ಬೆಂಗಳೂರು: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ (Hasana Politics) ನೀಡದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವ ಚಿಂತನೆ ನಡೆಸಲಾಗುತ್ತಿದೆ ಎಂಬ ವರಸೆ ಪ್ರದರ್ಶಿಸಿದ ಎಚ್.ಡಿ ರೇವಣ್ಣ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಿಮ್ಮ ಬ್ಲ್ಯಾಕ್‌ಮೇಲ್ ಕುಮಾರಸ್ವಾಮಿ ಮುಂದೆ ನಡೆಯಲ್ಲ ಎಂದು ನೇರವಾಗಿ ಹೇಳಿದ್ದಾರೆ.
ʻʻಪಕ್ಷೇತರ ಎಂಬ ಬ್ಲಾಕ್‌ಮೇಲ್ ನನ್ನ ಹತ್ರ ನಡೆಯಲ್ಲ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಒಬ್ಬ ಕಾರ್ಯಕರ್ತ ಎಂದು ನಾನು ನಿರಂತರವಾಗಿ ಹೇಳುತ್ತಿದ್ದೇನೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾರ್ಯಕರ್ತ ಯಾರು ಸಮರ್ಥವಾಗಿದ್ದಾರೆ ಅಂತ ನನಗೂ ಗೊತ್ತು, ನಿಮಗೂ ಗೊತ್ತು. ಕಾರ್ಯಕರ್ತರೇ ಯಾರಿಗೆ ಟಿಕೆಟ್ ಅಂತ ಹೆಸರು ಕೂಗುತ್ತಿದ್ದಾರೆ. ಟಿಕೆಟ್ ಯಾರಿಗೆ ಎನ್ನುವುದು ತೀರ್ಮಾನವಾಗಿದೆ. ಸದ್ಯದಲ್ಲೇ ಘೋಷಣೆ ಕೂಡಾ ಆಗಲಿದೆ. ಯಾವ ಆತಂಕವೂ ಬೇಡʼʼ ಎಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು ಹೇಳಿದರು.
ʻʻನನ್ನ ಪಕ್ಷದ ಜವಾಬ್ದಾರಿ ಬಳಿಕ ನನಗೆ ಕಾರ್ಯಕರ್ತ ಮುಖ್ಯ. ಎಲ್ಲರನ್ನೂ ಒಂದುಗೂಡಿಸಿ ಇಲ್ಲಿಯವರೆಗೂ ಉಳಿಸಿಕೊಂಡು ಬಂದಿದ್ದೇವೆ. ಅತ್ಯಂತ ತಾಳ್ಮೆಯಿಂದ ನಡೆದುಕೊಂಡಿದ್ದೇನೆ. ಯಾವುದೇ ಬ್ಲಾಕ್‌ಮೇಲ್‌ಗೆ ಹಿಂದೆ ಸರಿಯಲ್ಲ. ಪಕ್ಷೇತರವಾಗಿ ನಿಲ್ತೀನಿ ಅಂತ ದೇವೆಗೌಡರಿಗೆ ಎಮೋಷನಲ್ ಬ್ಲಾಕ್‌ಮೇಲ್ ಮಾಡಬಹುದು. ಅದೆಲ್ಲ ಈ ಕುಮಾರಸ್ವಾಮಿ ಹತ್ರ ನಡೆಯುವುದಿಲ್ಲʼʼ ಎಂದು ಹೇಳಿದರು ಕುಮಾರಸ್ವಾಮಿ.
ತೇಜಸ್ವಿ ಸೂರ್ಯ ಟೀಕೆಗೆ ಪ್ರತಿಯೇಟು
ಹಾಸನ ಟಿಕೆಟ್ ವಿಚಾರವಾಗಿ ತೇಜಸ್ವಿ ಸೂರ್ಯ ಟೀಕೆಗೂ ಎಚ್.ಡಿ. ಕುಮಾರಸ್ವಾಮಿ ಉತ್ತರ ಕೊಟ್ಟರು. ʻʻದೇವೆಗೌಡರ ಅಡುಗೆ ಮನೆಯಲ್ಲಿ ಟಿಕೆಟ್ ತಗೋಬಹುದು ಅಂತ ಹೇಳಿದ್ದೀರಲ್ಲ. ಹಾಗಿದ್ದರೆ ಯಾಕೆ ಇನ್ನೂ ತೆಗೆದುಕೊಳ್ಳಲು ಆಗಿಲ್ಲ? ಅಲ್ಲೇ ಉತ್ತರವೂ ಇದೆ. ಜೆಡಿಎಸ್‌ನಲ್ಲಿ ಟಿಕೆಟ್ ಪಡೆದುಕೊಳ್ಳುವುದು ಎಷ್ಟು ಕಠಿಣ ಅಂತ ಇದರಲ್ಲೇ ಗೊತ್ತಾಗುತ್ತದೆ. ಹಾಸನ ಟಿಕೆಟ್ ಬಗ್ಗೆ, ನನ್ನ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವ ಅವಶ್ಯಕತೆ ಇಲ್ಲ. ಮೊದಲು ನಿಮ್ಮ ನಿಮ್ಮ ಮನೆ ನೋಡ್ಕೊಳ್ಳಿ. ನೀವು ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಮನೆಗೆ ಕಲ್ಲು ಹೊಡೆಯುವ ಕೆಲಸ ಮಾಡಬೇಡಿ. ಮೊದಲು ಆ ಮನೆ ಉಳಿಸಿಕೊಳ್ಳುವುದನ್ನು ನೋಡ್ಕೊಳ್ಳಿ. ಜೆಡಿಎಸ್ ಅಳಿವು ಉಳಿವು ಜನ ನೋಡಿಕೊಳ್ಳುತ್ತಾರೆʼʼ ಎಂದರು.
ಅಮುಲ್ ಬೆನ್ನ ಹಿಂದೆ ಹೋದ ಬಿಜೆಪಿ
ರಾಜ್ಯದ ಕೆಎಂಎಫ್‌ನ ಎದುರು ಅಮುಲ್‌ನ್ನು ಬೆಳೆಸುವ ಪ್ರಯತ್ನ ಸಾಗುತ್ತಿದೆ ಎಂದು ಆರೋಪಿಸಿದ ಅವರು, ʻʻಬಿಜೆಪಿ ಸರ್ಕಾರಕ್ಕೆ ನಮ್ಮ ರಾಜ್ಯದ ಆಸ್ತಿ ಉಳಿಸುವಲ್ಲಿ ಜವಾಬ್ದಾರಿ ಇಲ್ಲ. ಕೆಎಂಎಫ್ ಬೆಳವಣಿಗೆಯನ್ನು ಕಡಿತಗೊಳಿಸಿ ಅಮುಲ್ ಮೇಲೆತ್ತುವ ಕೆಲಸಕ್ಕೆ ಹೋಗಿದ್ದಾರೆ. ಅಮುಲ್ ಸಂಸ್ಥೆಗೆ ಈ ಹಿಂದೆಯೇ ಜಾಗ ಕೊಟ್ಟಿದ್ದಾರೆ. ಯಾವ ಸರ್ಕಾರ, ಯಾವಾಗ ಕೊಟ್ಟಿರುವುದು ಎಂದು ಗೊತ್ತಿಲ್ಲ. ಅದೆಲ್ಲದರ ಪರಿಶೀಲನೆ ನಡೆಸುತ್ತಿದ್ದೇನೆʼʼ ಎಂದು ಅಮುಲ್ ವಿವಾದಕ್ಕೆ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ʻʻʻಪಕ್ಕದ ತಮಿಳುನಾಡಿನಿಂದ ಹಾಲು ತರಿಸಿ ಇಲ್ಲಿಂದಲೇ ಪ್ಯಾಕಿಂಗ್ ಮಾಡಿ ಕಳಿಸುವ ಹುನ್ನಾರ ಶುರು ಮಾಡಿದ್ದಾರೆ. ಈ ಸರ್ಕಾರಕ್ಕೆ ಯಾವುದೋ ನೇಮಕಾತಿಯಲ್ಲಿ ದುಡ್ಡು ಹೊಡೆಯುವ ಕೆಲಸ ಮಾಡುವುದರಲ್ಲೇ ಖುಷಿ. ಹಿಂದೆ 13 ಹಾಲು ಉತ್ಪಾದಕರ ಮಹಾಮಂಡಳಗಳು ನಷ್ಟದಲ್ಲಿದ್ದವು. ಇಂದು ಲಾಭದಾಯಕ ವಾತಾವರಣ ಸೃಷ್ಟಿ ಮಾಡಿದ್ದು ಕೆಎಂಎಫ್ ಅಧ್ಯಕ್ಷರಾಗಿದ್ದಾಗ ದೇವೆಗೌಡರು. ನಾಡಿನ ರೈತರಿಗೆ, ಹೆಣ್ಣುಮಕ್ಕಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡಲು ದೇವೆಗೌಡರ ನಿರ್ಧಾರ ಕಾರಣʼʼ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ : Karnataka Elections : ಸಿಎಂ ಸ್ಥಾನದ ಅವಕಾಶ ಖರ್ಗೆಗೆ ಬಿಟ್ಟು ಕೊಡಲು ರೆಡಿ ಎಂದ ಡಿಕೆಶಿ; ಏನಿದು ಹೊಸ ವರಸೆ