Site icon Vistara News

Karnataka Election : ಮತದಾನದ ಮುನ್ನಾದಿನವೂ ಹನುಮಾನ್‌ ಚಾಲೀಸ್‌ ಪಠಣ; ಕಾಂಗ್ರೆಸ್‌ ವಿರುದ್ಧ ಬಜರಂಗ ಅಸ್ತ್ರ

Hanuman chalisa recital at temple on the eve of voting

Hanuman chalisa recital at temple on the eve of voting

ಬೆಂಗಳೂರು: ವಿಧಾನಸಭಾ ಚುನಾವಣೆಯ (Karnataka Election 2023) ಪ್ರಚಾರದ ಸಂದರ್ಭದಲ್ಲಿ ಕೈಗೆ ಸಿಕ್ಕ ಅತಿ ದೊಡ್ಡ ಅಸ್ತ್ರವಾಗಿರುವ ʻʻಬಜರಂಗದಳ ನಿಷೇಧ ಪ್ರಸ್ತಾಪʼʼವನ್ನು (Bajarangal dal Ban) ಸಾಧ್ಯವಾದಷ್ಟು ಮಟ್ಟಿಗೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ, ಮತದಾನದ ಮುನ್ನಾದಿನವಾದ ಮಂಗಳವಾರ (ಮೇ 9) ಬಜರಂಗ ಭಜನೆಗೆ (Hanuman chalisa) ಮುಂದಾಗಿದೆ.

ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ʻಸಮಾಜದಲ್ಲಿ ದ್ವೇಷ ಬಿತ್ತುವ ಚಟುವಟಿಕೆ ನಡೆಸಿದರೆ ಬಜರಂಗ ದಳ, ಪಿಎಫ್‌ಐ ಮೊದಲಾದ ಸಂಘಟನೆಗಳನ್ನು ನಿಷೇಧಿಸುವುದೂ ಸೇರಿದಂತೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದುʼ ಎಂದು ಹೇಳಲಾಗಿತ್ತು. ಬಜರಂಗ ದಳ ನಿಷೇಧ ಪ್ರಸ್ತಾಪವನ್ನು ಕ್ಷಣ ಮಾತ್ರದಲ್ಲಿ ಬಿಜೆಪಿ ತನ್ನ ಅಸ್ತ್ರವಾಗಿಸಿಕೊಂಡಿದ್ದಲ್ಲದೆ, ರಾಜ್ಯಾದ್ಯಂತ ʻಹನುಮಾನ್‌ ಚಾಲೀಸಾʼ ಪಠಣದ ಮೂಲಕ ಹವಾ ಎಬ್ಬಿಸಿತ್ತು. ಇದೇ ಟ್ರೆಂಡ್‌ನ್ನು ಮತದಾನದ ಮುನ್ನಾ ದಿನವೂ ಬಿಜೆಪಿ ಮುಂದುವರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಮಂಗಳವಾರ ಹನುಮನ ದೇವಸ್ಥಾನಕ್ಕೆ ಭೇಟಿ ನೀಡಿ ಹನುಮಾನ್‌ ಚಾಲೀಸ್‌ ಪಠಣ ಮಾಡಿದ್ದಾರೆ.

ಹುಬ್ಬಳ್ಳಿಯ ವಿಜಯನಗರ ದೇವಳದಲ್ಲಿ ಸಿಎಂ ಪಠಣ

ಹುಬ್ಬಳ್ಳಿಯ ವಿಜಯನಗರ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್‌ ಚಾಲೀಸಾ ಪಠಿಸಿದ ಮುಖ್ಯಮಂತ್ರಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿದ್ದು, ಅಲ್ಲಿನ ವಿಜಯ ನಗರದ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿದರು. ಹನುಮಂತ ದೇವರ ಮುಂದೆ ಕುಳಿತು ಚಾಲಿಸಾ ಪಠಣ ಮಾಡಿದ ಬೊಮ್ಮಾಯಿ ಅವರಿಗೆ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಸೇರಿದಂತೆ ಸ್ಥಳೀಯ ಮುಖಂಡರು ಸಾಥ್‌ ನೀಡಿದರು.

ಮಹಾಲಕ್ಷ್ಮಿ ಲೇಔಟ್‌ನಲ್ಲಿ ಶೋಭಾ ಕರಂದ್ಲಾಜೆ

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ದೇವಸ್ಥಾನದಲ್ಲಿ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್‌ನ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್‌ ಚಾಲೀಸಾ ಪಠಣ ಮಾಡಿದರು. ಅವರ ಜತೆ ಸಚಿವ ಗೋಪಾಲಯ್ಯ, ಮಾಳವಿಕಾ ಅವಿನಾಶ್ ಮತ್ತು ಇತರ ಬಿಜೆಪಿ ಕಾರ್ಯಕರ್ತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿ ಆಧಾರದಲ್ಲಿ ಚುನಾವಣಾ ನಡೆಸುವುದು ಬಿಜೆಪಿಯ ಆಶಯವಾಗಿತ್ತು. ಅಭಿವೃದ್ಧಿಯ ಆಧಾರದಲ್ಲಿ ಚುನಾವಣೆಗೆ ಹೋಗೋದು ನಮ್ಮ ಉದ್ದೇಶವಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಅದೇ ಮಾತನ್ನು ಹೇಳಿದ್ದರು. ಡಬಲ್ ಎಂಜಿನ್ ಸರ್ಕಾರದ ಆಧಾರದಲ್ಲಿ ವೋಟು ಕೇಳಲು ಮುಂದಾಗಿದ್ದೆವು. ಆದರೆ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ವಿಚಾರ ಪ್ರಸ್ತಾಪ ಮಾಡಿ ಭಯದ ವಾತವರಣ ಸೃಷ್ಟಿ ಮಾಡಿತು. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿಯಾಗಿರುವ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಆಂಜನೇಯನಿಗೆ ಅಪಮಾನ ಮಾಡಿದರು. ಆಂಜನೇಯನ ಹುಟ್ಟಿನ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ನಾವು ಹನುಮಾನ್‌ ಚಾಲೀಸಾ ಪಠಣ ಆಂದೋಲನ ಮಾಡಿದೆವು. ಅದನ್ನು ಇವತ್ತೂ ನಡೆಸುತ್ತಿದ್ದೇವೆʼʼ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಮೈಸೂರಿನಲ್ಲಿ ಪ್ರಚಾರದ ಬದಲು ಹನುಮನ ಆರಾಧನೆ

ಮೈಸೂರಿನ ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ಅವರು ಗಿಲಕಿ ಹಿಡಿದು ದೇವಾಲಯದ ಹೊಸ್ತಿಲ ಮೇಲೆ ಹನುಮಾನ್‌ ಚಾಲೀಸಾ ಪಠಣ ಮಾಡಿದರು. ನೂರಾರು ಬಿಜೆಪಿ ಕಾರ್ಯಕರ್ತರು ಅವರಿಗೆ ಸಾಥ್‌ ನೀಡಿದ್ದಾರೆ.

ಅಗ್ರಹಾರದ ಪಾತಾಳ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಜನೆ ನಡೆಯುತ್ತಿದ್ದು, ರಾಮ, ಹನುಮನ ಭಕ್ತಿ ಗೀತೆಗಳನ್ನು ಕಾರ್ಯಕರ್ತರು ಹಾಡುತ್ತಿದ್ದಾರೆ.

ಹನುಮನ ದೇವಾಲಯಕ್ಕೆ ಭೇಟಿ ನೀಡಿದ ವಿಜಯೇಂದ್ರ

ಶಿಕಾರಿಪುರದ ಕೋಟೆ ರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿ.ವೈ ವಿಜಯೇಂದ್ರ

ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ಅವರು ಶಿವಮೊಗ್ಗದ ಕೋಟೆ ಸೀತಾ ರಾಮಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಪತ್ನಿ ಸಹಿತ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಅವರಿಗೆ ಬಿಜೆಪಿ ಕಾರ್ಯಕರ್ತರು ಸಾಥ್‌ ನೀಡಿದರು.

ಇದನ್ನೂ ಓದಿ : ಮೇ 9ಕ್ಕೆ ದೇಶದಾದ್ಯಂತ ಕಾಂಗ್ರೆಸ್ ವಿರುದ್ಧ ಬಜರಂಗಿಗಳ ಪ್ರತಿಭಟನೆ; ಹನುಮಾನ್ ಚಾಲೀಸಾ ಪಠಣ

Exit mobile version