ಬೆಂಗಳೂರು: ಯಶವಂತಪುರ ಕ್ಷೇತ್ರದಿಂದ 2013, 2018 ಹಾಗೂ 2019 (ಬೈ ಎಲೆಕ್ಷನ್) ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಜವರಾಯಿಗೌಡ (Karnataka Election) ಅವರನ್ನು ಈ ಬಾರಿಯೂ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಎರಡು ಬಾರಿ ಎಸ್.ಟಿ.ಸೋಮಶೇಖರ್ ವಿರುದ್ಧ ಕಡಿಮೆ ಅಂತರದಲ್ಲಿ ಪರಾಜಿತರಾಗಿದ್ದ ಜವರಾಯಿಗೌಡ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಯಶವಂತಪುರದಲ್ಲಿ ಸೋಮವಾರ ಆಯೋಜಿಸಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಕೆಲವೊಂದು ಸಮಸ್ಯೆಗಳಿಂದ ಈ ಹಿಂದೆ ನಮಗೆ ಹಿನ್ನಡೆಯಾಗಿದೆ. ಹಾಗಾಗಿ ನಾವು ಸೋತಿದ್ದೇವೆ. ನಿಷ್ಠಾವಂತ ಕಾರ್ಯಕರ್ತರು ಇಲ್ಲಿ ಇದ್ದಾರೆ ಎಂದು ಹೇಳಿದರು.
ಯಶವಂತಪುರದಲ್ಲಿ 2013ರಲ್ಲಿ ನಮ್ಮ ಅಭ್ಯರ್ಥಿ 15 ಸಾವಿರ ಮತಗಳ ಅಂತರದಲ್ಲಿ ಸೋತರು. ಶೋಭಾ ಕರಂದ್ಲಾಜೆ ರಾಜಾಜಿನಗರದಲ್ಲಿ ಅಭ್ಯರ್ಥಿಯಾದರು. ಬಿಜೆಪಿ ಅಂದು 30 ಸಾವಿರ ಮತ ಪಡೆದಿದ್ದರೆ, ಜವರೇಗೌಡ ಶಾಸಕ ಆಗುತ್ತಿದ್ದರು. 2018ರಲ್ಲಿ ಮುಸಲ್ಮಾನ ಬಂಧುಗಳಿಂದ ದೋಷವಾಯ್ತು. ಅದಕ್ಕೆ ಕಾಂಗ್ರೆಸ್‌ನವರೇ ಕಾರಣ. ಬಿಜೆಪಿ ಬಿ ಟೀಂ ಅಂತ ಹೇಳಿ ದಾರಿ ತಪ್ಪಿಸಿದರು, ಇಡೀ ರಾಜ್ಯದಲ್ಲಿ ಅಪ ನಂಬಿಕೆ ಮೂಡಿಸಿದರು. ಹಾಗಾಗಿ ಕಡಿಮೆ ಅಂತರದಲ್ಲಿ ಸೋತರು ಎಂದರು.
ಇದನ್ನೂ ಓದಿ | Modi In Karnataka : ಇಂಧನ ದರ ಕಡಿಮೆ ಮಾಡುವುದೇ ಸರ್ಕಾರದ ಗುರಿ: ಪೆಟ್ರೋಲಿಯಂ ಸಚಿವ ಪುರಿ ಭಾಷಣ
ಉಪ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿ ಚುನಾವಣೆ ಮಾಡಿದರು. ಸೋಮಶೇಖರ್ ಅವರಿಗೆ ಕಾಂಗ್ರೆಸ್‌ನವರು ಮತ ಹಾಕಿದರು. ಆದರೆ, ಈ ಕ್ಷೇತ್ರ ಇಂದಿಗೂ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಇಡೀ ರಾಜ್ಯದಲ್ಲಿ ಜನತಾದಳದ ಅಲೆ ಎದ್ದಿದೆ. ಜೆಡಿಎಸ್ ಹತ್ತು ಸೀಟ್ ಗೆಲ್ಲಲ್ಲ ಎಂದು ಕೆಲವರು ಮಾತನಾಡುತ್ತಾರೆ. ನಾವು 93 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. 67 ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ಮುಗಿಸಿಕೊಂಡು ಬಂದಿದ್ದೇನೆ. ಉತ್ತರ ಕರ್ನಾಟಕದಲ್ಲಿ ಎಂಟು ಜಿಲ್ಲೆಗಳಿಗೆ ಹೋಗಿ ಬಂದಿದ್ದೇನೆ. ದಿನಕ್ಕೆ 18 ಗಂಟೆ ಕೆಲಸ ಮಾಡಿದ್ದೇನೆ ಎಂದರು.
ಜವರಾಯಿಗೌಡ ಅವರ ಕುಟುಂಬಸ್ಥರು ಯಾವುದೇ ಕಾರಣಕ್ಕೂ ಚುನಾವಣೆ ಬೇಡ ಎಂದು ಹೇಳಿದ್ದಾರಂತೆ. ಆದರೆ, ಇದನ್ನು ನಾನು ಒಪ್ಪಲ್ಲ. ನೀನು ಈ ಬಾರಿ ನಿಂತರೆ ನೀನೇ ಗೆಲ್ಲುವೆ, ನಾಳೆಯಿಂದ ಕೆಲಸ ಶುರು ಮಾಡು ಎಂದ ಎಚ್‌ಡಿಕೆ ಹೇಳಿದಾಗ ಜವರಾಯಿಗೌಡ ಕಣ್ಣೀರು ಹಾಕಿದ್ದು ಕಂಡುಬಂತು. ಇದೇ ವೇಳೆ ಇಬ್ಬರು ಕಾರ್ಯಕರ್ತರು ಮುಂದೆ ಬಂದು ಒಬ್ಬರು 10 ಲಕ್ಷ ರೂಪಾಯಿ, ಮತ್ತೊಬ್ಬರು 5 ಲಕ್ಷ ರೂಪಾಯಿ ದೇಣಿಗೆ ಘೋಷಣೆ ಮಾಡಿದರು.
ನೋಡಪ್ಪ ಇದ್ದಾಗ ಎತ್ತಿ ಎತ್ತಿ ಕೊಟ್ಟೆ. ಈಗ ನೀನು ಬೇಡುವ ರೀತಿ ಆಗಿದೆ. ಮಾಧ್ಯಮಗಳು ಇರವುದರಿಂದ ಹೆಚ್ಚು ಮಾತನಾಡಲ್ಲ. ಯಶವಂತಪುರದಲ್ಲಿ ತರಕಾರಿ ಮಾರುವವರು ಸಹ ನಿನಗೆ ಸಹಾಯ ಮಾಡುತ್ತಾರೆ. ಬರೀ ಒಕ್ಕಲಿಗರಷ್ಟೇ ಅಲ್ಲ, ಎಲ್ಲ ಸಮುದಾಯದ ಜನ ವೋಟ್ ಹಾಕುತ್ತಾರೆ. ಈ ಬಾರಿ ಯಶವಂತಪುರದಲ್ಲಿ ಜೆಡಿಎಸ್ ಗೆಲ್ಲಲೇಬೇಕು ಎಂದು ಹೇಳಿದರು.
ಜವರಾಯಿಗೌಡರಿಗೆ ಚುನಾವಣೆ ಹೇಗೆ ನಡೆಸಬೇಕು ಎಂದು ಗೊತ್ತಾಗಿಲ್ಲ. ಹಾಗಾಗಿ ಒಂದಿಷ್ಟು ಹಿನ್ನಡೆ ಆಯಿತು. ಕಾರ್ಯಕರ್ತರಿಂದ ಯಾವ ಸಮಸ್ಯೆಯೂ ಆಗಿಲ್ಲ. ಮೂರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಆರ್ಥಿಕವಾಗಿ ಸುಸ್ತಾಗಿದ್ದಾರೆ. ಮೂರು ಸಲ ಸೋತರೂ ಜನ ನಿಮ್ಮ ಕೈ ಬಿಟ್ಟಿಲ್ಲ
ಅನೇಕರು ನಿಮ್ಮ ಬಗ್ಗೆ ಅನುಕಂಪ ಇದೆ ಎಂದು ಹೇಳಿದ್ದರು. ದುಡ್ಡು ಖರ್ಚು ಮಾಡಿದರೆ ಚುನಾವಣೆ ಗೆಲ್ಲುವುದಿಲ್ಲ. 2002ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಚಂದ್ರಶೇಖರ ಮೂರ್ತಿಯವರು ಅಕಾಲಿಕ ಮರಣ ಹೊಂದಿದರು. ಉಪ ಚುನಾವಣೆ ನಡೆಸಬೇಕಾಗಿ ಬಂತು. ಆ ಸಮಯದಲ್ಲಿ ನಾನು ರೇವಣ್ಣ, ದೇವೇಗೌಡರು ಎಲ್ಲರೂ ಸೋತಿದ್ದೆವು. ಸಿದ್ದರಾಮಯ್ಯ ಸಹ ನಮ್ಮ ಜತೆ ಇದ್ದರು, ಅವರೂ ಸೋತಿದ್ದರು ಎಂದರು.
ಆಗ ನೀವು ಚುನಾವಣೆಗೆ ನಿಲ್ಲಿ ಎಂದು ದೇವೇಗೌಡರಿಗೆ ಮನವಿ ಮಾಡಿದೆ. ನನ್ನ ಮೇಲೂ ಒತ್ತಡ ಹಾಕಿದ್ದರು. ಆಗ ನಮ್ಮ ಬಳಿ ಹಣ ಇರಲಿಲ್ಲ, ಜನರ ಪ್ರೀತಿ ವಿಶ್ವಾಸ ಮಾತ್ರ ಇತ್ತು. ಆ ಚುನಾವಣೆ ನಡೆಸುವಾಗ ಒಂದು ತಿಂಗಳು ನಾನು ನಿದ್ದೆ ಮಾಡಿಲ್ಲ. ಅನೇಕರು ದೇಣಿಗೆ ಕೊಟ್ಟರು. ಅಂದಿನ ಕಾಂಗ್ರೆಸ್ ಮುಖಂಡರ ವಿರುದ್ಧದ ಚುನಾವಣೆ ಸಿನಿಮಾ ರೀತಿಯಂತಿತ್ತು. ಕಳ್ಳ ಮತದಾನ ಮಾಡಿರುವುದು ಕೂಡ ನೆನಪಿದೆ. ಈಗ ರಾಜ್ಯದಲ್ಲಿ ಜನತಾದಳದ ಅಲೆ ಎದ್ದಿದೆ ಎಂದು ಹೇಳಿದರು.