ಚಿಕ್ಕಬಳ್ಳಾಪುರ/ಕೋಲಾರ: ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಅರ್ಜಿ ಪರಿಶೀಲನಾ ಸಭೆಯಲ್ಲಿ ಭಾರಿ ಹೈಡ್ರಾಮ ನಡೆದಿದೆ. ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು, ತಮ್ಮ ನಾಯಕನಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಶಿಡ್ಲಘಟ್ಟ ಕ್ಷೇತ್ರದ ಹಾಲಿ ಶಾಸಕ ವಿ.ಮುನಿಯಪ್ಪ ಹಾಗೂ ರಾಜೀವ್ ಗೌಡ ಬೆಂಬಲಿಗರು ಕೈ ಕೈ ಮಿಲಾಯಿಸಿ ಹೊಡೆದಾಡಿದ ಪ್ರಸಂಗ ನಡೆದಿದೆ.
ತಾಲೂಕು ನಂದಿ ಕ್ರಾಸ್ ಬಳಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಶುಕ್ರವಾರ ಚುನಾವಣೆ ಉಸ್ತುವಾರಿ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಜಿಲ್ಲೆಯ 5 ಕ್ಷೇತ್ರಗಳ ಅಭ್ಯರ್ಥಿಗಳ ಅರ್ಜಿ ಪರಿಶೀಲನಾ ಸಭೆ ಏರ್ಪಡಿಸಲಾಗಿತ್ತು. ಹೀಗಾಗಿ ಕಾಂಗ್ರೆಸ್ ಆಯ್ಕೆ ಸಮಿತಿ ಮುಂದೆ ಅಭ್ಯರ್ಥಿಗಳ ಬೆಂಬಲಿಗರು ಪರೇಡ್ ನಡೆಸಿ ಬಲ ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಶಿಡ್ಲಘಟ್ಟ ಕ್ಷೇತ್ರದ ಹಾಲಿ ಶಾಸಕ ವಿ.ಮುನಿಯಪ್ಪ ಮತ್ತು ಆಕಾಂಕ್ಷಿ ರಾಜೀವ್ ಗೌಡ ಬೆಂಬಲಿಗರು ತಮ್ಮ ನಾಯಕನಿಗೆ ಟಿಕೆಟ್ ನೀಡಬೇಕು ಎಂದು ಘೋಷಣೆ ಕೂಗಿದಾಗ, ಎರಡು ಗುಂಪುಗಳ ನಡುವೆ ಗಲಾಟೆ ನಡೆಯಿತು.
ಕೋಲಾರದಲ್ಲಿ ಎರಡು ಬಣಗಳ ಬಲ ಪ್ರದರ್ಶನ
ಕೋಲಾರ ನಗರದ ಕಾಂಗ್ರೆಸ್ ಕಚೇರಿಗೆ ಬಂದ ಸ್ಕ್ರೀನಿಂಗ್ ಕಮಿಟಿ ಮುಂದೆ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಮತ್ತು ಶಾಸಕ ಕೆ.ಆರ್.ರಮೇಶ್ ಕುಮಾರ್ ಬಣಗಳ ಬಲ ಪ್ರದರ್ಶನ ನಡೆದಿದೆ. ಕೋಲಾರದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಒಂದು ಗುಂಪು ಘೋಷಣೆ ಕೂಗಿದರೆ, ಮತ್ತೊಂದು ಗುಂಪು ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿದೆ. ಎರಡು ಬಣಗಳ ತಿಕ್ಕಾಟ ನೋಡಿ ಸ್ಕ್ರೀನಿಂಗ್ ಕಮಿಟಿ ಸದಸ್ಯರು ಸುಸ್ತಾದರು. ಒಂದು ಬಣದವರು ಕೆ.ಎಚ್.ಮುನಿಯಪ್ಪ ಮತ್ತು ಮತ್ತೊಂದು ಗುಂಪಿನವರು ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು. ಸಭೆಯಲ್ಲಿ ಸ್ಕ್ರೀನಿಂಗ್ ಕಮಿಟಿ ಸದಸ್ಯರಾದ ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ ಮತ್ತಿತರರು ಉಪಸ್ಥಿತರಿದ್ದರು.
ನಂತರ ವೀರಪ್ಪ ಮೊಯ್ಲಿ ಮಾತನಾಡಿ, ಸಿದ್ದರಾಮಯ್ಯ ಅವರೊಂದಿಗೆ ಬೇರೆಯವರ ಹೆಸರುಗಳು ಪ್ರಸ್ತಾಪವಾಗಿವೆ. ನಾವು ಸಮಾಲೋಚನೆ ಮಾಡಿದ್ದೇವೆ, ನಿರ್ಣಯ ಕೊಡುವ ಅಧಿಕಾರ ನಮಗಿಲ್ಲ. ಸಮಾಲೋಚನೆ ನಡೆಸಿ ಅದನ್ನು ಕೇಂದ್ರ ನಾಯಕರ ಮುಂದೆ ಇಡಲಾಗುತ್ತದೆ. ಇಲ್ಲಿ ಪರ, ವಿರೋಧದ ಪ್ರಶ್ನೆ ಇಲ್ಲ ಎಂದು ಹೇಳಿದರು.
ಎಲ್ಲ ವರ್ಗದವರ ಜತೆಗೂ ಸಮಾಲೋಚನೆ ಮಾಡಿದ್ದೇವೆ. ಒಬ್ಬರಿಂದ ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಡಿ ಎಂದು ಹೈಕಮಾಂಡ್ ನಿರ್ದೇಶನವಿದೆ. ಇದಾದ ನಂತರ ಪ್ರದೇಶ ಚುನಾವಣಾ ಸಮಿತಿ ಚರ್ಚೆ ಮಾಡಲಿದೆ. ನಂತರ ಸ್ಕ್ರೀನಿಂಗ್ ಕಮಿಟಿ, ನಂತರ ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಚರ್ಚೆಯಾಗಲಿದೆ. ಹಲವು ಹಂತದಲ್ಲಿ ಚರ್ಚೆಯಾದ ಬಳಿಕ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಅಧಿವೇಶನ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ ತಡವಾಗಿದೆ, ಕೆಪಿಸಿಸಿ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ | Amit Shah | ಜನರಿಗೆ ನ್ಯಾಯ ಕೊಡದ ಜೆಡಿಎಸ್-ಕಾಂಗ್ರೆಸ್: ರಾಜ್ಯದಲ್ಲಿ ಬಿಜೆಪಿ ಗೆಲುವು ಖಚಿತ ಎಂದ ಸಿಎಂ ಬಸವರಾಜ ಬೊಮ್ಮಾಯಿ