ಹಾಸನ: ಹಾಸನ ವಿಧಾನಸಭಾ ಕ್ಷೇತ್ರ ಈ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಇದುವರೆಗೂ ಇದ್ದ ಜೆಡಿಎಸ್‌ನ ಆಂತರಿಕ ಕಲಹ, ಏನೂ ಆಗಿಲ್ಲ ಎಂಬಂತೆ ಅದರ ನಾಯಕರು ಈಗ ನಡೆದುಕೊಳ್ಳುತ್ತಿರುವ ರೀತಿ, ಬಿಜೆಪಿ ಅಭ್ಯರ್ಥಿ ಪ್ರೀತಮ್ ಗೌಡ ಅವರ ಹೊಸ ಹೊಸ ಪಟ್ಟುಗಳಿಂದಾಗಿ ಗಮನ ಸೆಳೆದಿದೆ. ಇಂಥ ಕ್ಷೇತ್ರದಲ್ಲಿ ಈಗ ದೇವರ ಹೆಸರಲ್ಲಿ ಮತ ಕೇಳಿದ, ಆಮಿಷ ಒಡ್ಡಿದ ಆರೋಪ ಕೇಳಿಬರುತ್ತಿದೆ. ಹೊಸದಾಗಿ ಆರೋಪಕ್ಕೆ ಗುರಿಯಾಗಿರುವವರು ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಪ್ರೀತಂ ಗೌಡ ಅವರು.
ಅವರು ದೇವರ ಹೆಸರಲ್ಲಿ ಮತ ಕೇಳಿದ್ದು, ದೇವರ ಮುಂದೆ ಮಂಗಳಾರತಿ ಮಾಡಿ ನನಗೆ ಮಾತು ಕೊಡಿ ಎಂದು ಕೇಳಿಕೊಂಡಿದ್ದರ ವಿಡಿಯೊ ವೈರಲ್ ಆಗಿದೆ. ಹಾಸನ ತಾಲ್ಲೂಕಿನ, ಸಾಲಗಾಮೆ ಹೋಬಳಿ, ಮಲ್ಲನಾಯಕನಹಳ್ಳಿಯಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ.
ಮಲ್ಲನಾಯಕನಹಳ್ಳಿಯಲ್ಲಿ ಜೆಡಿಎಸ್ ಪ್ರಚಾರ ನಡೆಯುತ್ತಿದ್ದ ವೇಳೆ ತೆರೆದ ವಾಹನದಲ್ಲಿ ಪ್ರೀತಂಗೌಡರ ಪಕ್ಕದಲ್ಲಿ ನಿಂತು ಗ್ರಾಮದ ಮುಖಂಡರೊಬ್ಬರು ಮಾತನಾಡಿದ್ದರು. ʻʻಗ್ರಾಮದ ದೇವಸ್ಥಾನ ಅಲ್ಲದೆ ಮುಂದೆ ನೀವು ಮಾಡಬೇಕಾದ ಕೆಲಸ ಬೇಜಾನ್ ಇದೆ. ನಮ್ಮ ಕೆಲಸ ನೀವು ಮಾಡ್ಕೊಡಿ. ನಮ್ಮವರೆಲ್ಲಾ ಸೇರಿ ನಿಮಗೆ ಮತ ಚಲಾಯಿಸುತ್ತೀವಿʼʼ ಎಂದು ಗ್ರಾಮದ ಮುಖಂಡರು ಹೇಳಿದರು.
ಈ ವೇಳೆ ಮಾತನಾಡಿದ ಶಾಸಕ ಪ್ರೀತಂಗೌಡಮ ʻʻಅಣ್ಣ ಇಲ್ಲಿ ಎಲ್ಲಾ ತಾಯಂದಿರೇ ಇರೋದು ಅದ್ಕೇ ಮುಕ್ತವಾಗಿ ಕೇಳ್ತಿದ್ದೀನಿ. ಊರಲ್ಲಿ ಎಷ್ಟು ಓಟು ಇದೆಯಣ್ಣ, ನಿಮ್ಮೂರಿನಲ್ಲಿ ಹೇಳಿ ಬೂತ್‌ನಲ್ಲಿ ಬೇಡʼʼ ಎಂದು ಹೇಳಿದರು.
ಆಗ ಯುವಕ ʻ150 ಓಟು ಇದೆʼ ಎಂದ
ಇದಕ್ಕೆ ಪ್ರತಿಕ್ರಿಯಿಸಿದ ಪ್ರೀತಂ ಗೌಡ, ʻʻ150 ವೋಟು ಇದೆ ಅಂದರೆ ಆಗೋದು 120, 130 ಅಲ್ವೇನಣ್ಣ. 120, 130ಕ್ಕೆ ಎಷ್ಟು ಓಟು ಹಾಕ್ತಿರಾ ಹೇಳಿ, ಒಂದು ಲೆಕ್ಕಾ ಇರಲಿ ನನಗೆ, ಎಷ್ಟು ಹೇಳಿ ಅಣ್ಣಾ? ಕಳೆದ ಚುನಾವಣೆಯಲ್ಲಿ ನನಗೆ 92 ಬಂದಿರೋದು. ನಿಮ್ಮ ಊರಿಂದನೇನಾ ಅಂತ ಗೊತ್ತಿಲ್ಲ, ಟೋಟಲ್ ಬೀಕನಹಳ್ಳಿ ಎಲ್ಲಾ ಸೇರಿ 92 ಬಂದಿರೋದು. ಈ ಬಾರಿ ನಿಮ್ಮ ಊರಿಂದ ಎಷ್ಟು ಓಟು ಹಾಕ್ತಿರಾ ಹೇಳಿ?ʼʼ ಎಂದು ಹೇಳಿದರು.
ಆಗ ಗ್ರಾಮಸ್ಥರು, 65-70 ಎಂದರು
ʻʻ65- 70 ಓಟು ಹಾಕುಸ್ತೀನಿ ಅಂತ ನಮ್ಮ ಹಿರಿಯರು, ನಮ್ಮ ತಾಯಂದಿರು ಎಲ್ಲಾ ಸೇರಿ ಹೇಳ್ತಿದ್ದಾರೆ. ದೇವಸ್ಥಾನದ ವಿಚಾರದಲ್ಲಿ ಯಾರೂ ಸುಳ್ಳು ಹೇಳಂಗಿಲ್ಲ. 70 ಜನ ಯಾರ‍್ಯಾರು ಮತ ಹಾಕುವವರು ಬಂದು ದೇವಸ್ಥಾನದ ಮುಂದೆ ಮಂಗಳಾರತಿ ಮಾಡ್ಸಿ ನೀವು ಗುದ್ದಲಿ ಪೂಜೆ ಮಾಡಿ ಕೆಲಸ ಪ್ರಾರಂಭ ಮಾಡಿಸಿ. ದೇವಸ್ಥಾನ ಮಾಡಿಕೋಡೊದು ನನ್ನ ಜವಾಬ್ದಾರಿ. ಆ ಎಪ್ಪತ್ತು ಜನನು ಬಂದು ಪೂಜೆ ಮಾಡ್ಸಿ ಪ್ರೀತಂ ಗೌಡರ ಜೊತೆ ಇರ್ತೀವಿ, ಓಟು ಹಾಕ್ಕೊಡ್ತೀವಿ ಅಂತ ಮಾತು ಕೊಡಿ. ಉಳಿದಿದ್ದು ಕೆಲಸ ನಾನು ಮಾಡ್ತಿನಿ ಆಗಬಹುದಾ?ʼʼ ಎಂದು ಪ್ರೀತಮ್ ಗೌಡ ಹೇಳಿದರು.
ʻʻಎಪ್ಪತ್ತಕ್ಕಿಂತ ಕಡಿಮೆ ಓಟು ಬಂದ್ರೆ ಚುನಾವಣೆ ಆದ್ಮೇಲೆ ಮಾತಾಡೋದು. ಯಾರು ಎಪ್ಪತ್ತು ಜನ ಅಂತ ಈಗ ಕರ್ಸಣ್ಣ, ಪೂಜೆ ಮಾಡ್ಸಿಬಿಟ್ಟು ನನಗೆ ಮಾಡಿಕೊಡ್ಲಿ. ಏಕೆಂದರೆ ನನಗೆ ನೆಂಟಸ್ಥನದ್ದು ಕಾಟ ಜಾಸ್ತಿ. ಊರಲ್ಲಿ ಇರ್ತಾರೆ, ಹಾಸನದಲ್ಲಿ ಇರ್ತರೆ ಚುನಾವಣೆ ಬಂದ ತಕ್ಷಣ ಇಲ್ಲಿ ಬಂದು ನೆಂಟಸ್ಥನ ಮಾಡ್ಕಂಡು ಇರ್ತಾರೆ. ನಮ್ಮ ಅಣ್ಣ ತಮ್ಮ, ಅವರು ನನಗೆ, ನೆಂಟರು, ಇವರು ನನಗೆ ನೆಂಟರು ಅಂತ ಅವರ ಕಡೆಗೆ ಮುಖ ಕೊಟ್ಟರೆ ನಾನ್ ಮಾಡಿದ್ ಕೆಲ್ಸಕ್ಕೆ ಕೂಲಿ ಯಾರು ಕೊಡೋದುʼʼ ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಎಸ್ ಸ್ವರೂಪ್ ಗೌಡ ಅವರ ಹೆಸರು ಹೇಳದೆ ಮಾತನಾಡಿದರು.
ʻʻಓಟು ಹಾಕೋ ಎಪ್ಪತ್ತು ಜನ ಸೇರುಸ್ಕಳಿ ಅಣ್ಣಾ.. ನಿಮ್ಮ ಕೈಮುಗಿದು ಕೇಳ್ಕತೀನಿ, ಎಪ್ಪತ್ತು ಜನಾನೂ ಮಂಗಳಾರತಿ ಮಾಡಿ ಎಪ್ಪತ್ತು ಜನನು ಪ್ರೀತಂಗೌಡಂಗೆ ಓಟು ಹಾಕ್ತೀವಿ ಅಂತ ತೀರ್ಮಾನ ಮಾಡಿ ನಾನು ಮಾಡಿಕೊಡ್ತೀನಿ. ನನ್ನ ಜವಾಬ್ದಾರಿ ಇದು. ಆಗಬಹುದಾ ಅಣ್ಣಾ.. ಆಗಬಹುದಾ ಅಕ್ಕʼʼ ಎಂದ ಪ್ರೀತಂ ಗೌಡ.
ಮಲ್ಲನಾಯಕನಹಳ್ಳಿಯ ದಿ. ಎಚ್.ಎಸ್. ಪ್ರಕಾಶ್ ಅವರ ಸಂಬಂಧಿಕರು ಹೆಚ್ಚಿರುವ ಊರು. ಗ್ರಾಮದಲ್ಲಿ ಪ್ರಚಾರ ಮಾಡುವ ವೇಳೆ ಸ್ವರೂಪ್ ಹೆಸರು ಹೇಳದೆ ಪರೋಕ್ಷವಾಗಿ ಅವರ ಸಂಬಂಧಿಕರು ಎನ್ನುವ ಕಾರಣಕ್ಕೆ ಮತ ಹಾಕಬೇಡಿ ಎಂದು ಪ್ರೀತಂ ಗೌಡ.
ಇದನ್ನೂ ಓದಿ : Karnataka Election : ಹಾಸನದ ಜನರಿಗೆ ಬುದ್ಧಿ ಇಲ್ಲ ಅಂದ್ರಾ ಪ್ರೀತಂ ಗೌಡ; ಜೆಡಿಎಸ್ ವೈರಲ್ ಮಾಡಿದ ವಿಡಿಯೊದಲ್ಲೇನಿದೆ?
karnataka-election: Hasana BJP candidate Preetam Gowda asks vote in the name of god