Site icon Vistara News

Karnataka Election : ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಶಕ್ತಿಪ್ರದರ್ಶನ

karnataka-election: Independent candidate puttila Road Show in puttur

karnataka-election: Independent candidate puttila Road Show in puttur

ಪುತ್ತೂರು: ರಾಜ್ಯಾದ್ಯಂತ ಭಾರಿ ಕುತೂಹಲ ಕೆರಳಿಸಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ (Karnataka Election 2023) ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅವರ ಶಕ್ತಿ ಪ್ರದರ್ಶನ ಸೋಮವಾರ ಪುತ್ತೂರು ಪೇಟೆಯಲ್ಲಿ ನಡೆಯಿತು. ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದು ಅರುಣ್‌ ಕುಮಾರ್‌ ಪುತ್ತಿಲ (Arun Kumar puttila) ಅವರು ಟಿಕೆಟ್‌ ಸಿಗದೆ ಬಂಡುಕೋರನಾಗಿ ಕಣಕ್ಕಿಳಿದಿದ್ದಾರೆ. ಇದೀಗ ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಬಲ ಸ್ಪರ್ಧೆಯ ನಡುವೆಯೂ ಅರುಣ್‌ ಪುತ್ತಿಲ ಅವರು ಏಕಾಂಗಿ ಹೋರಾಟ ನಡೆಸುತ್ತಿದ್ದು, ಸೋಮವಾರದ ಶಕ್ತಿ ಪ್ರದರ್ಶನ ಸಾಕಷ್ಟು ಕುತೂಹಲ ಕೆರಳಿಸಿದೆ.

ಪುತ್ತೂರಿನಲ್ಲಿ ನಡೆದ ಪುತ್ತಿಲ ಅವರ ರೋಡ್‌ಶೋದಲ್ಲಿ (Puttur Road Show) ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು. ಬಹುತೇಕ ಎಲ್ಲರೂ ಕೇಸರಿ ಶಾಲು, ರುಮಾಲು ಧರಿಸಿ, ಕೇಸರಿ ಬಾವುಟ ಹಿಡಿದುಕೊಂಡು ಬಂದು ರೋಡ್‌ ಶೋನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಬಿಜೆಪಿಗೆ ಸಡ್ಡು ಹೊಡೆದ ಪುತ್ತಿಲ ಅವರಿಗೆ ಭಾರಿ ಜನಬೆಂಬಲ ಇರುವುದು ಇಲ್ಲಿ ಸ್ಪಷ್ಟವಾಯಿತು.

ಪುತ್ತೂರಿನಲ್ಲಿ ನಡೆದ ರೋಡ್‌ ಶೋನಲ್ಲಿ ಮಹಿಳೆಯರೂ ಭಾಗವಹಿಸಿದ್ದರು.

ಪುತ್ತೂರು ಕ್ಷೇತ್ರದಲ್ಲಿ ಈ ಬಾರಿ ಶಾಸಕರಾಗಿದ್ದ ಸಂಜೀವ ಮಠಂದೂರು ಅವರಿಗೆ ಟಿಕೆಟ್‌ ನೀಡಲಾಗಿಲ್ಲ. ಸಂಜೀವ ಮಠಂದೂರು ಅವರು ಹಿಂದು ಸಂಘಟನೆಗಳಿಗೆ ಅಷ್ಟೊಂದು ಬೆಂಬಲ ನೀಡುತ್ತಿಲ್ಲ. ಹೀಗಾಗಿ ಸಂಘ ಪರಿವಾರ ಅವರ ಮೇಲೆ ಸಿಟ್ಟಾಗಿದೆ ಎಂಬ ಆಪಾದನೆಗಳಿದ್ದವು. ಹೀಗಾಗಿ ಈ ಬಾರಿ ಕಳೆದ ಹಲವಾರು ವರ್ಷಗಳಿಂದ ಹಿಂದು ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದ, ಹಿಂದು ಜಾಗರಣ ವೇದಿಕೆಯಲ್ಲಿ ಸಕ್ರಿಯರಾಗಿದ್ದ ಅರುಣ್‌ ಕುಮಾರ್‌ ಪುತ್ತಿಲ ಅವರಿಗೆ ಟಿಕೆಟ್‌ ಸಿಗಬಹುದು ಎಂಬ ಚರ್ಚೆ ಇತ್ತು. ಆದರೆ, ಟಿಕೆಟ್‌ ಪ್ರಕಟವಾದಾಗ ಅದು ಮೂಲತಃ ಸುಳ್ಯದವರಾದ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರ ಪಾಲಾಗಿತ್ತು.

ಇದರಿಂದ ಕೆರಳಿದ ಅರುಣ್‌ ಕುಮಾರ್‌ ಪುತ್ತಿಲ ಅವರು ಅಭಿಮಾನಿಗಳ ಒತ್ತಡದಿಂದ ಪಕ್ಷೇತರನಾಗಿ ಕಣಕ್ಕಿಳಿದಿದ್ದಾರೆ. ಕ್ರಿಕೆಟ್‌ ಬ್ಯಾಟ್‌ ಚಿಹ್ನೆಯನ್ನು ಪಡೆದಿರುವ ಅವರು, ನಾನು ಮೋದಿ ಅನುಯಾಯಿ, ಹಿಂದೂ ಹೋರಾಟಗಾರ ಎಂದೇ ಘೋಷಿಸುತ್ತಾ ಮತ ಯಾಚನೆ ಮಾಡುತ್ತಿದ್ದಾರೆ. ಪುತ್ತಿಲ ಅವರು ಬಿಜೆಪಿ ಮತ ಬ್ಯಾಂಕ್‌ಗೇ ಕೈ ಹಾಕುತ್ತಿರುವುದರಿಂದ ಕಮಲ ಪಾಳಯ ಮತ್ತು ಸಂಘ ಪರಿವಾರದ ಮುಖಂಡರು ಆಕ್ರೋಶಿತರಾಗಿದ್ದಾರೆ. ಒಂದು ಹಂತದಲ್ಲಿ ಹಿಂದೂ ಜಾಗರಣ ವೇದಿಕೆಯ ನಾಯಕ ಜಗದೀಶ್‌ ಕಾರಂತ ಅವರನ್ನು ಕರೆಸಿ ಬುದ್ಧಿವಾದ ಹೇಳಿಸಿದರೂ ಪುತ್ತಿಲ ಕೇಳಿಲ್ಲ. ಇದೀಗ ಆರೆಸ್ಸೆಸ್‌ನಲ್ಲಿ ಕರಾವಳಿಯ ಪರಮೋಚ್ಛ ನಾಯಕ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಯಾವ ಕಾರಣಕ್ಕೂ ಹಿಂದೂಗಳು ಪುತ್ತಿಲ ಅವರಿಗೆ ಮತ ಕೊಡಬಾರದು ಎಂದು ಸೂಚನೆ ನೀಡಿದ್ದಾರೆ.

ಆದರೆ, ಸಂಘ ಪರಿವಾರದಲ್ಲಿರುವ ಯುವ ಸಮುದಾಯ ಮಾತ್ರ ಪುತ್ತಿಲ ಪರವಾಗಿ ನಿಂತಿರುವುದು ಕಂಡುಬರುತ್ತಿದೆ. ಬೀದಿ ಕಾಳಗಕ್ಕಿಳಿಯುವ ಪರಿವಾರದ ಯುವಕರಿಗೆ ಪುತ್ತಿಲರಂತೆ ಸಮಸ್ಯೆಯಾಗುವ ಅಪಾಯವಿದೆ ಎಂಬ ಸಂದೇಶ ರವಾನೆಯಾಗಿರುವುದರಿಂದ ಅವರೆಲ್ಲ ಪುತ್ತಿಲ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ.

ಪುತ್ತಿಲ ಅವರ ಬಂಡಾಯದಿಂದ ಖುಷಿಯಾಗಿರುವುದು ಕಾಂಗ್ರೆಸ್‌ಗೆ. ಪುತ್ತಿಲ ಅವರು ಬಿಜೆಪಿ ಮತ ಕೋಟೆಗೇ ಲಗ್ಗೆ ಇಡುವುದರಿಂದ ತನಗೆ ಗೆಲುವು ಖಚಿತ ಎಂಬ ಭಾವನೆಯಲ್ಲಿ ಕಾಂಗ್ರೆಸ್‌ ಓಡಾಡುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಅವರು ಹಿಂದೆ ಹಿಂದು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಹೀಗಾಗಿ ಅಲ್ಲಿಂದ ಸ್ವಲ್ಪ ಮತಗಳು ಕಾಂಗ್ರೆಸ್‌ಗೆ ಬೀಳಬಹುದು ಎಂಬ ನಿರೀಕ್ಷೆಯಲ್ಲೂ ಪಕ್ಷ ಇದೆ.

ಇದೆಲ್ಲದರ ನಡುವೆ, ಅರುಣ್‌ ಕುಮಾರ್‌ ಪುತ್ತಿಲ ಅವರೇ ಗೆಲ್ಲುತ್ತಾರೆ ಎನ್ನುವ ನಂಬಿಕೆಯೂ ಅವರ ಅಭಿಮಾನಿಗಳ ವಲಯದಲ್ಲಿ ಜೋರಾಗಿದೆ. ಪುತ್ತಿಲ ಅವರು ಗೆಲ್ಲಬೇಕಾದರೆ ಸುಮಾರು 70ಕ್ಕಿಂತಲೂ ಅಧಿಕ ಮತಗಳನ್ನು ಪಡೆಯಬೇಕಾಗುತ್ತದೆ. ಅದೇ ಬಿಜೆಪಿಯನ್ನು ಸೋಲಿಸಬೇಕಾದರೂ ಕನಿಷ್ಠ ಮೂವತ್ತು ಸಾವಿರ ಮತಗಳನ್ನು ಬಿಜೆಪಿಯಿಂದ ಕಸಿಯಬೇಕು ಎನ್ನುವ ಲೆಕ್ಕಾಚಾರಗಳು ಇವೆ. ಈ ಹಿಂದೆ ಶಕುಂತಲಾ ಶೆಟ್ಟಿ ಅವರು ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ನಿಂತಿದ್ದರು. ಆಗಲೂ ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆವತ್ತು ಅವರು 25000 ಮತಗಳನ್ನು ಪಡೆದಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಮಲ್ಲಿಕಾ ಪ್ರಸಾದ್‌ ಅವರೇ ಗೆದ್ದಿದ್ದರು. ಈ ಬಾರಿ ಏನಾಗುತ್ತದೆ ಎಂಬ ಕುತೂಹಲ ಜೋರಾಗಿದೆ.

ಇದನ್ನೂ ಓದಿ : Karnataka Election : ಬಿಜೆಪಿ ಬಿಟ್ಟರೆ ನಿಮಗೆ ಅಸ್ತಿತ್ವವೇ ಇಲ್ಲ; ಪುತ್ತಿಲ ವಿರುದ್ಧ ಹರಿಹಾಯ್ದ ಕಲ್ಲಡ್ಕ ಪ್ರಭಾಕರ ಭಟ್‌

Exit mobile version