ರಾಯಚೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನ ವರುಣ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಿದ ಕುರಿತು ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ ಕುರಿತು ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಬೆನ್ನಲ್ಲೇ, “ನಾನು ಶಿವರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದಾನೆ, ಎಂದಿಗೂ ಅಭಿಮಾನಿಯೇ” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
“ನಾನು ಯಾರ ವಿರೋಧಿಯೂ ಅಲ್ಲ. ವರುಣ ಕ್ಷೇತ್ರದಲ್ಲಿ ಸೋಮಣ್ಣ ಅವರು ಸ್ಪರ್ಧಿಸುತ್ತಿರುವುದೇ ನನಗೆ ಗೊತ್ತಿರಲಿಲ್ಲ. ಬಿಜೆಪಿಯವರು ಕರೆದರೂ ನಾನು ವರುಣ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೆ” ಎಂದು ಶಿವಣ್ಣ ಹೇಳಿದ ಬಳಿಕ ಪ್ರತಾಪ್ ಸಿಂಹ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಶಿವಣ್ಣ ಅವರು ಏನು ಮಾತನಾಡಿದ್ದಾರೆ ಎಂಬುದನ್ನು ಕೇಳಿದ್ದೇನೆ. ಪುನೀತ್ ಹೆಸರಿನಲ್ಲಿ ಸೋಮಣ್ಣ ಆಸ್ಪತ್ರೆ ಕಟ್ಟಿದರು. ಆ ಬಗ್ಗೆ ರಾಘಣ್ಣ ಶ್ಲಾಘಿಸಿದರು. ಆದರೆ, ಶಿವಣ್ಣ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಬಂದಿದ್ದಾರೆ ಎಂದು ಪೋಸ್ಟ್ ಹಾಕಿದ್ದೆ. ಇದಕ್ಕೆ ಶಿವಣ್ಣ ಪ್ರತಿಕ್ರಿಯಿಸಿದ್ದು, ಒಂದು ವೇಳೆ ಬಿಜೆಪಿಯವರು ಕರೆದರೂ ವರುಣದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ” ಎಂದು ಪ್ರತಾಪ್ ಸಿಂಹ ಹೇಳಿದರು.
ಶಿವರಾಜ್ ಕುಮಾರ್ ಪ್ರತಿಕ್ರಿಯೆ
“ನಾನು ಶಿವಣ್ಣನ ಅಭಿಮಾನಿ. ಮನ ಮೆಚ್ಚಿದ ಹುಡುಗಿ, ರಥ ಸಪ್ತಮಿ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಶಿವಣ್ಣ ಸಿಕ್ಕಾಗೆಲ್ಲ ನಾನು ನಮಸ್ಕಾರ ಮಾಡುತ್ತೇನೆ. ಅವರ ಇಡೀ ಕುಟುಂಬವನ್ನು ನಾವು ರಾಜಕೀಯದ ಹೊರತಾಗಿ ನೋಡುತ್ತೇವೆ. ನಮಗೆ ರಾಜಕುಮಾರ್ ಕುಟುಂಬದ ಬಗ್ಗೆ ಅಪಾರವಾದ ಗೌರವವಿದೆ. ನಾವು ರಾಜಕೀಯದ ಹೊರತಾಗಿ ನಮ್ಮ ರಾಜ್ಯದ ಅಸ್ಮಿತೆಯ ಮಟ್ಟದಲ್ಲಿ ಅಣ್ಣಾವ್ರ ಕುಟುಂಬವನ್ನು ನೋಡುತ್ತೇವೆ. ಅಣ್ಣಾವ್ರ ಕುಟುಂಬ ಅಂದ್ರೆ ಆ ರೀತಿ ಗೌರವ ಕೊಡುತ್ತೇವೆ. ಹಾಗಾಗಿ ಆ ಅರ್ಥದಲ್ಲಿ ಟ್ವೀಟ್ ಮಾಡಿದ್ದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Karnataka Election : ಬಿಜೆಪಿಯವರು ಕರೆದಿಲ್ಲ, ಕರೆದಿದ್ದರೆ ಅವರ ಪ್ರಚಾರಕ್ಕೂ ಹೋಗ್ತಿದ್ದೆ ಎಂದ ಶಿವಣ್ಣ
“ಪ್ರತಾಪ್ ಸಿಂಹ, ಸೋಮಣ್ಣ ನನಗೆ ಆಪ್ತರು ಎಂದು ಶಿವಣ್ಣ ಹೇಳಿದ್ದಾರೆ. ಸೋಮಣ್ಣ ಅವರು ಅಲ್ಲಿ ನಿಂತಿರೋದು ಗೊತ್ತಿಲ್ಲ ಅಂದಿದ್ದಾರೆ. ಶಿವಣ್ಣಗೆ ಧನ್ಯವಾದ ಹೇಳುತ್ತೇನೆ. ಶಿವಣ್ಣ, ನಾವು ಯಾವತ್ತು ನಿಮ್ಮ ಅಭಿಮಾನಿಗಳೇ. ನಮ್ಮ ಗೌರವ ಪ್ರೀತಿ ಹೀಗೆ ಇರುತ್ತದೆ. ನೀವು ಕೂಡ ಒಳ್ಳೆಯ ರೀತಿಯಲ್ಲಿ ನಮಗೆ ಸ್ಪಂದಿಸಿದ್ದೀರಿ, ಧನ್ಯವಾದ” ಎಂದು ಪ್ರತಾಪ್ ಸಿಂಹ ಹೇಳಿದರು.