ಕೋಲಾರ: ಇಲ್ಲಿನ ನಾಯಕರು ಹಾಗೂ ಮತದಾರರ ಒತ್ತಾಯದ ಮೇರೆಗೆ ಮುಂದಿನ ಚುನಾವಣೆಯಲ್ಲಿ (Karnataka Election) ನಾನು ಕೋಲಾರದಿಂದಲೇ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಈ ಮೂಲಕ ಮಾಜಿ ಮುಖ್ಯಮಂತ್ರಿಯೊಬ್ಬರ ಕ್ಷೇತ್ರ ಆಯ್ಕೆಯ ಗೊಂದಲಕ್ಕೆ ತೆರೆ ಬಿದ್ದಿದೆ. ಆದರೆ, ಅವರು ಇಲ್ಲೊಂದು ಆದರೆ.. ಎಂಬ ಷರತ್ತನ್ನು ಸಹ ಇಟ್ಟಿದ್ದಾರೆ. ಹೈಕಮಾಂಡ್ ಒಪ್ಪಬೇಕು ಎಂದು ಸಹ ಕೊನೆಯಲ್ಲಿ ಹೇಳಿದ್ದಾರೆ. ಈ ಮೂಲಕ ಆ ಭಾಗದ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್. ಮುನಿಯಪ್ಪ ಅವರ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ನಗರದ ಕುರುಬರ ಪೇಟೆಯಲ್ಲಿರುವ ಮಿನಿ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಕೋಲಾರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಕೆಲವರು ಅಪ ಪ್ರಚಾರ ಮಾಡಿದರು. ಸಿದ್ದರಾಮಯ್ಯರಿಗೆ ಕ್ಷೇತ್ರ ಇಲ್ಲ ಎಂದು ಟೀಕಿಸಿದರು. ಆದರೆ, ನನಗೆ ವರುಣ, ಬಾದಾಮಿ, ಕೋಲಾರ ಜನರು ಕರೆಯುತ್ತಿದ್ದರು. ಈಗ ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ. ನಿಮ್ಮ ಪ್ರೀತಿ, ಅಭಿಮಾನವನ್ನು ನಾನು ತಿರಸ್ಕರಿಸಲು ಸಾಧ್ಯ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಹೈಕಮಾಂಡ್‌ಗೆ ಬಿಟ್ಟಿದ್ದು
ಕೋಲಾರ ಭಾಗದ ಮುಖಂಡ, ಮಾಜಿ ಕೇಂದ್ರ ಸಚಿವರಾದ ಕೆ.ಎಚ್. ಮುನಿಯಪ್ಪ ಸಹ ಕೋಲಾರದಲ್ಲಿ ನನ್ನ ಸ್ಪರ್ಧೆಗೆ ಒಪ್ಪಿದ್ದಾರೆ. ಆದರೆ, ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದಾಗಿದೆ ಎಂದೂ ಸಹ ಸಿದ್ದರಾಮಯ್ಯ ಹೇಳಿದರು.
ಪಕ್ಷದ ನಾಯಕರು ಒತ್ತಾಯಿಸಿದ್ದಾರೆ
ಕಾಂಗ್ರೆಸ್ ಪಕ್ಷದ ನಾಯಕರಾದ ಕೆ.ಎಚ್. ಮುನಿಯಪ್ಪ, ನಜೀರ್, ಕೃಷ್ಣಭೈರೇಗೌಡ, ಶ್ರೀನಿವಾಸ್ ಗೌಡ ಅವರು ಸೇರಿದಂತೆ ಎಲ್ಲರೂ ನನ್ನ ಸ್ಪರ್ಧೆ ಬಗ್ಗೆ ಮಾತಾಡಿದ್ದಾರೆ. ರಮೇಶ್ ಕುಮಾರ್ ಅವರು ಮಾತನಾಡಿಲ್ಲ, ಅವರು ನನ್ನ ಸ್ನೇಹದಿಂದ ಮಾತನಾಡಿಲ್ಲ ಎಂದು ಅನ್ನಿಸುತ್ತದೆ. ಜನರ ಆಶೀರ್ವಾದ ಇದ್ದರೆ ಮಾತ್ರ ನಾವು ರಾಜಕೀಯದಲ್ಲಿ ಇರಲು ಸಾಧ್ಯ. ನಾಯಕರಿಗಿಂತ ಜನ ಮುಖ್ಯ ಆಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ನಾನು ಗೆದ್ದರೆ ಚಡ್ಡಿ ಹಾಕಿದವರು ಸಹ ನೇರವಾಗಿ ಬಂದು ನನ್ನನ್ನು ಭೇಟಿ ಮಾಡಬಹುದು. ನಾನು ಎಲ್ಲರ ಸೇವಕವಾಗಿ ರಾಜ್ಯದ ಎಲ್ಲರ ಅವಕಾಶ ವಂಚಿತರ ಸೇವಕನಾಗಿ ಕೆಲಸ ಮಾಡುವೆ. ಅಭಿವೃದ್ಧಿ ವಿಚಾರದಲ್ಲಿ ನಾನು ಹಿಂದೆ ಬಿದ್ದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ | Siddaramaiah Vs BJP | ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಗೆ ಕೋರ್ಟ್ ತಡೆ: ಟೌನ್ ಹಾಲ್ ಎದುರು ಭಾರಿ ಕೋಲಾಹಲ