Site icon Vistara News

Karnataka Election : ನಾವು ರಾಜಕಾರಣಿಗಳು, ಕಾವಿ ಹಾಕಿಕೊಂಡಿಲ್ಲ; ಸಿಎಂ ಚರ್ಚೆಗೆ ಡಿಕೆಶಿಯಿಂದ ಮತ್ತದೇ ಉತ್ತರ

dk shivakumar next CM

ಕೊಲ್ಲೂರು (ಉಡುಪಿ): ʻʻನಾವು ರಾಜಕಾರಣಿಗಳು, ಕಾವಿ ಹಾಕಿಕೊಂಡಿಲ್ಲ, ಬಿಳಿ ಬಟ್ಟೆ ಹಾಕಿಕೊಂಡಿದ್ದೇವೆʼʼ- ಹೀಗೆಂದು ಹೇಳಿದ್ದಾರೆ ಡಿ.ಕೆ. ಶಿವಕುಮಾರ್‌ (dk shivakumar). ಕೊಲ್ಲೂರಿನಲ್ಲಿ ನವಚಂಡಿಕಾ ಯಾಗಕ್ಕೆ ಆಗಮಿಸಿದ್ದ ಅವರು ಈ ವೇಳೆ ಎದುರಾದ ಕಾಂಗ್ರೆಸ್‌ನ ಮುಂದಿನ ಸಿಎಂ ಚರ್ಚೆಗೆ (Karnataka Election) ಅವರು ಉತ್ತರ ನೀಡಿದರು.

ಒಂದು ವೇಳೆ ಕಾಂಗ್ರೆಸ್‌ ಗೆದ್ದರೆ ಸಿಎಂ ಯಾರಾಗಬೇಕು ಎನ್ನುವ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (dk shivakumar) ಅವರ ನಡುವೆ ಪೈಪೋಟಿ ಜೋರಾಗಿದೆ. ಡಿ.ಕೆ. ಶಿವಕುಮಾರ್‌ ಅವರು ಭಾನುವಾರ ಶೃಂಗೇರಿಯಲ್ಲಿ ಚಂಡಿಕಾ ಯಾಗ ನಡೆಸಿದ್ದರು. ಸೋಮವಾರ ಬೆಳಗ್ಗೆ ಕೊಲ್ಲೂರಿನಲ್ಲಿ ಪತ್ನಿ ಸಮೇತರಾಗಿ ಚಂಡಿಕಾ ಯಾಗ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಬೇಕು ಎನ್ನುವುದು ಡಿ.ಕೆ. ಶಿವಕುಮಾರ್‌ ಅವರ ಬೇಡಿಕೆಯಾಗಿದ್ದರೆ, ಇನ್ನೊಂದು ಕಡೆಯಲ್ಲಿ ತಾವೇ ಸಿಎಂ ಆಗಬೇಕು ಎನ್ನುವ ಅಮಿತವಾದ ಆಸೆಯನ್ನು ಹೊಂದಿದ್ದಾರೆ. ಅವರು ಅದನ್ನು ಬಹುತೇಕ ನೇರವಾಗಿಯೇ ಹೇಳಿಕೊಂಡಿದ್ದಾರೆ.

ಕೊಲ್ಲೂರು ಕ್ಷೇತ್ರದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್‌ ಹೇಳಿದ್ದು ಕೂಡಾ ಇದೇ ಮಾತನ್ನು. ಆದರೆ, ನೇರವಾಗಿ ಹೇಳದೆ ಮಾರ್ಮಿಕವಾಗಿ ಹೇಳಿದ್ದಾರೆ.

ʻʻಏನೇ ಒಳ್ಳೆಯ ಕೆಲ್ಸ, ಹೋರಾಟ, ಯುದ್ಧ ಮಾಡಬೇಕಾದರೆ ದೇವರ ಅನುಗ್ರಹ ಮುಖ್ಯ. ದೇವರ ಅನುಗ್ರಹ ಇಲ್ಲದೇ ಏನೂ ಆಗುವುದಿಲ್ಲ. ಕೊಲ್ಲೂರು ದೇವಿಯ ದರ್ಶನ ಮಾಡಬೇಕು ಅಂತ ಬಂದಿದ್ದೇನೆʼʼ ಎಂದು ಹೇಳಿದರು.

ʻʻನಿನ್ನೆ ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದೆ. ಹಿಂದೆಯೂ ಬಂದಿದ್ದೆ, ಆದರೆ ಇಷ್ಟೊಂದು ಉತ್ಸಾಹ ಇರಲಿಲ್ಲ. ಹಲವಾರು ಮಂದಿ ಕೇಸರಿ ಶಾಲು ಹಾಕಿ ಬಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅವರ ಆಸೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು ಎನ್ನುವುದುʼʼ ಎಂದರು ಡಿ.ಕೆ. ಶಿವಕುಮಾರ್‌. ರಾಹುಲ್‌ ಗಾಂಧಿ ಅವರು ಕೂಡಾ ಬೈಂದೂರು ಸೇರಿದಂತೆ ಕರಾವಳಿಯ ಹಲವು ಕಡೆ ಪ್ರಚಾರ ಮಾಡುತ್ತಾರೆ ಎಂದರು.

ʻʻಕರಾವಳಿಯಲ್ಲಿ ಈ ಬಾರಿ ಬಿಜೆಪಿಗೆ ಹಿಂದುತ್ವ ಫಲ ಕೊಡುವುದಿಲ್ಲ. ನಾವು ಮೂರು ಜಿಲ್ಲೆಗಳನ್ನು ಸೇರಿಸಿ 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್‌ ಅವರು, ʻʻನಾವು ಬಹುಕಿನ ಬಗ್ಗೆ ಮಾತಡುತ್ತೇವೆ, ಅವರು ಭಾವನೆ ಬಗ್ಗೆ ಮಾತಾಡುತ್ತಾರೆʼʼ ಎನ್ನುವುದನ್ನು ನೆನಪಿಸಿದರು.

ಲಿಂಗಾಯತ ಸಿಎಂ ಭ್ರಷ್ಟಾಚಾರ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ʻʻಸಿದ್ದರಾಮಯ್ಯ ಅವರು ಬೊಮ್ಮಾಯಿ ಅವರ ಕಾಲದಲ್ಲಿ ನಡೆದ ಭ್ರಷ್ಟಾಚಾರವನ್ನು ಉಲ್ಲೇಖಿಸಿ ಹೇಳಿದ್ದಾರೆ. ಬಸನಗೌಡ ಯತ್ನಾಳ್ ಏನು ಹೇಳಿದ್ದು? ಗೂಳಿಹಟ್ಟಿ ಹೇಳಿದ್ದು ಏನು? ವಿಶ್ವನಾಥ ಏನು ಹೇಳಿದ್ದು? ಬಿಜೆಪಿ ಭ್ರಷ್ಟ ಆಡಳಿತ ನಡೆಸಿದೆ ಎಂದಲ್ಲವೇ? ಸಿದ್ದರಾಮಯ್ಯ ಅವರು ಕೂಡಾ ಅದನ್ನೇ ಹೇಳಿದ್ದಾರೆʼʼ ಎಂದು ಸಮರ್ಥಿಸಿದರು.

ʻʻ40 ಪರ್ಸೆಂಟೇಜ್ ಆಡಳಿತವನ್ನು ನಡೆಸಿದೆ ಬಿಜೆಪಿ. ಎಲ್ಲದರಲ್ಲೂ ಕಮಿಷನ್ ಪಡೆಯೋದು ಬಿಜೆಪಿಯ ಆಡಳಿತ. ವೈಸ್ ಚಾನ್ಸುಲರ್ ನೇಮಕಾತಿಗೆ ಕಮಿಷನ್ ಕೊಡಲಾಗಿತ್ತು ಎಂದು ಸ್ವತಃ ಸಂಸದ ಪ್ರತಾಪ್ ಸಿಂಹ ಹೇಳಿದ್ದರುʼʼ ಎಂದು ನೆನಪಿಸಿದರು. ʻʻಬಿಜೆಪಿಯ ಕಟ್ಟೆ ಒಡೆದಿದೆ. ಲಿಂಗಾಯತ ಸಮುದಾಯ ಅಷ್ಟೇ ಅಲ್ಲ ಎಲ್ಲ ಸಮುದಾಯದವರು ಕಾಂಗ್ರೆಸ್ ಸೇರುತ್ತಾರೆʼʼ ಎಂದು ಹೇಳಿದರು ಡಿ.ಕೆ ಶಿವಕುಮಾರ್‌.

ಇದನ್ನೂ ಓದಿ : Karnataka Election: ಡಿಕೆಶಿ ಆಪ್ತನ ಬ್ಯಾಗ್‌ನಲ್ಲಿ 50 ಸಾವಿರ ರೂ. ಪತ್ತೆ; ಹೆಲಿಕಾಪ್ಟರ್‌ ತಪಾಸಣೆಗೆ ಶಿವಕುಮಾರ್‌ ಆಕ್ಷೇಪ

Exit mobile version