Site icon Vistara News

Karnataka Election : ಸಿದ್ದು, ಡಿಕೆಶಿ ಟಿಪ್ಪು ಸುಲ್ತಾನ್‌ ವಂಶಕ್ಕೆ ಸೇರಿದವರು ಎಂದು ದೂಷಿಸಿದ ಅಸ್ಸಾಂ ಸಿಎಂ

Himanth biswa sharma alleges DKS, siddaramaiah are from tippu family

Himanth biswa sharma alleges DKS, siddaramaiah are from tippu family

ಮಡಿಕೇರಿ: ಕಾಂಗ್ರೆಸ್‌ ನಾಯಕರ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಟಿಪ್ಪು ಸುಲ್ತಾನ್‌ ವಂಶಕ್ಕೆ ಸೇರಿದವರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮ (Himant biswa Sharma) ಅವರು ದೂಷಿಸಿದ್ದಾರೆ. ಕೊಡಗಿನ ಗೋಣಿಕೊಪ್ಪಲಿನಲ್ಲಿ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿ ನಡೆದ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್‌ ಪರವಾಗಿ ನಿಂತಿರುವ ಈ ನಾಯಕರು ಟಿಪ್ಪು ಸುಲ್ತಾನ್‌ ವಂಶಸ್ಥರು ಎಂದರು.

ಟಿಪ್ಪು ಸುಲ್ತಾನ್‌ನ ದುಷ್ಟತನದ ಸಂಕಷ್ಟವನ್ನು ಕೊಡಗಿನ ಜನ ಅನುಭವಿಸಿದ್ದಾರೆ. ಆದರೆ, ಅವನನ್ನು ಹಿಮ್ಮೆಟ್ಟಿಸುವ ಶೌರ್ಯವನ್ನು ಮೆರೆದಿದ್ದಾರೆ ಎಂದು ಹಿಮಂತ್‌ ಬಿಸ್ವಾ ಶರ್ಮ ಹೇಳಿದರು. ಅಸ್ಸಾಂನಲ್ಲಿ ಹೀಗೇ ಆಗಿತ್ತು. ಮೊಘಲರು 17 ಬಾರಿ ಅಸ್ಸಾಂ ಮೇಲೆ ದಾಳಿ ಮಾಡಿದರು. ಆದರೆ, ಅಲ್ಲಿನ ಜನ ಶೌರ್ಯದಿಂದ ಅವರನ್ನು ಎದುರಿಸಿ ಹಿಮ್ಮೆಟ್ಟಿಸಿದರು. ಕೊಡಗಿನ ಜನರು ಕೂಡಾ ಟಿಪ್ಪು ಸುಲ್ತಾನ್‌ನನ್ನು 20 ಭಾರಿ ಹಿಮ್ಮೆಟ್ಟಿಸಿದ್ದಾರೆ ಎಂದು ಕೇಳಿ ತಿಳಿದೆ. ಈ ಹೋರಾಟದಲ್ಲಿ 80 ಸಾವಿರಕ್ಕೂ ಅಧಿಕ ಮಂದಿ ಕೊಡವರ ಬಲಿದಾನ ನಡೆದಿದೆ ಎಂದು ಹೇಳಿದರು.

ಟಿಪ್ಪು ಜಯಂತಿ ಆಚರಿಸಲು ಮುಂದಾದ ಕಾಂಗ್ರೆಸ್‌ನವರು ಬಲಿದಾನ ಮಾಡಿದ 80 ಸಾವಿರ ಜನರ ಕುಟುಂಬಗಳಿಗೆ ಏನು ಉತ್ತರ ಕೊಡುತ್ತೀರಿ ಎಂದು ಹಿಮಂತ್‌ ಬಿಸ್ವಾ ಶರ್ಮ ಕೇಳಿದರು.

ನಿಮಗೆ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಬೇಕು ಅಂತಿದ್ದರೆ ಪಾಕಿಸ್ತಾನಕ್ಕೆ ಹೋಗಿ ಆಚರಿಸಿ, ಇಲ್ಲವೇ ಬಾಂಗ್ಲಾದೇಶಕ್ಕೆ ಹೋಗಿ ಆಚರಿಸಿ ಎಂದು ಹಿಮಂತ್‌ ಬಿಸ್ವಾ ಹೇಳಿದರು.

ಕಾಂಗ್ರೆಸ್‌ ಮತ್ತು ಪಿಎಫ್‌ಐ ನಡುವೆ ಸಂಬಂಧವಿದೆ ಎಂದು ಆರೋಪಿಸಿ ಅವರು, ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಆಗಲಿದೆ. ಅದೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯವು ಪಿಎಫ್‌ಐ ಸುರಕ್ಷಿತ ತಾಣವಾಗಲಿದೆ. ಅದರ ದುಷ್ಕೃತ್ಯಗಳ ಕಣಿವೆ ಆಗಲಿದೆ ಎಂದು ಅವರು ಹೇಳಿದರು.

ದಿ ಕೇರಳ ಸ್ಟೋರಿ ಪ್ರಸ್ತಾಪ ಮಾಡಿದ ಹಿಮಂತ್‌ ಬಿಸ್ವಾ

ಕೇರಳದ ಮಹಿಳೆಯರನ್ನು ಆಮಿಷ ಒಡ್ಡಿ ಮತಾಂತರ ಮಾಡಿ ಅವರನ್ನು ಐಸಿಸ್‌ ಸಂಘಟನೆ ಸೇರಿಸಿದ ಭಯಾನಕ ಕಥೆಯನ್ನು ಹೊಂದಿರುವ ʻದಿ ಕೇರಳ ಸ್ಟೋರಿʼ ಸಿನಿಮಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಪ್ರಸ್ತಾಪಿಸಿದ ಬೆನ್ನಿಗೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮ ಅವರು ಕೂಡಾ ಈ ವಿಚಾರವನ್ನು ಎತ್ತಿದ್ದಾರೆ.

ʻʻಕೇರಳ ಸ್ಟೋರಿ ಎನ್ನುವ ಹೊಸ ಸಿನಿಮಾ ಬಂದಿದೆ. ಇದು ಮತಾಂತರ, ಧಾರ್ಮಿಕ ಮೂಲಭೂತವಾದ ಹಲವು ಕಥೆಗಳನ್ನು ಹೇಳುತ್ತದೆ. ಈ ಹಿಂದೆ ಬಿಬಿಸಿ ಪ್ರಧಾನಿ ಮೋದಿ ಅವರ ವಿರುದ್ಧ ಸುಳ್ಳು ಆಪಾದನೆಗಳ ಡಾಕ್ಯುಮೆಂಟರಿ ಮಾಡಿದಾಗ ಕಾಂಗ್ರೆಸ್‌ ಅದನ್ನು ಸಮರ್ಥಿಸಿತ್ತು. ಆದರೆ, ಈಗ ಕೇರಳ ಸ್ಟೋರಿಯನ್ನು ಬ್ಯಾನ್‌ ಮಾಡಬೇಕು ಎಂದು ಆಗ್ರಹಿಸುತ್ತಿದೆʼʼ ಎಂದು ಹಿಮಂತ್‌ ಬಿಸ್ವಾ ಶರ್ಮ ಅವರು ಹೇಳಿದರು.

ಬಜರಂಗ ದಳವನ್ನು ನಿಷೇಧಿಸುವ ಕಾಂಗ್ರೆಸ್‌ ಪ್ರಸ್ತಾಪದ ವಿರುದ್ಧ ಕೆಂಡ ಕಾರಿದ ಹಿಮಂತ್‌ ಬಿಸ್ವಾ ಶರ್ಮಾ ಅವರು, ʻಬಜರಂಗದಳದವರೇನು ಬಾಂಬ್‌ ಸ್ಫೋಟ ನಡೆಸಿದ್ದಾರಾ? ಇಲ್ಲ ಅಲ್ವಾ? ಹಾಗಿರುವಾಗ ಹೇಗೆ ಅದನ್ನು ನಿಷೇಧ ಮಾಡುತ್ತೀರಿ? ನಿಮ್ಮ ಮತ್ತು ಪಿಎಫ್‌ಐ ನಡುವೆ ನಡೆಯುತ್ತಿರುವ ಸ್ನೇಹಾಚಾರ ಏನು? ನೀವ್ಯಾಕೆ ಪಿಎಫ್‌ಐ ವಕ್ತಾರರಂತೆ ಮಾತನಾಡುತ್ತೀರಿʼʼ ಎಂದು ಪ್ರಶ್ನಿಸಿದರು. ಪಿಎಫ್‍ಐ ಒತ್ತಡದಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‍ನ ಪ್ರಣಾಳಿಕೆ ಸಿದ್ಧಗೊಂಡಿದೆ ಶರ್ಮಾ ಆರೋಪಿಸಿದರು.

ಇದನ್ನೂ ಓದಿ : Tipu Movie: 800 ದೇಗುಲ ನಾಶ, 40 ಲಕ್ಷ ಹಿಂದುಗಳ ಮತಾಂತರ; ಬರಲಿದೆ ಟಿಪ್ಪು ಸುಲ್ತಾನ್‌ ಕುರಿತ ಸಿನಿಮಾ

Exit mobile version