Site icon Vistara News

Karnataka Election: ಪತ್ನಿ ಚೆನ್ನಮ್ಮ ಜತೆ ಬಂದು ಮತ ಹಾಕಿದ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು

karnataka-election: Former PM HD Devegowda casts vote at Hassan

karnataka-election: Former PM HD Devegowda casts vote at Hassan

ಹಾಸನ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ (HD Devegowda) ಅವರು ಹಾಸನದ ಹೊಳೆನರಸೀಪುರ ಕ್ಷೇತ್ರದಲ್ಲಿ ಮತದಾನ ಮಾಡಿದರು. ಹೊಳೆನರಸೀಪುರ ತಾಲೂಕಿನ ಪಡುವಲ‌ಹಿಪ್ಪೆ ಗ್ರಾಮ ಮತಗಟ್ಟೆ ಸಂಖ್ಯೆ 251 ರಲ್ಲಿ ಅವರು ಮತ ಚಲಾಯಿಸಿದರು (Karnataka Election 2023). ಪತ್ನಿ ಚನ್ನಮ್ಮ ಅವರೊಂದಿಗೆ ಮತಗಟ್ಟೆಗೆ ಬಂದ ಅವರು ಮತ ಹಾಕಿದರು.

ಮನೆಯಿಂದ ಕಾರಿನಲ್ಲಿ ಮತದಾನ ಕೇಂದ್ರಕ್ಕೆ ಆಗಮಿಸಿದ ದೇವೇಗೌಡರು ಇಬ್ಬರು ಆಪ್ತ ಸಹಾಯಕರ ಸಹಾಯದೊಂದಿಗೆ ಕಾರಿನಿಂದ ಇಳಿದು ಮತಗಟ್ಟೆಯೊಳಗೆ ಹೋದರು. ಇಬ್ಬರ ಸಹಾಯದೊಂದಿಗೆ ಮತದಾನ ಮಾಡುವ ಸ್ಥಳಕ್ಕೆ ಹೋದ ಅವರು ಅವರ ಸಹಾಯದಿಂದಲೇ ಮತವನ್ನು ಚಲಾಯಿಸಿದರು. ಪತ್ನಿ ಚನ್ನಮ್ಮ ಅವರು ಯಾರದೇ ಸಹಾಯವಿಲ್ಲದೆ ಮತ ಹಾಕಿದರು.

ಜೆಡಿಎಸ್‌ ಪಕ್ಷವನ್ನು ಕಟ್ಟಿ ಬೆಳೆಸಿರುವ ದೇವೇಗೌಡರು ಈಗಲೂ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಒಂದೆರಡು ತಿಂಗಳ ಹಿಂದೆ ಅವರ ಆರೋಗ್ಯ ಸ್ವಲ್ಪ ಮಟ್ಟಿಗೆ ಕೈಕೊಟ್ಟ ಹಿನ್ನೆಲೆಯಲ್ಲಿ ಮನೆಯಲ್ಲೇ ಉಳಿದಿದ್ದರು. ಆದರೆ, ಚುನಾವಣೆ ತೀವ್ರ ಗತಿಯನ್ನು ಪಡೆದುಕೊಳ್ಳುತ್ತಿದ್ದಂತೆಯೇ ಸಕ್ರಿಯರಾಗಿದ್ದರು. ಪಕ್ಷದೊಳಗಿನ ಕೌಟುಂಬಿಕ ಭಿನ್ನಮತಗಳನ್ನು ಕೂಡಾ ಅವರೇ ಬಗೆಹರಿಸುವಷ್ಟರ ಮಟ್ಟಿಗೆ ಆರೋಗ್ಯವಂತರಾಗಿದ್ದರು.

ಈ ನಡುವೆ, ಚುನಾವಣಾ ಪ್ರಚಾರದಲ್ಲೂ ಸಾಕಷ್ಟು ಸಕ್ರಿಯರಾಗಿದ್ದ ಅವರು ಸಾರ್ವಜನಿಕ ಸಮಾವೇಶ ಮತ್ತು ರೋಡ್‌ ಶೋಗಳಲ್ಲಿ ಭಾಗವಹಿಸಿದ್ದರು.

ಎಲ್ಲದಕ್ಕೂ ಅಭಿವೃದ್ಧಿ ಚಟುವಟಿಕೆಗೆ ಕಾರಣ ರೇವಣ್ಣ ಎಂದ ಎಚ್‌.ಡಿ.ಡಿ.

ಬಳಿಕ ಮಾತನಾಡಿದ ಅವರು, ʻʻನನ್ನ ಹುಟ್ಟೂರು ಹರದನಹಳ್ಳಿ 1962ರಲ್ಲಿ ಇಲ್ಲಿಗೆ ಬಂದೆ. ಅಲ್ಲಿರುವ ಆಸ್ತಿಯನ್ನೆಲ್ಲ ನನ್ನ ತಮ್ಮಂದಿರಿಗೆ ಮತ್ತು ಚಿಕ್ಕಪ್ಪಂದಿರಿಗೆ ವಹಿಸಿಕೊಟ್ಟೆ. ಇಲ್ಲಿ ಜಮೀನು ತೆಗೆದುಕೊಂಡು ವ್ಯವಸಾಯ ಶುರು ಮಾಡಿದ್ವಿ. ಆಗದಿಂದ ಈಗಿನವರೆಗೆ ಇಲ್ಲೇ ಮತದಾನ ಮಾಡುತ್ತಿದ್ದೇನೆʼʼʼ ಎಂದು ಹಿಂದಿನ ನೆನಪು ಮೆಲುಕು ಹಾಕಿದರು.

ʻʻರೇವಣ್ಣ ಆಗಿನ್ನೂ ಚಿಕ್ಕ ಹುಡುಗ. ವಿದ್ಯಾಭ್ಯಾಸ ಮಾಡುತ್ತಿದ್ದರು. ರೇವಣ್ಣ ಐಟಿಐ ಮಾಡಬೇಕೆಂಬ ಆಸೆ ಇತ್ತು. ಆದರೆ, ಆದರೆ ಅವರ ಹಣೆಬರಹ ಸರಿ ಇರಲಿಲ್ಲ. ನಾನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿನಲ್ಲಿ ಇದ್ದೆ. ಆಗ ರೇವಣ್ಣ ಐಟಿಐ ಬಿಟ್ಟು ವ್ಯವಸಾಯ ಶುರು ಮಾಡಿದರು. ಅದರೆ, ಈಗ ನಮ್ಮ ಊರು ಯಾವ ಸಿಟಿಗೂ ಕಡಿಮೆ ಇಲ್ಲದಂತೆ ಬೆಳೆದಿದೆ. ಇಲ್ಲಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದರೆ ಅದರ ಕೀರ್ತಿ ರೇವಣ್ಣ ಮತ್ತು ಭವಾನಿ ರೇವಣ್ಣ ಅವರಿಗೆ ಸಲ್ಲಬೇಕುʼʼ ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: 1 ಗಂಟೆಗೆ 37.25% ಮತದಾನ; ಕಳೆದ ಸಾರಿಗಿಂತ ಹೆಚ್ಚಾ, ಕಡಿಮೇನಾ?

karnataka-election: Former PM HD Devegowda casts vote at Hassan

Exit mobile version