Site icon Vistara News

Karnataka Election : ಡಿಕೆ ಶಿವಕುಮಾರ್‌ ಬಳಿಕ ದೇವೇಗೌಡರಿಗೆ ಹೆಲಿಕಾಪ್ಟರ್‌ ಕಿರಿಕಿರಿ, ತುರ್ತು ಭೂಸ್ಪರ್ಶ

former prime minister HD Devegowda to participate in new parliament inauguration

Helicopter in which HD Devegowda travelling takes emergency landing

ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರು ವಿಧಾನಸಭಾ ಚುನಾವಣಾ (Karnataka Election 2023) ಪ್ರಚಾರಕ್ಕಾಗಿ ಸಂಚರಿಸುತ್ತಿದ್ದ ಹೆಲಿಕಾಪ್ಟರ್‌ ಹೊನ್ನಾವರದ ರಾಮತೀರ್ಥ ಗುಡ್ಡದ ಹೆಲಿಪ್ಯಾಡ್‌ನಲ್ಲಿ ಇಳಿಯುತ್ತಿದ್ದಾಗಲೇ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯ ಬೆನ್ನಿಗೇ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು (HD Devegowda) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಅದು ತುರ್ತು ಭೂಸ್ಪರ್ಶ ಮಾಡಿದೆ.

ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮಾಜಿ ಪ್ರಧಾನಿ ದೇವೇಗೌಡರು ಗುರುವಾರ ಹಾಸನ ಜಿಲ್ಲೆಯಲ್ಲಿ ಬಿರುಸಿನ ಸಂಚಾರ ನಡೆಸಿದರು. ಒಂದು ದಿನದಲ್ಲೇ ಎಲ್ಲ ಕ್ಷೇತ್ರಗಳನ್ನು ಸುತ್ತುವ ತರಾತುರಿಯಲ್ಲಿ ಅವರು ಹೆಲಿಕಾಪ್ಟರ್‌ನಲ್ಲಿ ಓಡಾಡಿದರು.

ಈ ನಡುವೆ, ಸಕಲೇಶಪುರದಿಂದ ಅರಕಲಗೂಡಿಗೆ ಹೋಗುತ್ತಿದ್ದಾಗ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಅದನ್ನು ಕೂಡಲೇ ಇಳಿಸಲಾಯಿತು.

ಸಕಲೇಶಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ಕುಮಾರಸ್ವಾಮಿ ಪರ ಮತಯಾಚಿಸಿದ ಬಳಿಕ ಎಚ್.ಡಿ.ದೇವೇಗೌಡರು ಹಾಗೂ ಸಿ.ಎಂ.ಇಬ್ರಾಹಿಂ ಹೆಲಿಕಾಪ್ಟರ್‌ನಲ್ಲಿ ಅರಕಲಗೂಡಿಗೆ ಹೊರಟಿದ್ದರು. ಹೆಲಿಪ್ಯಾಡ್‌ನಿಂದ ಮೇಲೇರುತ್ತಿದ್ದಂತೆಯೇ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಕೂಡಲೇ ಪೈಲಟ್‌ ಹೆಲಿಕಾಪ್ಟರನ್ನು ಕೆಳಗೆ ಇಳಿಸಿದರು.

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣ ತಾಲೂಕು ಕ್ರೀಡಾಂಗಣದಿಂದ ಹೊರಟಿದ್ದ ಹೆಲಿಕಾಪ್ಟರನ್ನು ಮತ್ತೆ ಅದೇ ಹೆಲಿಪ್ಯಾಡ್‌ ಕಡೆಗೆ ತಂದು ಸ್ವಲ್ಪ ದೂರದಲ್ಲಿ ನಿಲ್ಲಿಸಲಾಯಿತು. ಬಳಿಕ ತಾಂತ್ರಿಕ ಸಮಸ್ಯೆಯನ್ನು ಪರಿಶೀಲಿಸಿ ಸರಿಪಡಿಸಿದ ಬಳಿಕ ಮರಳಿ ಹೊರಡಿಸಲಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಸಿ.ಎಂ.ಇಬ್ರಾಹಿಂ ಅವರನ್ನು ಹೊತ್ತು ಹೆಲಿಕಾಪ್ಟರ್ ಮತ್ತೆ ಅರಕಲಗೂಡಿಗೆ ತೆರಳಿತು.

ಹೊನ್ನಾವರದ ರಾಮತೀರ್ಥ ಗುಡ್ಡದಲ್ಲಿ ಏನಾಯಿತು?‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಗುರುವಾರ ಮಧ್ಯಾಹ್ನ ಚುನಾವಣಾ ಪ್ರಚಾರಕ್ಕಾಗಿ ಉತ್ತರ ಕನ್ನಡಕ್ಕೆ ಆಗಮಿಸಿದ್ದರು. ಕುಮಟಾ-ಅಂಕೋಲ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿರುವ ನಿವೇದಿತ್‌ ಆಳ್ವ ಅವರ ಪರವಾಗಿ ಅವರು ಪ್ರಚಾರ ನಡೆಸುವವರಿದ್ದರು. ಈ ನಡುವೆ, ಅವರ ಹೆಲಿಕಾಪ್ಟರ್‌ ಇಳಿದ ಹೊನ್ನಾವರ ರಾಮತೀರ್ಥ ಗುಡ್ಡದಲ್ಲಿ ಬೆಂಕಿ ಅನಾಹುತ ನಡೆಯಿತು

ಹೆಲಿಕಾಪ್ಟರ್ ಸಿಗ್ನಲ್‌ಗಾಗಿ ಹಾಕಿದ್ದ ಸ್ಮೋಕ್ ಕ್ಯಾಂಡಲ್‌ನಿಂದ ಕಿಡಿ ಹಾರಿ ಒಣಗಿದ್ದ ಹುಲ್ಲಿಗೆ ಬೆಂಕಿ ಹಿಡಿಯಿತು. ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದ ಸ್ವಲ್ಪ ದೂರದಲ್ಲೇ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಸ್ಥಳದಲ್ಲೇ ಇದ್ದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಿಯತ್ರಿಸಿದರು.

ಡಿ.ಕೆ. ಶಿವಕುಮಾರ್‌ ಸಂಚರಿಸುತ್ತಿದ್ದ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಮಾಡುತ್ತಿದ್ದಾಗ ಕಾಣಿಸಿದ ಬೆಂಕಿಯನ್ನು ನಂದಿಸುತ್ತಿರುವುದು

ಹೊನ್ನಾವರದ ಸೇಂಟ್ ಥಾಮಸ್ ಶಾಲಾ ಆವರಣದಲ್ಲಿ ನಡೆಯಲಿರುವ ಪ್ರಚಾರ ಸಭೆಗಾಗಿ ಶಿವಕುಮಾರ್‌ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು.

ಎರಡು ದಿನಗಳ ಹಿಂದೆ ರಣಹದ್ದು ಬಡಿದಿತ್ತು

ಎರಡು ದಿನಗಳ ಹಿಂದೆ ಡಿ.ಕೆ. ಶಿವಕುಮಾರ್‌ ಅವರು ಬೆಂಗಳೂರಿನಿಂದ ಮುಳಬಾಗಿಲಿಗೆ ಹೋಗುತ್ತಿದ್ದ ಹೆಲಿಕಾಪ್ಟರ್‌ಗೆ ಮಾರ್ಗ ಮಧ್ಯೆ ರಣಹದ್ದೊಂದು ಬಡಿದು ವಿಂಡ್‌ ಶೀಲ್ಡ್‌ ಒಡೆದೇ ಹೋಗಿತ್ತು. ಪೈಲಟ್‌ ತಕ್ಷಣವೇ ಸಮಯಪ್ರಜ್ಞೆಯಿಂದ ಕೆಲಸ ನಿರ್ವಹಿಸಿ ಹೆಲಿಕಾಪ್ಟರನ್ನು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದರು. ಇದರಿಂದ ಸಂಭಾವ್ಯ ದೊಡ್ಡ ಅವಘಡವೊಂದು ತಪ್ಪಿತ್ತು. ಅದಾದ ಬಳಿಕ ಅವರು ತುಮಕೂರಿನ ನೊಣವಿನಕೆರೆಯ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದ್ದರು

ಇದನ್ನೂ ಓದಿ : Karnataka Election: ಅರಸೀಕೆರೆಯಲ್ಲಿ ಆ ವ್ಯಕ್ತಿಯ ಅಂತ್ಯ ಆಗಲೇಬೇಕು: ಶಿವಲಿಂಗೇಗೌಡ ವಿರುದ್ಧ ದೇವೇಗೌಡ ಕಿಡಿ

Exit mobile version