Site icon Vistara News

Karnataka Election : ನನಗೂ ಡಿಸಿಎಂ ಸ್ಥಾನ ಬೇಕು; ಜಿ. ಪರಮೇಶ್ವರ್‌ ಹಕ್ಕು ಮಂಡನೆ, ಡಿಕೆಶಿ ವಿರುದ್ಧ ಆಕ್ರೋಶ

G Parameshwar wants DCM post

G Parameshwar wants DCM post

ಬೆಂಗಳೂರು: ಕಾಂಗ್ರೆಸ್‌ ಹೈಕಮಾಂಡ್‌ (Congress High command) ಹಾಗೂ ಹೀಗೂ ಮಾಡಿ ಮುಖ್ಯಮಂತ್ರಿ ಸ್ಥಾನದ (Congress CM) ವಿವಾದವನ್ನು ಬಗೆಹರಿಸಿದ ಬೆನ್ನಿಗೇ ಇದೀಗ ಉಪಮುಖ್ಯಮಂತ್ರಿ (Deputy Chief Minister) ಸ್ಥಾನದ ಬಗ್ಗೆ ವಿವಾದ ಎದ್ದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಅವರನ್ನು ನೇಮಿಸಿದ ಹೈಕಮಾಂಡ್‌ ಸಂಧಾನ ಸೂತ್ರದಂತೆ ಡಿ.ಕೆ. ಶಿವಕುಮಾರ್‌ (DK Shivakumar) ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲು ನಿರ್ಧರಿಸಿದೆ. ಈ ನಡುವೆ, ಈ ಹಿಂದೆ ಡಿಸಿಎಂ ಆಗಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಜಿ. ಪರಮೇಶ್ವರ್‌ (G Parameshwar) ಅವರು ತನಗೂ ಡಿಸಿಎಂ ಹುದ್ದೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಜಿ. ಪರಮೇಶ್ವರ್‌ ಅವರು, ನಾನು ಡಿಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ನನಗೆ ಡಿಸಿಎಂ ಸ್ಥಾನ ಕೊಡಲೇಬೇಕು ಎಂದು ಹೇಳಿದರು. ಈ ನಡುವೆ, ಡಿ.ಕೆ. ಶಿವಕುಮಾರ್‌ ಅವರು ಒಂದೇ ಡಿಸಿಎಂ ಸ್ಥಾನ ಇರಬೇಕು ಎಂಬ ಷರತ್ತು ವಿಧಿಸಿದ್ದಾರೆ ಎಂಬ ಹೇಳಿಕೆಯನ್ನು ಪರಮೇಶ್ವರ್‌ ಖಂಡಿಸಿದರು.

ʻʻಯಾರೋ ಒಬ್ಬರು ಮಾತ್ರ ಅಧಿಕಾರದಲ್ಲಿ ಇರಬೇಕು ಎನ್ನುವುದು ಸೂಕ್ತ ಅಲ್ಲ. ಡಿಸಿಎಂ ಸ್ಥಾನವನ್ನು ಹಲವರಿಗೆ ಕೊಡಬೇಕಾಗುತ್ತದೆ. ಎಲ್ಲ ಸಮುದಾಯಗಳನ್ನು ಪರಿಗಣಿಸಿ ಡಿಸಿಎಂ ಸ್ಥಾನ ಕೊಡಬೇಕಾಗುತ್ತದೆ. ನಾನೂ ಕೂಡ ಡಿಸಿಎಂ ಆಗಿದ್ದವನು. ಎಲ್ಲರ ನಾಯಕತ್ವದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ನನಗೆ ಡಿಸಿಎಂ ಸ್ಥಾನ ಕೊಡಬೇಕುʼʼ ಎಂದು ಹೇಳಿದರು.

ʻʻಡಿ.ಕೆ ಶಿವಕುಮಾರ್ ಹಾಗೆ ಒಬ್ಬರೇ ಸಾಕು ಅಂತ ಅವರು ಹೇಳೋಕೆ ಬರೊಲ್ಲ. ಒಬ್ಬರೇ ಅಧಿಕಾರದಲ್ಲಿ ಇರಬೇಕು ಅಂತ ಹೇಳೋಕೆ ಆಗೊಲ್ಲ. ಈ ಬಾರಿ ಎಲ್ಲ ಸಮುದಾಯ ಕೈ ಹಿಡಿದಿದೆ. ಹೀಗಾಗಿ ಅಧಿಕಾರ ಕೊಡಬೇಕುʼʼ ಎಂದು ಡಿಸಿಎಂ ಪಟ್ಟಕ್ಕಾಗಿ ಪರಮೇಶ್ವರ್‌ ಬಿಗಿಪಟ್ಟು ಹಿಡಿದರು. ಆದರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ಒಬ್ಬರೇ ಡಿಸಿಎಂ ಎಂದು ಸ್ಪಷ್ಟಪಡಿಸಿದ್ದಾರೆ.

ದಲಿತರಿಗೆ ಯಾವ ಸ್ಥಾನಮಾನ ನೀಡುತ್ತದೆ ನೋಡೋಣ

ಪರಿಶಿಷ್ಟ ಜಾತಿಯ ಶಾಸಕರಿಗೆ ಸಿಎಂ ಪಟ್ಟ ನೀಡಬೇಕು ಎಂಬ ಬೇಡಿಕೆ ಇದ್ದಿದ್ದು ನಿಜ. ಈಗ ಸಿಎಂ ಪಟ್ಟ ಬೇರೆಯವರಿಗೆ ನೀಡಲಾಗಿದೆ. ಹೀಗಾಗಿ ಮುಂದೆ ದಲಿತರಿಗೆ ಯಾವ ಸ್ಥಾನ ಕೊಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈ ಬಾರಿ ದಲಿತರು, ಲಿಂಗಾಯತರು, ಅಲ್ಪಸಂಖ್ಯಾತರ ಸ್ಟ್ರಾಂಗ್ ಆಗಿ ಕಾಂಗ್ರೆಸ್ ಪರ ನಿಂತು ಮತ ಹಾಕಿದ್ದಾರೆ. ದಲಿತರ ಸ್ಥಾನದ ಪೈಕಿ 51 ಸ್ಥಾನದಲ್ಲಿ 37 ಸ್ಥಾನ ಗೆದ್ದಿದೆ. ಈ ಸಮುದಾಯಗಳಿಗೆ ನ್ಯಾಯ ಕೊಡ್ತಾರೆ ನೋಡಬೇಕು ಎಂದು ಪರಮೇಶ್ವರ್‌ ಹೇಳಿದರು.

ಹೈಕಮಾಂಡ್‌ ಪರಮೇಶ್ವರ್‌ ಅವರನ್ನು ಕಡೆಗಣಿಸುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನನ್ನು ಪಕ್ಷ ಕಡೆಗಣಿಸಿಲ್ಲ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಲಾಬಿ ಮಾಡೋದಿಲ್ಲ, ಗಲಾಟೆ ಮಾಡೋದಿಲ್ಲ, ನಮಗೆ ಬೇಕಾಗಿಲ್ಲ. ಹೈಕಮಾಂಡ್ ಮೇಲೆ ವಿಶ್ವಾಸ ಇದೆ. ಹೈಕಮಾಂಡ್ ಅರ್ಥ ಮಾಡಿಕೊಂಡು ಗಣನೆಗೆ ತಗೋಬೇಕು ಎಂದು ಹೇಳಿದರು.

ರಾಜ್ಯಪಾಲರಿಗೆ ಅಧಿಕೃತ ಪತ್ರ ನೀಡಿದ ಪರಮೇಶ್ವರ್‌

ಇದರ ನಡುವೆಯೇ, ಕಾಂಗ್ರೆಸ್‌ ಸರ್ಕಾರ ರಚನೆಗೆ ಮುಂದಾಗಿದೆ ಎಂಬ ಅಧಿಕೃತ ಪತ್ರವನ್ನು ಜಿ.ಪರಮೇಶ್ವರ್‌ ಅವರು ರಾಜಭವನಕ್ಕೆ ತೆರಳಿ ನೀಡಿದ್ದಾರೆ. ಪಕ್ಷದ ಪ್ರತಿನಿಧಿಯಾಗಿ ಪತ್ರ ಸಲ್ಲಿಸಿದ ಅವರು, ಮೇ 20ರಂದು ಪ್ರಮಾಣ ವಚನಕ್ಕೆ ದಿನಾಂಕ ನಿಗದಿ ಮಾಡಲು ಮನವಿ ಮಾಡಿದರು.

ಈಗ ಪರಮೇಶ್ವರ್‌ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಪ್ರತಿನಿಧಿಯಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸಭೆ ಬಳಿಕ ಸಿದ್ದರಾಮಯ್ಯ ಅವರು ರಾಜ್ಯಪಾಲರನ್ನು ಭೇಟಿ‌ ಮಾಡಲಿದ್ದಾರೆ.

ಇದನ್ನೂ ಓದಿ: Karnataka CM : ಸಿದ್ದರಾಮಯ್ಯ ಮುಂದಿನ ಸಿಎಂ, ಡಿಕೆಶಿ ಡಿಸಿಎಂ; ಎಐಸಿಸಿಯಿಂದ ಅಧಿಕೃತ ಘೋಷಣೆ

Exit mobile version