ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರ ಪುತ್ರಿ, ಕನ್ನಡ ಚಿತ್ರರಂಗದ ದೊಡ್ಮನೆಯ, ಡಾ. ರಾಜ್ ಕುಮಾರ್ ಅವರ ಸೊಸೆ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಅವರು ಕಾಂಗ್ರೆಸ್ ಪಕ್ಷಕ್ಕೆ (Karnataka Election) ಸೇರ್ಪಡೆಯಾಗಿದ್ದಾರೆ. ಅವರು ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ ಪಕ್ಷ ಧ್ವಜ ಸ್ವೀಕರಿಸಿದರು. ಇದೇ ವೇಳೆ ಮೂಡಿಗೆರೆಯ ಮಾಜಿ ಶಾಸಕ ಬಿ.ಬಿ. ನಿಂಗಯ್ಯ ಅವರು ಕೂಡಾ ಕಾಂಗ್ರೆಸ್ ಪಾಳಯ ಸೇರಿದರು.
ಬಂಗಾರಪ್ಪ ಕುಟುಂಬದ ಇಬ್ಬರು ಸೋದರರಾದ ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ನಲ್ಲಿದ್ದರೆ, ಚಿತ್ರ ನಟರೂ ಆಗಿರುವ ಕುಮಾರ ಬಂಗಾರಪ್ಪ ಅವರು ಬಿಜೆಪಿಯಲ್ಲಿದ್ದು ಹಾಲಿ ಶಾಸಕರಾಗಿದ್ದಾರೆ. ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಮತ್ತು ಕುಮಾರ ಬಂಗಾರಪ್ಪ ಅವರ ನಡುವೆಯೇ ನೇರ ಮುಖಾಮುಖಿ ನಡೆಯುತ್ತಿದೆ. ಇದೀಗ ಗೀತಾ ಶಿವರಾಜ್ ಕುಮಾರ್ ಅವರು ಮಧು ಬಂಗಾರಪ್ಪ ಅವರ ಪರವಾಗಿ ಅಧಿಕೃತವಾಗಿ ಪಕ್ಷವನ್ನು ಸೇರಿದ್ದಾರೆ. ಕೌಟುಂಬಿಕ ಜಗಳದಲ್ಲಿ ಬಹುತೇಕ ಎಲ್ಲರೂ ಮಧು ಬಂಗಾರಪ್ಪ ಅವರ ಕಡೆ ಇದ್ದು, ಕುಮಾರ ಬಂಗಾರಪ್ಪ ಒಬ್ಬರೇ ಒಂದು ಕಡೆ ಇದ್ದಾರೆ.
ಗೀತಾ ಶಿವರಾಜ್ ಕುಮಾರ್ ಅವರಿಗೆ ರಾಜಕೀಯ ಹೊಸತೇನೂ ಅಲ್ಲ. 2014ರ ಚುನಾವಣೆಯಲ್ಲಿ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆಗ ಮಧು ಬಂಗಾರಪ್ಪ ಅವರು ಜೆಡಿಎಸ್‌ನಲ್ಲಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೆದ್ದಿದ್ದ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಅವರಿಗೆ 2.40 ಲಕ್ಷ ಮತಗಳು ಬಿದ್ದಿದ್ದವು. ಇದೀಗ ಮತ್ತೆ ಸೋದರ ಮಧು ಬಂಗಾರಪ್ಪ ಅವರಿಗಾಗಿ ಗೀತಾ ಪಕ್ಷ ಸೇರ್ಪಡೆಗೊಂಡಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಮಧು ಬಂಗಾರಪ್ಪ ಅವರು ಸೋದರಿಯನ್ನು ತಮ್ಮ ಪಕ್ಕವೇ ಕುಳ್ಳಿರಿಸಿಕೊಂಡಿದ್ದು ಎದ್ದು ಕಂಡಿತು.
ರಾಹುಲ್ ಗಾಂಧಿ ಪ್ರಯತ್ನದಿಂದ ಗೀತಾ ಪ್ರವೇಶ
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಸುಮಾರು ಗಾಳ ಹಾಕಿ ಹಾಕಿ ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿದ್ದೆವು. ಗೀತಾ ಶಿವರಾಜ್ ಕುಮಾರ್ ಅವರಿಗೆ ಬಲೆಯನ್ನೇ ಹಾಕಿದ್ದೆವು. ಇದಾದ ನಂತರ ರಾಹುಲ್ ಗಾಂಧಿ ಅವರು ಮಾತನಾಡಿ ಗಾಳ ಹಾಕಿದರು. ರಾಹುಲ್ ಗಾಂಧಿ ಅವರ ಪ್ರಯತ್ನ ಮತ್ತು ಅವರ ಮೇಲಿನ ಅಭಿಮಾನದಿಂದ ಗೀತಾ ಶಿವರಾಜ್ ಕುಮಾರ್ ಅವರು ಬಂದಿದ್ದಾರೆ. ಗೀತಾ ಅವರು ನನ್ನ ಲೀಡರ್ ಬಂಗಾರಪ್ಪ ಅವರ ಪುತ್ರಿ ಎನ್ನುವುದು ನನ್ನ ಹೆಮ್ಮೆ. ಡಾ. ರಾಜ್ ಕುಮಾರ್ ಅವರ ಸೊಸೆ, ಶಿವರಾಜ್ ಕುಮಾರ್ ಅವರ ಪತ್ನಿ ನಮ್ಮ ಪಕ್ಷಕ್ಕೆ ಬಂದಿರುವುದು ನಮಗೆ ಖುಷಿ ಎಂದರು.
ಮೂಡಿಗೆರೆಯಲ್ಲಿ ವಿಚಿತ್ರ ರಾಜಕೀಯ!
ಚಿಕ್ಕಮಗಳೂರಿನಲ್ಲಿ ವಿಚಿತ್ರ ರಾಜಕೀಯ ನಡೆಯುತ್ತಿದೆ. ಅಲ್ಲಿನ ಬಿಜೆಪಿ ಶಾಸಕರು ಆರು ತಿಂಗಳಿಂದ ಕಾಂಗ್ರೆಸ್ ಗೆ ಬರಲು ಕಾಯುತ್ತಿದ್ದರು. ಅವರು ಬಿಜೆಪಿಯಲ್ಲಿ ರಿಜೆಕ್ಟ್ ಆಗಿದ್ದರು. ಕಾಂಗ್ರೆಸ್ ಸೇರಿಸಿಕೊಳ್ಳಲಿಲ್ಲ. ಹಾಗಾಗಿ ಅವರು ಜೆಡಿಎಸ್‌ಗೆ ಹೋಗಿದ್ದಾರೆ. ಆದರೆ, ಜೆಡಿಎಸ್‌ನಲ್ಲೇ ನಾಯಕರಾಗಿದ್ದ ಬಿ.ಬಿ. ನಿಂಗಯ್ಯ ಅವರಿಗೆ ಬೇಸರವಾಗಿದೆ. ಹೀಗಾಗಿ ಅವರು ನಮ್ಮ ಕಡೆಗೆ ಬಂದು ಶಕ್ತಿ ತುಂಬಿದ್ದಾರೆ ಎಂದರು ಡಿ.ಕೆ. ಶಿವಕುಮಾರ್.
ಬಿಬಿ ನಿಂಗಯ್ಯ ಅವರು ರಾಜ್ಯಪಾಲರೂ ಆಗಿದ್ದ ಹಿರಿಯ ನಾಯಕ ಬಿ. ರಾಚಯ್ಯನವರ ಅಳಿಯ. ಇವರು ಮಾಜಿ ಸಚಿವರು, ಮೂರು ಬಾರಿ ಶಾಸಕರಾಗಿ ಸೇವೆ ಮಾಡಿದ್ದಾರೆ.
ಸೊರಬದಲ್ಲಿ ಶಿವರಾಜ್ ಕುಮಾರ್ ಪ್ರಚಾರ
ಗೀತಾ ಶಿವರಾಜ್ ಕುಮಾರ್ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಈಗ ಸೊರಬದಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಚಿತ್ರ ನಟ ಶಿವರಾಜ್ ಕುಮಾರ್ ಅವರ ಸೇವೆ ಉಚಿತವಾಗಿ ಸಿಕ್ಕಂತಾಗಿದೆ. ಶಿವರಾಜ್ ಅವರು ಕೂಡಾ ಸೊರಬದಲ್ಲಿ ಪ್ರಚಾರ ಮಾಡುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ನಟ ಸಾಧು ಕೋಕಿಲ ಉಪಸ್ಥಿತರಿದ್ದರು.
ಕುಮಾರ್ ಬಂಗಾರಪ್ಪ ಅವರ ಬಗ್ಗೆ ಮಾತನಾಡಲ್ಲ!
ಕಾಂಗ್ರೆಸ್ ಪಕ್ಷ ಸೇರಿದ ಬಳಿಕ ಮಾತನಾಡಿದ ಗೀತಾ ಶಿವರಾಜ್ ಕುಮಾರ್ ಅವರು, ಐತಿಹಾಸಿಕ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ನಮ್ಮ ತಂದೆಯವರು ಇದ್ದ ಪಕ್ಷ. ಕಾಂಗ್ರೆಸ್ ಪಕ್ಷಕ್ಕೆ ಬದ್ಧವಾಗಿರುತ್ತೇನೆ. ನನ್ನ ತಮ್ಮ ಕಾಂಗ್ರೆಸ್ ಸೇರಿದ್ದಾಗಿನಿಂದ ಕಾಂಗ್ರೆಸ್ ಸೇರಿದ್ದೆ. ನಮ್ಮ ತಮ್ಮನ ಪರವಾಗಿ ಪ್ರಚಾರ ಮಾಡಿದ್ದೇನೆʼʼ ಎಂದರು.
ಶಿವರಾಜ್ ಕುಮಾರ್ ಅವರು ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಆದರೂ ಕೆಲವು ಕಡೆ ಪ್ರಚಾರ ಮಾಡುತ್ತಾರೆ. ನಾನೂ ಪಕ್ಷ ಹೇಳಿದ ಕಡೆ ಪ್ರಚಾರ ಮಾಡುತ್ತೇನೆ ಎಂದರು. ಆದರೆ, ಇನ್ನೊಬ್ಬರ ಸೋದರ, ಸೊರಬದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಕುಮಾರ ಬಂಗಾರಪ್ಪ ಬಗ್ಗೆ ನಾನು ಮಾತನಾಡಲ್ಲ ಎಂದರು.