ದಾವಣಗೆರೆ: ನಾನು ಕಾಂಗ್ರೆಸ್ ಪಕ್ಷದ ನಾಯಕರನ್ನು ಟೀಕಿಸಿ ಸಮಯ ಹಾಳು ಮಾಡಿಕೊಳ್ಳುವುದಿಲ್ಲ. ಸಿಕ್ಕಿರುವ ಅವಕಾಶದಲ್ಲಿ ನಮ್ಮ ಸರ್ಕಾರದ ರಿಪೋರ್ಟ್ ಕಾರ್ಡ್ ಮಂಡಿಸಲು ಬಳಸಿಕೊಳ್ಳುತ್ತೇನೆ. ಭಾರತದಲ್ಲಿ ಬಡತನ ಶೇಕಡಾ 1 ಕ್ಕಿಂತ ಕಡಿಮೆ ಇದೆ. ಪ್ರತಿಯೊಬ್ಬರೂ ಆಹಾರವನ್ನು ಪಡೆಯುತ್ತಿದ್ದಾರೆ. ಯಾರೊಬ್ಬರೂ ಉಪವಾಸ ಮಲಗುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬಡತನದ ಪ್ರಮಾಣವನ್ನು ತಗ್ಗಿಸಿದೆ ಎಂಬ ಸಂದೇಶ ನೀಡಿದರು. ಬಿಜೆಪಿಯ ರಿಪೋರ್ಟ್ ಕಾರ್ಡ್ ನೀಡಿರುವ ನಡ್ಡಾ ವಿಧಾನಸಭಾ ಚುನಾವಣೆಗೆ (Karnataka Election) ಕಹಳೆ ಊದಿದರು.
ಅವರು ಇಲ್ಲಿನ ತ್ರಿಶೂಲ ಕಲಾಭವನದಲ್ಲಿ ಬಿಜೆಪಿ ಏರ್ಪಡಿಸಿದ್ದ ವೃತ್ತಿಪರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ 12 ಕೋಟಿ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ. ಈ ಮೂಲಕ ಮಹಿಳೆಯರು, ಮಕ್ಕಳು ಗೌರವದಿಂದ ಬದುಕುವಂತೆ ನೋಡಿಕೊಂಡಿದ್ದೇವೆ. 11 ಕೋಟಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರದ ಸಾಧನೆಯ ಪಟ್ಟಿಯನ್ನು ತೆರೆದಿಟ್ಟರು.
ವೃತ್ತಿಪರರ ಜತೆ ಮಾತನಾಡುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಕರ್ನಾಟಕದಲ್ಲಿ ಚುನಾವಣೆ ಬರುತ್ತಲಿದೆ. ಹೀಗಾಗಿ ಕಾರ್ಯಕರ್ತರೊಂದಿಗೆ ಮಾತನಾಡುವುದು, ಚರ್ಚೆ ನಡೆಸುವುದು ನನ್ನ ಜವಾಬ್ದಾರಿ ಕೂಡ ಆಗಿದೆ. ಪ್ರಧಾನಿಯಾಗಿ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ರಾಜಕೀಯ ಸಂಸ್ಕೃತಿಯಲ್ಲಿ ಬದಲಾವಣೆ ತಂದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | KYC Update | ಕೆವೈಸಿ ಅಪ್‌ಡೇಟ್ ಮಾಡಲು ಬ್ಯಾಂಕ್‌ಗೆ ಹೋಗಬೇಕಿಲ್ಲ: ಆರ್‌ಬಿಐ
ಯುಪಿಎ ಮತ್ತು ಬೆಂಬಲ ಪಕ್ಷಗಳು ಫ್ಯಾಮಿಲಿ ಪಾರ್ಟಿಗಳು ಆಗಿವೆ. ಅವರೆಲ್ಲ ವೋಟ್ ಬ್ಯಾಂಕ್ ಪಾಲಿಟಿಕ್ಸ್ ನಂಬಿಕೊಂಡು ಬಂದಿರುವವರು. ಆದರೆ, ಪ್ರಧಾನಿ ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಅಭಿವೃದ್ಧಿ ಮಾಡುತ್ತಿದ್ದಾರೆ. ಮೋದಿ ಜಾತಿ, ಧರ್ಮವೆಂದು ಎಂದೂ ರಾಜಕೀಯ ಮಾಡಿಲ್ಲ. ಡಬಲ್ ಇಂಜಿನ್ ಸರ್ಕಾರದ ರಿಪೋರ್ಟ್ ಕಾರ್ಡ್ ಬಂದಿದೆ. ನಾವು ಅಭಿವೃದ್ಧಿ ಮಾಡಿದ್ದೇವೆ, ನಾವು ಅಕೌಂಟೆಬಲ್ ಸರ್ಕಾರವನ್ನು ಜನರಿಗಾಗಿ ಕೊಟ್ಟಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಿದ್ದಾರೆ. ಕಾಶಿ ದರ್ಶನ ರೈಲು ವ್ಯವಸ್ಥೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್- ೨ ಲೋಕಾರ್ಪಣೆ, ಕೆಂಪೇಗೌಡ ಕಂಚಿನ ಪ್ರತಿಮೆ, ನವ ಮಂಗಳೂರು ಬಂದರಿನ ಹೊಸ ಟರ್ಮಿನಲ್ ಅನ್ನು ರೂಪಿಸಿದ್ದೇವೆ. ಇದು ಹಡಗು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತನ್ನು ನೀಡಲಿದೆ. ಹೀಗಾಗಿ ಜನತೆ ಬಿಜೆಪಿಯನ್ನು ಹಾಗೂ ನಮ್ಮ ಅಭಿವೃದ್ಧಿಯನ್ನು ಬೆಂಬಲಿಸಬೇಕು ಎಂದು ಜೆ.ಪಿ. ನಡ್ಡಾ ಹೇಳಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗುಜರಾತ್‌ನಿಂದ ಗೋವಾದವರೆಗಿನ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಕಾರಣ. ಆಯುಷ್ಮಾನ್ ಭಾರತ್ ಯೋಜನೆಗೆ ನಡ್ಡಾ ಅವರೇ ರೂವಾರಿ ಆಗಿದ್ದಾರೆ. ನಡ್ಡಾ ಅವರು ದಾವಣಗೆರೆಯಲ್ಲಿ ಪಾಂಚಜನ್ಯ ಮೊಳಗಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಇದು ಶಕ್ತಿ ಆಗಲಿದೆ. ನಡ್ಡಾ ಬೂತ್ ಮಟ್ಟದಲ್ಲಿ ಸಭೆ ಮಾಡಲಿದ್ದು, ಇದು ಕಾರ್ಯಕರ್ತರಿಗೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ಹೇಳಿದರು.
ಬೂತ್ ವಿಜಯ ಅಭಿಯಾನಕ್ಕೆ ಚಾಲನೆ
ಇದಕ್ಕೂ ಮೊದಲು ದಾವಣಗೆರೆ ದಕ್ಷಿಣದ ಹೊಂಡದ ಸರ್ಕಲ್ ಬಳಿ ಆಯೋಜನೆ ಮಾಡಿದ್ದ ಬೂತ್ ವಿಜಯ ಅಭಿಯಾನಕ್ಕೆ ಜೆ.ಪಿ. ನಡ್ಡಾ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಸರ್ಕಾರದ ಯೋಜನೆ ಬಗ್ಗೆ ಮಾಹಿತಿ ನೀಡಲು ಕರೆ ನೀಡಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವ ಬೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್, ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎಸ್.ವಿ.ರಾಮಚಂದ್ರಪ್ಪ, ಪ್ರೊ.ಲಿಂಗಣ್ಣ, ಮಾಡಳ್ ವಿರೂಪಾಕ್ಷಪ್ಪ, ಎಸ್.ಎ.ರವೀಂದ್ರನಾಥ್, ಎಂಎಲ್‌ಸಿ ನವೀನ್ ಭಾಗಿಯಾಗಿದ್ದರು.
ಇದನ್ನೂ ಓದಿ | Janardana Reddy | ಮಗಳು ಬ್ರಹ್ಮಣಿಯನ್ನು ರಾಜಕೀಯಕ್ಕೆ ಕರೆ ತರುತ್ತಾರಾ ಗಾಲಿ ಜನಾರ್ದನ ರೆಡ್ಡಿ?