Site icon Vistara News

Karnataka Election : ಸೋಮಣ್ಣ ಪರ ಮೋದಿ ಹವಾ; ಗಾಣಿಗ ಸಮುದಾಯದಿಂದ ಚುನಾವಣಾ ಖರ್ಚಿಗೆ ಚಂದಾ ಹಣ!

Ganiga community members give amount to Somanna

Ganiga community members give amount to Somanna

ಚಾಮರಾಜನಗರ: ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಚಾಮರಾಜ ನಗರ ಮತ್ತು ವರುಣ ಕ್ಷೇತ್ರದಿಂದ ಕಣಕ್ಕಿಳಿದಿರುವ ವಸತಿ ಸಚಿವ ವಿ. ಸೋಮಣ್ಣ ಅವರ ಪರವಾಗಿ ಈಗ ಮೋದಿ ಅಭಿಮಾನಿಗಳು ನಿಂತಿದ್ದಾರೆ. ಅದರಲ್ಲೂ ಚಾಮರಾಜನಗರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಗಾಣಿಗ ಸಮುದಾಯದ (Ganiga Community) ಅಭಿಮಾನಿಗಳು ಸೋಮಣ್ಣ (V Somanna) ಅವರಿಗೆ ಚುನಾವಣಾ ಖರ್ಚಿಗಾಗಿ ಚಂದಾ ಎತ್ತಿ ಹಣ ನೀಡಿದ್ದಾರೆ.

ಭಾನುವಾರ ಸಂಜೆ ಮೋದಿ ಅವರು ನಂಜನಗೂಡಿನಲ್ಲಿ ಬೃಹತ್‌ ಸಮಾವೇಶದಲ್ಲಿ ಭಾಗವಹಿಸಿದ್ದು ಮತ್ತು ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಈ ಬೆಳಔಣಿಗೆ ನಡೆದಿದ್ದು, ಅವರು ಬಂದು ಹೋದ ಮೇಲೆ ಗಾಣಿಗ ಸಮುದಾಯದ ಅಭಿಮಾನಿಗಳು ಹಣ ಸಂಗ್ರಹಿಸಿ ಸೋಮಣ್ಣ ಅವರಿಗೆ ನಿಡಿದ್ದಾರೆ.

ಮೋದಿ ಮೇಲಿನ ಅಭಿಮಾನದಿಂದ ತಾವೇ ಚಂದಾ ಹಾಕಿ ಸಚಿವ ವಿ.ಸೋಮಣ್ಣ ಅವರಿಗೆ ನೀಡಿದ್ದಾರೆ ಗಾಣಿಗ ಸಮುದಾಯದ ಅಭಿಮಾನಿಗಳು. ಇದು ಚಾಮರಾಜನಗರದ ಉಡಿಗಾಲ ಗ್ರಾಮದ ಗಾಣಿಗ ಸಮುದಾಯದ ಕುಟುಂಬಗಳಿಂದ ಚಂದಾ ಎತ್ತಿದ ಹಣವಾಗಿದೆ. ವಿ.ಸೋಮಣ್ಣಗೆ ತಾವೇ ನೋಟು ಕೊಟ್ಟು ಓಟನ್ನೂ ಕೊಡುವುದಾಗಿ ಭರವಸೆ ನೀಡಿದ್ದಾರೆ ಇಲ್ಲಿನ ಜನರು.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 70 ಗಾಣಿಗ ಕುಟುಂಬಗಳಿದ್ದು ಸುಮಾರು 250 ಮತದಾರರಿದ್ದಾರೆ. 70 ಕುಟುಂಬಗಳಿಂದ ತಲಾ 100 ರೂಪಾಯಿಯಂತೆ ಚಂದಾ ಹಾಕಿ 7 ಸಾವಿರ ರೂಪಾಯಿ ಸಂಗ್ರಹ ಮಾಡಿ ವಿ. ಸೋಮಣ್ಣ ಅವರಿಗೆ ನೀಡಿ ಹರಸಲಾಗಿದೆ.

ʻʻನಿಮ್ಮಿಂದ ಏನೂ ಬಯಸೋದಿಲ್ಲ, ನಾವೇ ಹಣವನ್ನು ನೀಡ್ತೇವೆ, ಓಟನ್ನು ನಿಮಗೆ ಹಾಕುತ್ತೇವೆʼʼ ಎಂದು ಹೇಳಿದರು ಗಾಣಿಗ ಸಮುದಾಯದ ಮತದಾರರು. ಮೋದಿ ಮೇಲಿನ ಪ್ರೀತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ ಮತದಾರರ ನಿಲುವಿಗೆ ಸೋಮಣ್ಣ ಹರ್ಷ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿನಲ್ಲಿ ಬೃಹತ್‌ ರೋಡ್‌ ಶೋದಲ್ಲಿ ಭಾಗವಹಿಸಿ ಬಳಿಕ ಶಿವಮೊಗ್ಗಕ್ಕೆ ಹೋಗಿದ್ದರು. ಅಲ್ಲಿನ ಆಯನೂರು ಮೈದಾನದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ನಂಜನಗೂಡಿಗೆ ಬಂದಿದ್ದರು. ಈ ವೇಳೆ ದೊಡ್ಡ ಮಟ್ಟದಲ್ಲಿ ಸಮುದಾಯದ ಜನರು ಕೂಡಾ ಸಮಾವೇಶದಲ್ಲಿ ಭಾಗಿಯಾಗಿದ್ದರು.

ವಿ. ಸೋಮಣ್ಣ ಅವರು ವರುಣ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ವರುಣದಲ್ಲಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಚಾಮರಾಜನಗರದಲ್ಲಿ ಆರಂಭಿಕವಾಗಿ ಅವರಿಗೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಿಂದ ಸ್ವಲ್ಪ ವಿರೋಧ ವ್ಯಕ್ತವಾಗಿತ್ತಾದರೂ ಮುಂದೆ ಅದೆಲ್ಲವನ್ನೂ ಸರಿ ಮಾಡಿಕೊಂಡರು. ಎಲ್ಲರ ಜತೆಗೆ ಮಾತುಕತೆ ನಡೆಸಿದ ಸೋಮಣ್ಣ, ಬಂಡಾಯದ ಭೀತಿಯನ್ನು ನಿವಾರಿಸಿಕೊಂಡರು. ಅವರ ಪತ್ನಿ ಕೂಡಾ ಕ್ಷೇತ್ರದಲ್ಲಿ ಓಡಾಡಿ ಮತದಾರರ ಮನವೊಲಿಸುತ್ತಿದ್ದಾರೆ.

ಇದೀಗ ಗಾಣಿಗ ಸಮಾಜದವರು ಈ ರೀತಿ ಹಣ ಕೊಟ್ಟು ಪ್ರೀತಿ ತೋರುತ್ತಿರುವುದು ಅವರಿಗೆ ಹೆಚ್ಚು ಶಕ್ತಿಯನ್ನು ನೀಡುವ ಪ್ರಕ್ರಿಯೆಯಾಗಿದೆ.

ಇದನ್ನೂ ಓದಿ : Modi In Karnataka: ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ಮೋದಿ, ಇದೇ ವೇಳೆ ಮಾಡಿದ ಸಂಕಲ್ಪವೇನು?

karnataka-election: Ganiga community members give amount to Somanna

Exit mobile version