ಆಶಯದಂತೆಯೇ ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ನೀವೇನು ರಾಜೀನಾಮೆ ಪತ್ರಗಳಿಗೆ ಸಹಿ ಹಾಕಿ ಇಟ್ಟುಕೊಂಡಿದ್ದೀರಿ ಅದನ್ನೆಲ್ಲ ಜಿಲ್ಲಾ ಕಚೇರಿಗೆ ಕೊಟ್ಟು ಬನ್ನಿ. ಅದನ್ನೆಲ್ಲ ಅವರ ಮುಖದ ಮೇಲೆ ಬಿಸಾಕಿ ಬನ್ನಿ. ನಾನು ಅಲ್ಲಿ ಬರಲ್ಲ. ಯಾಕಂದ್ರೆ ನಾನು ಇನ್ಮೇಲೆ ಅಲ್ಲಿ ಕಾಲು ಹಾಕಲ್ಲʼʼ ಎಂದು ಬೆಂಬಲಿಗರ ಮುಂದೆ ರಾಜೀನಾಮೆ ಘೋಷಣೆ ಮಾಡಿದ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.

ಸೊಗಡು ಶಿವಣ್ಣ ಬಂಡಾಯದ ಕಡೆಗೆ ನಡೆದ ಹಾದಿ

ಸೊಗಡು ಶಿವಣ್ಣ ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಹೋರಾಟಗಾರ. 1994ರಲ್ಲಿ ಮೊದಲ ಬಾರಿಗೆ ತುಮಕೂರು ನಗರ ಶಾಸಕರಾಗಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಅವರು 2013ರವರೆಗೂ ಗೆಲುವು ಸಾಧಿಸಿದ್ದರು. ಕುಮಾರಸ್ವಾಮಿ ನೇತೃತ್ವದ 20-20 ಸರಕಾರದಲ್ಲಿ ರೇಷ್ಮೆ ಸಚಿವರಾಗಿ, ಮುಂದೆ 2012-13ರ ಅವಧಿಯಲ್ಲಿ ಜಗದೀಶ್‌ ಶೆಟ್ಟರ್‌ ಸಂಪುಟದಲ್ಲಿ ಪರಿಸರ ಸಚಿವರಾಗಿ ಕೆಲಸ ಮಾಡಿದ ಅನುಭವ ಸೊಗಡು ಶಿವಣ್ಣ ಅವರಿಗಿದೆ. 2013ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಡಾ. ರಫೀಕ್‌ ಖಾನ್‌ ಅವರೆದುರು ಸೋತಿದ್ದರು. 2018ರಲ್ಲಿ ಬಿಜೆಪಿ ಸೊಗಡು ಶಿವಣ್ಣ ಅವರ ಬದಲಾಗಿ ಯುವಕ ಜ್ಯೋತಿ ಗಣೇಶ್‌ ಅವರಿಗೆ ಟಿಕೆಟ್‌ ನೀಡಿ ಅವರು ಗೆಲುವು ಸಾಧಿಸಿದರು.

2018ರಲ್ಲಿ ನಾನು ಹಿರಿಯರ ಮಾತಿಗೆ ಮನ್ನಣೆ ಕೊಟ್ಟು ಜ್ಯೋತಿ ಗಣೇಶ್‌ಗೆ ಸೀಟು ಬಿಟ್ಟುಕೊಟ್ಟಿದ್ದೆ. ಈಗ ಜ್ಯೋತಿಗಣೇಶ್‌ ನನಗೆ ಬಿಟ್ಟು ಕೊಡಲಿ ಎಂಬ ವಾದದೊಂದಿಗೆ ಸೊಗಡು ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಮಾತ್ರವಲ್ಲ, ಎರಡು ವಾರದ ಹಿಂದೆ ನಗರದ ಕಾಳಮ್ಮ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರು ಜೋಳಿಗೆ ಹಿಡಿದು ಪ್ರಚಾರ ಶುರು ಮಾಡಿದ್ದರು. ಚುನಾವಣಾ ಠೇವಣಿಗಾಗಿ ಜನರಿಂದಲೇ ಹಣ ಸಂಗ್ರಹಿಸಿದ್ದರು.

ಈ ನಡುವೆ, ಬಿಜೆಪಿ ತುಮಕೂರಿನ ಯುವ ಶಾಸಕ ಹಾಗೂ ಜನಪ್ರಿಯತೆ ಹೊಂದಿರುವ ಜ್ಯೋತಿ ಗಣೇಶ್‌ ಅವರನ್ನೇ ನೆಚ್ಚಿಕೊಂಡು ಟಿಕೆಟ್‌ ನೀಡಿದೆ. ಇದುವರೆಗೆ ಪ್ರಚಾರದಲ್ಲಿದ್ದ ಸೊಗಡು ಶಿವಣ್ಣ ಅವರಿಗೆ ಇದು ಭಾರಿ ಹಿನ್ನಡೆಯಾಗಿದ್ದರಿಂದ ಅವರು ಪಕ್ಷಕ್ಕೇ ರಾಜೀನಾಮೆ ನೀಡಿದ್ದಾರೆ, ಜತೆಗೆ ಪಕ್ಷೇತರನಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ : Karnataka Elections : ತುಮಕೂರಿನಲ್ಲಿ ಬಿಜೆಪಿ ಟಿಕೆಟ್‌ ಫೈಟ್‌; 1 ನೋಟು, 1 ವೋಟು ಅಭಿಯಾನ ಶುರು ಮಾಡಿದ ಸೊಗಡು ಶಿವಣ್ಣ

Exit mobile version